ಅಖಂಡಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾಗಿದ್ದ ಸ್ವಾಮಿ ಅಖಂಡಾನಂದರು, ರಾಮಕೃಷ್ಣ ಮಹಾಸಂಘದ ಮೂರನೇ ಅಧ್ಯಕ್ಷರಾಗಿದ್ದರು.

ಜೀವನ[ಬದಲಾಯಿಸಿ]

ಸ್ವಾಮಿ ಅಖಂಡಾನಂದರು ಸೆಪ್ಟೆಂಬರ್ ೩೦ ೧೮೬೪ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ಅವರ ಮೊದಲ ಹೆಸರು ಗಂಗಾಧರ ಘಟಕ. ಬಾಲ್ಯದಿಂದಲೂ ಆಧ್ಯಾತ್ಮಿಕ ಪ್ರವೃತ್ತಿಯ ಗಂಗಾಧರ ಪ್ರತಿನಿತ್ಯ ಪಾರಾಯಣ-ಧ್ಯಾನ ಮಾಡುತ್ತಿದ್ದ. ೧೮೮೪ರಲ್ಲಿ ತನ್ನ ಮಿತ್ರ ಹರಿನಾಥನೊಂದಿಗೆ ಶ್ರೀರಾಮಕೃಷ್ಣರನನ್ನು ನೋಡಲು ಗಂಗಾಧರ ಬಂದನು - ಅಂದಿನಿಂದ ಶ್ರೀರಾಮಕೃಷ್ಣದೊಡನೆ ಆತ್ಮೀಯ ಸಂಬಂಧ ಗಂಗಾಧರನಿಗಾಯಿತು. ಗಂಗಾಧರನ ಅತಿ ಆಚಾರವನ್ನು ನೋಡಿ ರಾಮಕೃಷ್ಣರು ’ನೀನು ಪೂರ್ವಕಾಲದವನು’ ಎಂದು ಹಾಸ್ಯ ಮಾಡುತ್ತಿದ್ದರು!! ಇದನ್ನು ಸರಿಪಡಿಸಲು, ನರೇಂದ್ರನ (ಮುಂದೆ ಸ್ವಾಮಿ ವಿವೇಕಾನಂದ) ಪರಿಚಯವನ್ನು ಅವನಿಗೆ ಮಾಡಿದರು. ಹೀಗೆ ಗಂಗಾಧರ-ನರೇಂದ್ರರ ಆಜೀವನ ಗೆಳೆತನ ಉಂಟಾಯಿತು. ರಾಮಕೃಷ್ಣರ ಸಮಾಧಿಯ ನಂತರ ಗಂಗಾಧರನು ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ’ಸ್ವಾಮಿ ಅಖಂಡಾನಂದ’ ಎಂಬ ಹೆಸರನ್ನು ಪಡೆದನು. ಅಖಂಡಾನಂದರು ಕಠಿಣವಾದ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿಕೊಂಡರು. ಪರಿವ್ರಾಜಕ ಸಂನ್ಯಾಸಿಯಾಗಿ ಮೂರು ವರ್ಷಗಳಕಾಲ ಹಿಮಾಲಯದಲ್ಲಿ ಸಂಚರಿಸಿ, ಮೂರು ಬಾರಿ ಟಿಬೇಟಕ್ಕೆ ಹೋಗಿ ಬಂದರು. ಅವರ ಈ ಪ್ರವಾಸಾನುಭವದಿಂದಾಗಿ ವಿವೇಕಾನಂದರು ಹಿಮಾಲಯದಲ್ಲಿ ಸಂಚರಿಸುವಾಗ ಅಖಂಡಾನಂದರನ್ನು ತಮ್ಮ ಮಾರ್ಗದರ್ಶಕರನ್ನಾಗಿ ಮಾಡಿಕೊಂಡರು. ಬಡವರ ಕಲ್ಯಾಣಕ್ಕಾಗಿ ಮತ್ತು ಅನಕ್ಷರಸ್ಥರ ಉದ್ಧಾರಕ್ಕಾಗಿ ಏನನ್ನಾದರೂ ಮಾಡಬೇಕೆಂಬ ವಿವೇಕಾನಂದರ ಮಾತಿನಿಂದ ಸ್ಪೂರ್ತಿಪಡೆದು ರಾಜಸ್ಥಾನದ ಖೇತರಿ ಮತ್ತು ಉದಯಪುರಗಳಲ್ಲಿ ಅಖಂಡಾನಂದರು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯವಸ್ಥೆ ಮಾಡಿದರು. ಇದು ವಿವೇಕಾನಂದರಿಗೆ ಅತಿ ಪ್ರೀತಿಯನ್ನುಂಟು ಮಾಡಿತು. ನಂತರ ಬರ-ಪರಿಹಾರಾರ್ಥವಾಗಿ ಬಂಗಾಲದ ಮುರ್ಷಿದಾಬಾದಿನ ಸರ್ಗಾಚಿ ಎಂಬಲ್ಲಿಗೆ ತೆರಳಿದ ಅವರು, ಅಲ್ಲಿಯೇ ಒಂದು ಆಶ್ರಮವನ್ನು ತೆರೆದರು. ಅಲ್ಲಿಯ ಮಕ್ಕಳಿಗೆ ಊಟ-ಬಟ್ಟೆ ಓದುವದು ಭಜನೆಮಾಡುವದು ಮುಂತಾದವನ್ನು ಕಲಿಸಿದರು. ಆಶ್ರಮದ ಪರವಾಗಿ ಎರಡು ರಾತ್ರಿಶಾಲೆಗಳನ್ನು ಪ್ರಾರಂಭಿಸಿದರು. ಒಂದು ವೃತ್ತಿಶಾಲೆಯನ್ನು ಪ್ರಾರಂಭಿಸಿ ನೇಯ್ಗೆ, ಹೊಲಿಗೆ, ಬಡಗಿ ಕೆಲಸ ಕಲಿಸಿದರು. ಮಕ್ಕಳಲ್ಲಿ ಸೇವಾಭಾವವನ್ನು ಬಿತ್ತಿದರು. ಗೋಘಾ ಎಂಬಲ್ಲಿ ಪ್ರವಾಹದಿಂದ ಜನ ಪೀಡಿತರಾದಾಗ ಅಲ್ಲಿ ಒಂದು ಪರಿಹಾರ ಕೇಂದ್ರವನ್ನು ತೆರೆದರು. ಸ್ವತಃ ತಾವೇ ಕಾಲರಾ ರೋಗಿಗಳ ಚಿಕಿತ್ಸೆ ನಡೆಸಿದರು. ೧೯೩೪ರಲ್ಲಿ ಬಿಹಾರದ ಭೂಕಂಪವಾದಾಗ ತಮ್ಮ ಹಿರಿಯ ವಯಸ್ಸನ್ನೂ ಲೆಕ್ಕಿಸದೇ ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡರು. ಸ್ವಾಮಿ ಶಿವಾನಂದರ ಸಮಾಧಿಯ ನಂತರ ಇವರು ರಾಮಕೃಷ್ಣ ಸಂಘದ ಅಧ್ಯಕ್ಷರಾದರು. ಇವರ ಕಠಿಣವಾದ ಆಧ್ಯಾತ್ಮಿಕ ಜೀವನ ಮತ್ತು ಶಾಸ್ತ್ರಪಾಂಡಿತ್ಯ ಇತರರಿಗೆ ಮಾದರಿಯಾಗಿತ್ತು. ೧೯೩೭ಫೆಬ್ರುವರಿ ೭ರಂದು ಇವರು ಬ್ರಹ್ಮಲೀನರಾದರು.

ಬೋಧನೆಗಳು[ಬದಲಾಯಿಸಿ]

  • ಪ್ರಸಕ್ತ ಕಾಲಕ್ಕೆ ಆಧ್ಯಾತ್ಮಿಕ ಮಾರ್ಗವೆಂದರೆ, ಹಿಂದಿನ ಎಲ್ಲ ಮಾರ್ಗಗಳ ಸಮನ್ವಯ. ಜ್ಞಾನ ಸಮನ್ವಯ - ಭಕ್ತಿ ಮತ್ತು ನಿಷ್ಕಾಮ ಕರ್ಮ. ನಾವು ಜ್ಞಾನವಂತರಾಗಿರುಬೇಕು, ನಿಷ್ಕಾಮ ಕರ್ಮಿಗಳಾಗಿರ ಬೇಕು ಮತ್ತು ಭಕ್ತರಾಗಿರಬೇಕು. ಕೇವಲ ಒಂದರಿಂದ ಈಗ ಕಾರ್ಯ ನಡೆಯದು.
  • ಕೆಲಸ ಮಾಡುವಾಗ ಯಾವ ಕಾರ್ಯವನ್ನೂ ಕೀಳೆಂದು ಕಡೆಗಣಿಸದಿರಿ. ಎಲ್ಲ ಕಾರ್ಯಗಳು ಭಗವದರ್ಪಿತ. ವಿವೇಕಾನಂದರು ಸ್ವತಃ ಪಾತ್ರೆಗಳನ್ನು ತೊಳೆಯುತ್ತಿದ್ದರು. ಕಸ ಗುಡಿಸುವಾಗ, ತರಕಾರಿ ಹೆಚ್ಚುವಾಗ - ಇವೆಲ್ಲ ಭಗವಂತನ ಕಾರ್ಯವೆಂದು ತಿಳಿದು ಮಾಡಿ.

ಆಸಕ್ತಿಕರ ಮಾಹಿತಿ[ಬದಲಾಯಿಸಿ]

  • "ನನಗೆ ಕಾಮ ಬೇಕಾಗಿಲ್ಲ, ರಾಜ್ಯ ಬೇಕಾಗಿಲ್ಲ, ಸ್ವರ್ಗ ಸುಖ ಬೇಕಾಗಿಲ್ಲ. ದುಃಖಕ್ಕೆ ಸಿಕ್ಕಿರುವ ಜನರ ವ್ಯಥೆಯನ್ನು ಶಮನಮಾಡಬೇಕೆಂಬುದನ್ನು ಮಾತ್ರ ನಾನು ಬಯಸುತ್ತೇನೆ" ಎಂದು ಭಾಗವತದಲ್ಲಿ ಬರುವ ಪ್ರಹ್ಲಾದನ ಪ್ರಾರ್ಥನೆಯನ್ನು ಸ್ವಾಮಿಗಳು ಮೆಲುಕು ಹಾಕುತ್ತಿದ್ದರು. ಮತ್ತು ಅದು ಅವರ ಜೀವನಾದರ್ಶವೂ ಆಗಿತ್ತು.
  • ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷರಾಗಿದ್ದ ಗುರೂಜಿ ಮಾಧವ ಗೋಳ್ವಲಕರ್‍ ಅವರು ಸ್ವಾಮಿ ಅಖಂಡಾನಂದರಿಂದ ಮಂತ್ರದೀಕ್ಷೆ ಪಡೆದು, ಅವರು ಶಿಷ್ಯರಾಗಿದ್ದರು.