ಗೌಡಪಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌಡಪಾದ
ಆದಿ ಗುರು ಶ್ರೀ ಗೌಡಪಾದಾಚಾರ್ಯ.
ಗೌರವಗಳುಶ್ರೀ ಗೌಡಪಾದಾಚಾರ್ಯ ಮಠದ ಸ್ಥಾಪಕ(ಕವಳೆ ಮಠ)
ತತ್ವಶಾಸ್ತ್ರಭಾರತೀಯ ತತ್ವ ಶಾಸ್ತ್ರದ ಅದ್ವೈತ ವೇದಾಂತ ಪರಂಪರೆ


ಗೌಡಪಾದರು (ಸುಮಾರು ಕ್ರಿ.ಶ. ೮ನೇ ಶತಮಾನ) (ಶ್ರೀ ಗೌಡಪಾದಾಚಾರ್ಯ ಎಂದೂ ನಿರ್ದೇಶಿಸಲಾಗುವ) ವೈದಿಕ ತತ್ವಶಾಸ್ತ್ರಅದ್ವೈತ ವೇದಾಂತ ಪರಂಪರೆಯ ಸಂಪ್ರದಾಯದಲ್ಲಿ ಒಬ್ಬ ಮುಂಚಿನ ಗುರುಗಳಾಗಿದ್ದರು. ಸಾಂಪ್ರದಾಯಿಕವಾಗಿ ಅವರು, ವೈದಿಕ ತತ್ವಶಾಸ್ತ್ರದಲ್ಲಿನ ಅತ್ಯಂತ ಪ್ರಮುಖ ವ್ಯಕ್ತಿಗಳ ಪೈಕಿ ಒಬ್ಬರಾದ, ಮಹಾನ್ ಶಿಕ್ಷಕ ಆದಿ ಶಂಕರರ ಮಹಾಗುರು ಎಂದು ಹೇಳಲಾಗಿದೆ. ಅವರು ಶ್ರೀ ಗೌಡಪಾದಾಚಾರ್ಯ ಮಠದ ಸ್ಥಾಪಕರು ಮತ್ತು ಮಾಂಡೂಕ್ಯ ಕಾರಿಕಾದ ಲೇಖಕ ಅಥವಾ ಸಂಕಲಕ ಎಂದು ನಂಬಲಾಗಿದೆ.

ವಿದ್ವತ್ತು[ಬದಲಾಯಿಸಿ]

ಶಂಕರಾಚಾರ್ಯರ ಗುರುಗಳಾದ ಗೋವಿಂದಪಾದರ ಗುರು. ಕಾಲ ಬಹುಶಃ ಏಳನೆಯ ಶತಮಾನದ ಅಂತ್ಯ ಇಲ್ಲವೆ ಎಂಟನೆಯ ಶತಮಾನದ ಆದಿ. ಶಂಕರಾದ್ವೈತಕ್ಕೆ ಆಧಾರವಾದ ಮುಖ್ಯ ಭಾವನೆಗಳೆಲ್ಲ ಇವರು ರಚಿಸಿದ ಮಾಂಡೂಕ್ಯಕಾರಿಕೆಯಲ್ಲಿ ಅಡಗಿವೆ. ಈ ಕಾರಿಕೆ ಮಾಂಡೂಕ್ಯೋಪನಿಷತ್ತಿನ ಆಧಾರದ ಮೇಲೆ ರಚಿತವಾದ್ದು. ಇವರು ಉತ್ತರಗೀತೆಯ ಮೇಲೂ ಒಂದು ವ್ಯಾಖ್ಯಾನವನ್ನು ಬರೆದಿದ್ದರೆಂದು ತಿಳಿದುಬರುತ್ತದೆ. ಈಗ ಉಪಲಬ್ಧವಿರುವುದು ಇವರ ಕಾರಿಕೆ ಮಾತ್ರ.

ಗೌಡಪಾದರ ಕಾಲದಲ್ಲಿ ಮಾಧ್ಯಮಿಕ ತತ್ತ್ವ ತುಂಬ ಪ್ರಬಲವಾಗಿತ್ತು. ಇವರು ಅದರ ಕೆಲವು ಭಾವನೆಗಳನ್ನು ಉಪನಿಷತ್ತಿನ ತತ್ತ್ವಕ್ಕೆ ಅಳವಡಿಸಿಕೊಂಡು ಹೊಸ ತತ್ತ್ವವನ್ನು ಸ್ಥಾಪಿಸಿದರು. ಅದರಲ್ಲಿ ಇವರು ಬೌದ್ಧರ ವಿಜ್ಞಾನವಾದವನ್ನೂ ಶೂನ್ಯವಾದವನ್ನೂ ಖಂಡಿಸಿ ಬ್ರಹ್ಮವೊಂದೇ ಸತ್ಯವೆಂದು ಸಾರಿರುತ್ತಾರೆ. ಇವರು ಆ ಸತ್ಯವನ್ನು ಶ್ರುತಿಯ ಆಧಾರದ ಮೇಲಲ್ಲದೆ ತರ್ಕಸಮ್ಮತವಾಗಿ ಬೆಳೆಸಿರುತ್ತಾರೆ. ಇವರ ತತ್ತ್ವ ಮಾಧ್ಯಮಿಕ ತತ್ತ್ವದಲ್ಲಿ ಸಾರಭೂತವಾದುದನ್ನು ಉಪನಿಷತ್ತಿನ ತತ್ತ್ವಕ್ಕೆ ಅಧೀನ ಮಾಡಿಕೊಂಡು ಬೌದ್ಧರ ಪ್ರಚಾರವನ್ನು ದುರ್ಬಲಗೊಳಿಸಿತು.

ಮಾಂಡೂಕ್ಯ ಕಾರಿಕೆ[ಬದಲಾಯಿಸಿ]

ಇವರ ಕಾರಿಕೆಯಲ್ಲಿ ನಾಲ್ಕು ಅಧ್ಯಾಯಗಳಿವೆ. ಮೊದಲನೆಯದಾದ ಆಗಮಾಧ್ಯಾಯದಲ್ಲಿ ಮಾಂಡೂಕ್ಯೋಪನಿಷತ್ತಿನ ಪಾಠವನ್ನು ಅದ್ವೈತ ತತ್ವಕ್ಕೆ ಆಧಾರ ಮಾಡಿಕೊಂಡಿರುತ್ತಾರೆ. ಎರಡನೆಯದಾದ ವೈತಥ್ಯ ಅಧ್ಯಾಯದಲ್ಲಿ ಆ ಶ್ರುತಿವಾಕ್ಯಗಳು ಹೇಗೆ ತರ್ಕಕ್ಕೆ ಸಂಗತವಾಗಿವೆಯೆಂದು ತೋರಿಸಿರುತ್ತಾರೆ. ಅದರಲ್ಲಿ ಇವರು ಭೇದಗಳಿಂದ ಕೂಡಿದ ವಿಶ್ವ ಪರಮಸತ್ಯವಾಗಲಾರದೆಂದು ವಾದಿಸಿರುತ್ತಾರೆ. ಮೂರನೆಯದು ಅದ್ವೈತಾಧ್ಯಾಯ. ಅದರಲ್ಲಿ ಅದ್ವೈತವೇ ಪರಮಸತ್ಯವೆಂದು ಸ್ಥಾಪಿಸಿರುತ್ತಾರೆ. ಕೊನೆಯದಾದ ಅಲಾತಶಾಂತಿ ಅಧ್ಯಾಯದಲ್ಲಿ ತಿರುಗಿಸುತ್ತಿರುವ ಕೊಳ್ಳಿಯಿಂದ ಹುಟ್ಟಿದ ಚಕ್ರಾಕಾರವಾದ ಒಂದು ಬೆಳಕು ತೋರಿಕೆಯಾದಂತೆ ವಿಶ್ವವೂ ಒಂದು ತೋರಿಕೆ ಎಂದು ಪರಿಸಮಾಪ್ತಿ ಮಾಡಿರುತ್ತಾರೆ.

ಮೊದಲನೆಯ ಅಧ್ಯಾಯದಲ್ಲಿ, ಮಾಂಡೂಕ್ಯೋಪನಿಷತ್ತಿನಲ್ಲಿ ಹೇಳಿರುವಂತೆ ಸ್ವಪ್ನ, ಜಾಗೃತ, ಸುಷುಪ್ತಿ, ತುರೀಯ ಎಂಬ ಜೀವನದ ನಾಲ್ಕು ಅವಸ್ಥೆಗಳ ಆಧಾರದ ಮೇಲೆ ಅವುಗಳಿಗೆ ಸಾಪೇಕ್ಷವಾದ ಶಕ್ತಿ ಸ್ವರೂಪವನ್ನು ತಿಳಿಸಿರುತ್ತದೆ. ಈ ಒಂದೊಂದೂ ಒಂದೊಂದು ವಿಶಿಷ್ಟವಾದ ವಿಶ್ವವನ್ನು ಪ್ರಕಾಶಿಸುತ್ತಿದೆ. ಅವುಗಳಲ್ಲೂ ಒಂದು ಕ್ರಮವಿದೆ. ಅವೂ ಒಂದು ರೀತಿಯಲ್ಲಿ ಫಲಕಾರಿಗಳು. ಸತ್ತಿನ ಅಂಶವಿರುವ ಯಾವುದೂ ಫಲಕಾರಿಯಾಗದಿರದು. ಸ್ವಪ್ನದಲ್ಲಿನ ನೀರೂ ದಾಹವನ್ನು ಅಡಗಿಸುತ್ತದೆ, ಅಲ್ಲಿನ ಹೆಂಗಸೂ ಕಾಮವನ್ನು ತೃಪ್ತಿಗೊಳಿಸುತ್ತಾಳೆ. ಆ ನೀರು, ಆ ಹೆಂಗಸು ಜಾಗೃತ್ ಪ್ರಪಂಚದ ವಸ್ತುವಾಗದಿದ್ದ ಮಾತ್ರಕ್ಕೆ, ಆ ಪ್ರಪಂಚದ ವಸ್ತುಗಳು ರೂಢಿಗೆ ಸಂಗತವಾಗಿಲ್ಲದಿರುವ ಮಾತ್ರಕ್ಕೆ ಅವು ಅಸತ್ತಲ್ಲ. ಸತ್ತಿನ ಆಶ್ರಯವಿಲ್ಲದ ಯಾವ ಅನುಭಾವವೂ ಇಲ್ಲ. ಅದ್ವಿತೀಯವಾದ ಸತ್ತೇ ಎಲ್ಲ ಅನುಭವಗಳಲ್ಲೂ ಆಯಾ ಅನುಭವದ ಯೋಗ್ಯತಾನುಸಾರವಾಗಿ ಅಭಿವ್ಯಕ್ತವಾಗುತ್ತದೆ ಎಂಬುದನ್ನೂ ಸತ್ತಿನ ಅದ್ವಿತೀಯತೆಯನ್ನೂ ಭಾವರೂಪವನ್ನೂ ತೋರಿಸಿದ್ದೇ ಗೌಡಪಾದರ ವೈಶಿಷ್ಟ್ಯ. ಕನಸು ಮತ್ತು ಎಚ್ಚರದ ಅನುಭವಗಳಿಗೆ ಆತ್ಮವೇ ಆಧಾರವಾದರೂ ಅವೆರಡೂ ಸುಷುಪ್ತಿಯ ಅನುಭವಕ್ಕಿಂತ ಭಿನ್ನ. ಸುಷುಪ್ತಿಯಲ್ಲಿ ಚೇತನ ಆತ್ಮದಲ್ಲಿ ಒಂದೇ ಆಗಿ ಅಡಗಿರುತ್ತದೆ. ಆದರೂ ಅವಿದ್ಯೆ ಅದಕ್ಕೆ ಅಂಟಿಕೊಂಡೇ ಕಾದಿರುತ್ತದೆ. ತುರೀಯದಲ್ಲಿ ಅವಿದ್ಯೆಯೆಂಬ ಉಪಾಧಿ ಸುಟ್ಟುಹೋಗಿ ಭೇದವಿಲ್ಲದ ಅಖಂಡವಾದ ಆತ್ಮರಲ್ಲಿ ಜೀವನ ಚೇತನ ಐಕ್ಯವಾಗುತ್ತದೆ. ಈ ತುರೀಯಾವಸ್ಥೆಯ ಸತ್ತಿನ ನಿಟ್ಟಿನಿಂದ ಸುಷುಪ್ತಿ ಜಾಗ್ರತ್ ಮತ್ತು ಸ್ವಪ್ನಾವಸ್ಥೆಯ ವಿಷಯಗಳು, ಭಿನ್ನಪ್ರಮಾಣಗಳಲ್ಲಿ ಭ್ರಮೆಗೆ ಒಳಪಟ್ಟಿವೆ. ಎಚ್ಚರ ಜೀವನವೂ ಹೆಚ್ಚು ದೀರ್ಘಕಾಲದ ಒಂದು ಕನಸೇ. ಭೇದವನ್ನು ಕಾಣುವಷ್ಟು ಕಾಲವೂ ನಮ್ಮ ಅನುಭವ ಕನಸೇ, ಆ ಭೇದಗಳು ಅನಿತ್ಯ, ಸರ್ವಕಾಲಿಕವಲ್ಲ. ಅವು ಅಖಂಡ ಚೇತನದ ಪರದೆಯ ಮೇಲೆ ಬಂದು ಹೋಗುವ ಬಿಂಬಗಳು. ನಿದ್ರೆಯಿಂದ ಎಚ್ಚೆತ್ತಾಗ ಕನಸಿನ ವಸ್ತುಗಳು ಇಲ್ಲವಾಗುತ್ತವೆ. ಐಕ್ಯಜ್ಞಾನ ಪಡೆದಾಗ ಎಚ್ಚರದ ಪ್ರಪಂಚದ ವಸ್ತುಗಳು ತೇಲಿಹೋಗುತ್ತವೆ. ಸುಷುಪ್ತಿಯ ಐಕ್ಯಾನುಭವವೂ ತಾತ್ಕಾಲಿಕ ಮತ್ತು ಔಪಾಧಿಕ. ಎಲ್ಲ ಕಾಲದಲ್ಲೂ ಎಲ್ಲ ಅನುಭವಗಳಿಗೂ ಆಶ್ರಯವಾದ ಅಖಂಡಚೇತನವೇ ಸತ್ಯ. ಅದೇ ಸತ್. ಉಳಿದವು ಸತ್ ಮತ್ತು ಅಸತ್ತುಗಳ ಮಿಶ್ರಣ. ಅವು ಬಂಜೆಯ ಮಗನಂತೆ ಇಲ್ಲದವಲ್ಲ. ಇಲ್ಲದ್ದರಿಂದ, ಅಭಾವದಿಂದ, ಶೂನ್ಯದಿಂದ ಯಾವುದೂ ಹುಟ್ಟಲಾರದು. ಸೃಷ್ಟಿ ಎಂಬ ಕಾರ್ಯ, ಇಲ್ಲದ್ದರಿಂದ ಹುಟ್ಟಲಾರದು. ಅಸತ್ತಾದುದು ಶೂನ್ಯವಾದುದು ಸತ್ತಿನಿಂದ ಬರಲಾರದು. ನಾವು ವ್ಯವಹಾರದಲ್ಲಿ ಉಪಯೋಗಿಸುವ ಕಾರ್ಯಕಾರಣಭಾವ, ಕಾಲದೇಶಭಾವಗಳು ಪರಮ ಸತ್ತಿಗೆ ಅನ್ವಯಿಸಲಾರವು. ವಿಶ್ವ ಪುರುಷರೂಪನಾದ ಒಬ್ಬ ದೇವನ ಸೃಷ್ಟಿ ಎಂಬ ಭಾವನೆ ಅನೇಕ ಆಭಾಸಗಳಿಗೆ ಎಡೆಕೊಡುತ್ತದೆ. ಈ ವಿಶ್ವ ಸೃಷ್ಟಿಯಾಯಿತು ಎಂದು ಹೇಳಿದರೆ ಅದು ಹಿಂದೆ ಇರಲಿಲ್ಲ, ಈಗ ಇದೆ ಎಂದು ಹೇಳಿದಂತಾಗುತ್ತದೆ. ಮೊದಲಲ್ಲಿ ಇಲ್ಲದ್ದು, ಕೊನೆಯಲ್ಲೂ ಇಲ್ಲದ್ದೇ ಆಗಬೇಕು. ಮೊದಲಲ್ಲೂ ಇಲ್ಲದ್ದು ಕೊನೆಯಲ್ಲೂ ಉಳಿಯದ್ದು ಮಧ್ಯದಲ್ಲಿ ಇರಲು ಹೇಗೆ ತಾನೆ ಸಾಧ್ಯ. ಆದ್ದರಿಂದ ನಿಜವಾದ ಸತ್ತಿಗೆ ಮೊದಲೂ ಇಲ್ಲ ಕೊನೆಯೂ ಇಲ್ಲ. ಆದಿಮಧ್ಯಾಂತ ರಹಿತವಾದ ಸತ್ತನ್ನು ತಿಳಿಯುವುದೇ ಪರಮಾರ್ಥಸತ್ಯ.

ಹೀಗೆಂದ ಮಾತ್ರಕ್ಕೆ ವಿಶ್ವ ಬರಿಯ ಕನಸೆಂದು ಭಾವಿಸಬಾರದು. ವ್ಯಾವಹಾರಿಕ ಪ್ರಪಂಚದ ವಸ್ತುಗಳು, ಬೌದ್ಧ ವಿಜ್ಞಾನವಾದಿಗಳು ವಾದಿಸಿರುವಂತೆ, ಕೇವಲ ಮಾನಸಿಕ ಭಾವನೆಗಳಲ್ಲ. ಅವು ಅಖಂಡ ಚೇತನದ ಭಾಸಮಾನರೂಪಗಳು; ಅದರ ಅದ್ಭುತ ಮಾಯೆಯಿಂದ ಭಾಸಮಾನವಾದ ರೂಪಗಳು. ಮಾಯೆ, ಜೀವರುಗಳ ದೃಷ್ಟಿಯಿಂದ ಅಖಂಡ ಚೇತನವನ್ನು ಮರೆಮಾಡಿ ಭೇದವನ್ನು ಅಭಿವ್ಯಕ್ತಗೊಳಿಸುತ್ತದೆ. ಮಾಯಾವಿಷ್ಠವಾದ ಅಖಂಡಚೇತನವೇ ಈಶ್ವರ. ಈಶ್ವರ ಬೇರೆ ಬೇರೆ ಹೆಸರುಗಳಿಂದ ಸ್ವಪ್ನ, ಜಾಗ್ರತ್, ಸುಷುಪ್ತಿಗಳ ಅಧ್ಯಕ್ಷನಾಗಿರುತ್ತಾನೆ. ಈಶ್ವರನ ಮಾಯೆ ಅವನನ್ನು ಬಂಧಿಸುವುದಿಲ್ಲ, ಅವನ ಸ್ವರೂಪವನ್ನು ಪ್ರಕಾಶಿಸುತ್ತದೆ. ಆದರೆ ಅದರ ಅಂಶವಾದ ಅವಿದ್ಯೆ ಜೀವರುಗಳ ದೃಷ್ಟಿಯನ್ನು ಮರೆ ಮಾಡುತ್ತದೆ. ತಾನು ಪರರು ಎಂಬ ಭೇದವನ್ನೂ ತಾನು ಹೊರವಸ್ತುಗಳು ಎಂಬ ಭೇದವನ್ನೂ ಹುಟ್ಟಿಸಿ, ತಾನು ಅಖಂಡ ಚೇತನನೆಂಬುದನ್ನು ಮರೆಯಿಸುತ್ತದೆ. ಆದರೂ ಈ ವಿಶ್ವದ ವಸ್ತುಗಳು ಕನಸಿನ ಭಾವನೆಗಳಂತೆ ಕ್ಷಣಿಕವಲ್ಲ. ನಾನು ಎಂಬುದು ಕೇವಲ ಕ್ಷಣಿಕ ಭಾವನೆಯಲ್ಲ. ಅದರಲ್ಲಿ ಒಗ್ಗಟ್ಟಿದೆ, ಸ್ವಲ್ಪಮಟ್ಟಿಗೆ ಸ್ಥಿರತೆ ಇದೆ ಎಂಬುದು ಅವುಗಳಿಗೆ ಸದಾ ಆಧಾರವಾದ ಚೇತನವನ್ನು ಜ್ಞಾಪಕಕ್ಕೆ ತರುತ್ತವೆ. ಹೀಗೆ ಆಗಾಗ ನಮ್ಮ ಚಿತ್ತಭೂಮಿಯಲ್ಲಿ ಕಾಣಿಸಿಕೊಂಡ ಭಾವನೆಯನ್ನು ಧ್ಯಾನದಿಂದ ಸ್ಥಿರವಾಗಿ ನಿಲ್ಲಿಸಿಕೊಂಡು ತಾನು ಅಖಂಡಚೇತನವೇ ಎಂಬ ಸ್ಮರಣೆಯನ್ನು ಬಲಪಡಿಸಿಕೊಂಡು ಎಲ್ಲ ಸಂದೇಹಗಳನ್ನೂ ನಿವಾರಣ ಮಾಡಿಕೊಳ್ಳವುದೇ ಮೋಕ್ಷ. ಮೋಕ್ಷಸಿದ್ಧಿಗೆ ಜ್ಞಾನಯೋಗವೇ ಅಂತಿಮಸಾಧನ. ನಿಷ್ಕಾಮಕರ್ಮ, ಭಗವದುಪಾಸನೆ ಇದರ ಮೊದಲ ಹಂತ, ಜ್ಞಾನೋಪಾಸನೆ ಇದರ ಕೊನೆಯ ಹಂತ. ಸಮುದ್ರದ ನೀರನ್ನು ದರ್ಭೆಯ ಮೊನೆಯಿಂದ ಎತ್ತಿ ಅದನ್ನು ಬರಿದಾಗಿ ಮಾಡುವುದು ಎಷ್ಟು ಕಷ್ಟವೋ ಈ ಅದ್ವೈತವನ್ನು ಸಿದ್ಧಿಸಿಕೊಳ್ಳುವುದೂ ಅಷ್ಟೇ ಕಷ್ಟ. ಪಟ್ಟುಹಿಡಿದು ತಾಳ್ಮೆಯಿಂದ ಜ್ಞಾನಯೋಗದಲ್ಲಿ ನಿರತನಾದವನಿಗೆ ಅದು ಖಂಡಿತ ಸಿದ್ಧಿಸುತ್ತದೆ.

ವಿಷೇಶತೆ[ಬದಲಾಯಿಸಿ]

ಗೌಡಪಾದರು ಆಗ ಬಳಕೆಯಲ್ಲಿದ್ದ ಮಾಧ್ಯಮಿಕರ ಪಾರಿಭಾಷಿಕ ಶಬ್ದಗಳನ್ನು ವಿಶೇಷವಾಗಿ ಬಳಸಿರುತ್ತಾರೆ- ವಸ್ತುವಿಗೆ ಬದಲು ಧರ್ಮ, ವ್ಯಾವಹಾರಿಕ ಸತ್ಯಕ್ಕೆ ಬದಲು ಸಂವೃತಿ, ಹೊರವಸ್ತುಗಳಿಗೆ ಬದಲು ಸಂಘಾತ-ಹೀಗೆ. ನಾಗಾರ್ಜುನ ಬಳಸಿದ ಪದಗಳನ್ನೇ ಇವರು ಪುನಶ್ಚರಣೆ ಮಾಡಿರುತ್ತಾರೆ. ಬಂಧವೂ ಇಲ್ಲ, ಬಿಡುಗಡೆಯೂ ಇಲ್ಲ. ಸೃಷ್ಟಿಯೂ ಇಲ್ಲ, ವಿನಾಶವೂ ಇಲ್ಲ. ಇದೇ ಪರಮಸತ್ಯ ಎಂದು ನಾಗಾರ್ಜುನನ ಭಾಷೆಯಲ್ಲೇ ಪರಮಾರ್ಥವನ್ನು ವರ್ಣಿಸಿರುತ್ತಾರೆ. ಅಲಾತಚಕ್ರದ ಉಪಮಾನವೂ ಬೌದ್ಧಗ್ರಂಥಗಳಿಂದಲೇ ತೆಗೆದುಕೊಂಡದ್ದು. ಅನೇಕ ವೇಳೆ ಇವರು ಪರಮಾರ್ಥವನ್ನು ನೇತ್ಯರ್ಥ ಬೋಧಕ ಶಬ್ದಗಳಿಂದಲೇ ವರ್ಣಿಸಿರುವುದರಿಂದ ಅವರ ಪರಮಾರ್ಥ ಶೂನ್ಯವೆಂದು ಭಾವಿಸಲು ಅವಕಾಶ ಕೊಡುತ್ತದೆ. ತಮ್ಮ ವಾದ ಶೂನ್ಯವಾದವೆಂಬ ಶಂಕೆಗೆ ಎಡೆಕೊಡುತ್ತದೆ ಎಂಬುದನ್ನು ಗೌಡಪಾದರು ಗಮನಿಸಿರುತ್ತಾರೆ. ಆದ್ದರಿಂದ ಇವರು ‘ಅದು ಶೂನ್ಯವಾದವಲ್ಲ; ನಾನು ಹೇಳಿದ ಅಸ್ತ್ಯರ್ಥಕ ಭೂಮ ಬ್ರಹ್ಮನನ್ನು ಬುದ್ಧ ಉಪದೇಶಿಸಲಿಲ್ಲ’ ಎಂದು ಹೇಳಿ ತಮ್ಮ ಕಾರಿಕೆಯನ್ನು ಪರಿಸಮಾಪ್ತಿಗೊಳಿಸಿರುತ್ತಾರೆ.

ಗೌಡಪಾದರು ಮಾಯಾ ಎಂಬ ಪದವನ್ನು ಅನೇಕ ಅರ್ಥಗಳಲ್ಲಿ ಉಪಯೋಗಿಸಿ ಸಂದಿಗ್ಧತೆಗೆ ಅವಕಾಶ ಕೊಟ್ಟಿರುತ್ತಾರೆ. ವಿಶ್ವ ಮಾಯೆ ಎಂದರೆ ಕನಸಿಗೆ ಸದೃಶವಾದದ್ದು ಎಂಬ ಅರ್ಥವೇ ಹೆಚ್ಚಾಗಿ ಅದು ಮಾಧ್ಯಮಿಕರ ಸಂವೃತಿಯನ್ನು ಹೋಲುತ್ತದೆ. ಶಂಕರಾಚಾರ್ಯರು ಅದನ್ನು ಸದಸದ್ವಿಲಕ್ಷಣವೆಂಬ ಅರ್ಥದಲ್ಲಿ ಉಪಯೋಗಿಸುವುದೇ ಸಾಧುವೆಂದು ಹೇಳಿರುತ್ತಾರಲ್ಲದೆ ಮಾಧ್ಯಮಿಕರ ಪರಿಭಾಷೆಯನ್ನು ಬಿಟ್ಟು ವಿಶೇಷವಾಗಿ ಉಪನಿಷತ್ತಿನ ಪರಿಭಾಷೆಯಲ್ಲೇ ದ್ವೈತವನ್ನು ವಿವರಿಸಿ ಅದು ಬೌದ್ಧರ ಮಾಧ್ಯಮಿಕವಾದವಲ್ಲವೆಂಬುದನ್ನು ಸ್ಪಷ್ಟಪಡಿಸಿರುತ್ತಾರೆ.

ಗೌಡಪಾದರ ಕಾರಿಕೆಯಿಂದ ಶಂಕರಾಚಾರ್ಯರು ಸ್ಫೂರ್ತಿಪಡೆದು ಬಹು ಅಡಕವಾಗಿದ್ದ ಅದರಲ್ಲಿನ ಅದ್ವೈತತ್ತ್ವವನ್ನು ತುಂಬ ವಿಸ್ತರಿಸಿದರು.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೌಡಪಾದ&oldid=1213184" ಇಂದ ಪಡೆಯಲ್ಪಟ್ಟಿದೆ