ಧೊಂಡೊ ಕೇಶವ ಕರ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧೊಂಡೊ ಕೇಶವ ಕರ್ವೆ
Born(೧೮೫೮-೦೪-೧೮)೧೮ ಏಪ್ರಿಲ್ ೧೮೫೮
Died9 November 1962(1962-11-09) (aged 104)

ಡಾ.ಧೊಂಡೊ ಕೇಶವ ಕರ್ವೆ (೧೮ ಎಪ್ರಿಲ್ ೧೮೫೮ –೯ ನವಂಬರ್ ೧೯೬೨) ಮಹರ್ಷಿ ಕರ್ವೆ ಎಂದು ಪ್ರಸಿದ್ಧರಾದ ಇವರು ಒಬ್ಬ ಸಮಾಜ ಸುಧಾರಕ. ಇವರು ಮಹಿಳೆಯರ ಅಭ್ಯುದಯಕ್ಕಾಗಿ ಬಹಳಷ್ಟು ಶ್ರಮಿಸಿದವರು. ಇವರಿಗೆ ೧೯೫೮ರಲ್ಲಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾರಾಷ್ಟ್ರದ ಅಗ್ರಗಣ್ಯ ಸಮಾಜ ಸುಧಾರಕ, ಸ್ತ್ರೀಶಿಕ್ಷಣತಜ್ಞ. ಅಣ್ಣಾಸಾಹೇಬ್ ಎಂಬುದು ಇವರ ಉಪನಾಮ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ರತ್ನಗಿರಿ ಜಿಲ್ಲೆಯ ಶೇರವಲಿಯಲ್ಲಿ ೧೮೫೮ರ ಏಪ್ರಿಲ್ ೧೮ರಂದು ಚಿತ್ಪಾವನ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು. ತಂದೆ ಕೇಶವ ಕರ್ವೆಯ ವಾಸಸ್ಥಳ ಅದೇ ಜಿಲ್ಲೆಯ ಮುರೂಡ್ ಗ್ರಾಮ. ಈ ಮನೆತನದವರು ಪೇಶ್ವೆಗಳ ಕಾಲದಲ್ಲಿ ಪುಣೆ ಯಲ್ಲಿ ಸಾಹುಗಾರಿಕೆ ಮಾಡುತ್ತಿದ್ದರಾದರೂ ಕೇಶವ ಕರ್ವೆ ಬಡತನದ ಜೀವನ ನಡೆಸುತ್ತಿದ್ದರು. ಧೋಂಡೊ ಕರ್ವೆಗೆ ಪ್ರಾಥಮಿಕ ಶಿಕ್ಷಣ ಮುರೂಡ್ನಲ್ಲೇ ದೊರಕಿತು. ಬಹಳ ಅಡಚಣೆಗಳನ್ನು ಎದುರಿಸಿ ವಿದ್ಯಾಭ್ಯಾಸವನ್ನು ಅವರು ಮುಂದುವರಿಸಿ ೧೮೮೧ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದೆ ಗಣಿತವನ್ನಾರಿಸಿಕೊಂಡು ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಅಭ್ಯಾಸಮಾಡಿ ಪದವಿ ದೊರಕಿಸಿಕೊಂಡರು (೧೮೮೫). ಮುಂದೆ ಅವರು ಎಂ.ಎ. ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರಾದರೂ ಸಮಯಾಭಾವದಿಂದ ಅಭ್ಯಾಸ ಕಡಿಮೆಯಾಗಿ ಸೋಲುಂಟಾಗಿ ಆ ಪದವಿಯ ಆಸೆ ಬಿಡಬೇಕಾಯಿತು.

ಸಮಾಜ ಸೇವೆ[ಬದಲಾಯಿಸಿ]

ತಾರುಣ್ಯದಿಂದಲೂ ಶಾಲಾ ಅಧ್ಯಾಪಕವೃತ್ತಿಯಲ್ಲಿ ದುಡಿದ ಕರ್ವೆಯವರಿಗೆ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆ ಸ್ವೀಕರಿಸಬೇಕೆಂದು, ಸಹಪಾಠಿ ಗೋಪಾಲಕೃಷ್ಣ ಗೋಖಲೆಯವರಿಂದ ಆಮಂತ್ರಣ ಬಂತು. ೧೮೯೧ ರಿಂದ ೧೯೧೪ರ ವರೆಗೆ ಅಲ್ಲಿದ್ದ ಮೇಲೆ ಕರ್ವೆಯ ಬಾಳು ಸಮಾಜಸೇವೆಗೆ ಮುಡಿಪಾಯಿತು. ೧೪ನೆಯ ವರ್ಷದಲ್ಲೇ ವಿವಾಹವಾಗಿದ್ದ ಕರ್ವೆಯವರಿಗೆ ತಾರುಣ್ಯದಲ್ಲೇ ವಿಧುರತ್ವ ಸಂಭವಿಸಿತು. ಇದೇ ಕಾಲದಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಬಲವಾಗಿದ್ದ ಆರ್ಯಸಮಾಜ, ಬ್ರಹ್ಮಸಮಾಜ ಮುಂತಾದ ಚಳವಳಿಗಳಿಂದ ಕರ್ವೆಯವರ ಮೇಲೆ ತುಂಬ ಪ್ರಭಾವ ಉಂಟಾಗಿತ್ತು. ಬಾಲ್ಯದಲ್ಲೆ ವಿಧವೆಯಾಗಿದ್ದ ಗೋದುಬಾಯಿಯನ್ನು ಅವರು ಮದುವೆಯಾದರು (೧೮೯೩). ಅದೇ ವರ್ಷ ಅವರು ವಿಧವಾಪುನರ್ವಿವಾಹ ಸಂಸ್ಥೆಯನ್ನು ಸ್ಥಾಪಿಸಿದರು. ಅನಾಥ ಬಾಲಿಕಾಶ್ರಮ ಸಂಘ (೧೮೯೬), ಪುಣೆಯ ಮಹಿಳಾ ವಿದ್ಯಾಲಯ (೧೯೦೭) ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದವರೂ ಅವರೇ. ಈ ಮಹಿಳಾ ವಿದ್ಯಾಲಯ ಬೆಳೆದು ಮುಂದೆ ಮುಂಬಯಿಯಲ್ಲಿ ಶ್ರೀಮತಿ ಸಾಥಿಬಾಯಿ ದಾಮೋದರ ಥ್ಯಾಕರ್ಸಿ ಮಹಿಳಾ ವಿದ್ಯಾ ಪೀಠದ ಸ್ಥಾಪನೆಗೆ (೧೯೧೬) ಹಾದಿಮಾಡಿಕೊಟ್ಟಿತು. ಈ ವಿದ್ಯಾಪೀಠಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದಲೇ ಕರ್ವೆ ೧೯೨೭ರಲ್ಲಿ ಫ್ರಾನ್ಸ್‌, ಇಂಗ್ಲೆಂಡ್, ಹಾಲೆಂಡ್, ಅಮೆರಿಕ, ಜಪಾನ್, ಚೀನ, ಮಲಯ ಮುಂತಾದ ದೇಶಗಳನ್ನೂ ಮುಂದೆ ದಕ್ಷಿಣ ಆಫ್ರಿಕವನ್ನೂ ಸಂದರ್ಶಿಸಿದರು. ೧೯೧೫ರಲ್ಲಿ ಮುಂಬಯಿಯಲ್ಲಿ ನಡೆದ ಸಮಾಜಸುಧಾರಣ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಇವರು ಮಹಾರಾಷ್ಟ್ರ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಸ್ಥಾಪನೆಮಾಡಿದ್ದು ೧೯೩೬ರಲ್ಲಿ. ಮಾನವರಲ್ಲಿ ಸಮಾನತೆ ಇರಬೇಕೆಂಬ ತತ್ತ್ವವನ್ನು ಎತ್ತಿಹಿಡಿಯಲು ೧೯೪೪ರಲ್ಲಿ ಸಮತಾಸಂಘದ ಸ್ಥಾಪನೆಯಾಯಿತು. ಫ್ರೆಡರಿಕ್ ಜೆ. ಗೌಲ್ಡ್‌ ೧೯೩೪ರಲ್ಲಿ ಲಂಡನಿನಲ್ಲಿ ಸ್ಥಾಪಿಸಿದ ಸೊಸೈಟಿ ಫಾರ್ ದಿ ಪ್ರಮೋಶನ್ ಆಫ್ ಹ್ಯೂಮನ್ ಈಕ್ವ್ಯಾಲಿಟಿ ಸಂಸ್ಥೆಯೇ ಇದಕ್ಕೆ ಪ್ರೇರಣೆ. ಜಾತಿ ನಿರ್ಮೂಲನ ಸಂಸ್ಥೆಯನ್ನು ೧೯೪೮ರಲ್ಲಿ ಅವರು ಪ್ರಾರಂಭಿಸಿದರು.

ಪ್ರಶಸ್ತಿಗಳು[ಬದಲಾಯಿಸಿ]

೧೯೪೨ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಕರ್ವೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಾಪ್ತವಾಯಿತು. ಪುಣೆ (೧೯೫೩), ಮಹಿಳಾ ವಿದ್ಯಾಪೀಠ (೧೯೫೪) ಹಾಗೂ ಮುಂಬಯಿ (೧೯೫೮) ವಿಶ್ವವಿದ್ಯಾಲಯಗಳೂ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದುವು. ಸ್ತ್ರೀಶಿಕ್ಷಣ, ಸಮಾಜ ಸುಧಾರಣೆಗಳ ಕ್ಷೇತ್ರಗಳಿಗೆ ಸಲ್ಲಿಸಿದ ಅವಿಶ್ರಾಂತ ಸೇವೆಗಾಗಿ ೧೯೫೫ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿಯೂ ೧೯೫೮ರಲ್ಲಿ (ಇವರಿಗೆ ೧೦೦ ವರ್ಷ ತುಂಬಿದಾಗ) ಭಾರತರತ್ನ ಪ್ರಶಸ್ತಿಯೂ ಸಂದವು.

ನಿಧನ[ಬದಲಾಯಿಸಿ]

೧೯೬೨ರ ನವೆಂಬರ್ ೯ ರಂದು, ೧೦೫ನೆಯ ಮಯಸ್ಸಿನಲ್ಲಿ ಕರ್ವೆ ನಿಧನ ಹೊಂದಿದರು. ಕರ್ವೆಯವರು ಮರಾಠಿಯಲ್ಲಿ ಬರೆದ ಆತ್ಮಚರಿತ್ರೆ ಆತ್ಮವೃತ್ತ ಎಂಬ ಹೆಸರಿನಿಂದ ೧೯೧೫ರಲ್ಲಿ ಪ್ರಕಟವಾಯಿತು. ಲುಕಿಂಗ್ ಬ್ಯಾಕ್ ಎಂಬ ಹೆಸರಿನಿಂದ ಇಂಗ್ಲಿಷಿನಲ್ಲೂ (೧೯೩೬) ಸಿಂಹಾವಲೋಕನ ಎಂದು ಕನ್ನಡದಲ್ಲೂ (೧೯೪೪) ಈ ಕೃತಿ ಪ್ರಕಟವಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]