ಗಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಜು ನಿರಾಕಾರ ಪದಾರ್ಥಗಳಲ್ಲಿ (ಅಥವಾ ಅರೆಸ್ಫಟಿಕ ವಸ್ತುಗಳೊಳಗೆ ನಿರಾಕಾರ ವಲಯಗಳಲ್ಲಿ) ಗಟ್ಟಿ ಹಾಗು ತುಲನಾತ್ಮಕವಾಗಿ ಸುಲಭವಾಗಿ ಒಡೆಯುವ ಸ್ಥಿತಿಯಿಂದ ಕರಗಿದ ಅಥವಾ ರಬ್ಬರ್‌ನಂಥ ಸ್ಥಿತಿಗೆ ನಿವರ್ತಿಸಬಲ್ಲ ಪರಿವರ್ತನೆಯಾದ ಗಾಜು ಪರಿವರ್ತನೆಯನ್ನು ಪ್ರಕಟಪಡಿಸುವ ಒಂದು ನಿರಾಕಾರ (ಅಸ್ಫಟಿಕರೂಪದ) ಘನ ಪದಾರ್ಥ. ಗಾಜುಗಳು ವಿಶಿಷ್ಟವಾಗಿ ಭಿದುರವಾಗಿರುತ್ತವೆ ಮತ್ತು ಅವು ನೋಟದಲ್ಲಿ ಪಾರದರ್ಶಕವಾಗಿರಬಹುದು. ಶೇಕಡ ೭೫ ಸಿಲಿಕಾನ್ ಡೈಆಕ್ಸೈಡ್, ಸೋಡಿಯಮ್ ಆಕ್ಸೈಡ್, ಸುಣ್ಣ, ಮತ್ತು ಹಲವು ಸಣ್ಣ ಸಂಯೋಜನೀಯಗಳಿಂದ ಕೂಡಿದ ಸೋಡಾ-ಲೈಮ್ ಗಾಜು ಕಿಟಕಿಗಳು ಮತ್ತು ಕುಡಿಯುವ ಪಾತ್ರೆಗಳಲ್ಲಿ ಶತಮಾನಗಳಿಂದ ಬಳಸಲಾದ ಅತ್ಯಂತ ಪರಿಚಿತ ಪ್ರಕಾರದ ಗಾಜು. ಕೆಲವು ದ್ರವಪದಾರ್ಥಗಳು ಅತಿಯಾಗಿ ತಣಿಸಲ್ಪಟ್ಟು ತಮ್ಮ ದ್ರವರೂಪವನ್ನು ಕಳೆದುಕೊಂಡರೂ ದ್ರವದ ಲಕ್ಷಣಗಳನ್ನು ಉಳಿಸಿಕೊಂಡಾಗ ದೊರೆಯುವ ಘನವಸ್ತು (ಗ್ಲಾಸ್). ಸಾಮಾನ್ಯ ಉಷ್ಣತಾಮಟ್ಟದಲ್ಲಿ ಇದು ಗಟ್ಟಿಯಾಗಿರುತ್ತದೆ. ಎತ್ತರದಿಂದ ಬಿದ್ದರೆ ಚೂರುಚೂರಾಗುತ್ತದೆ. ಕೆಲವು ನೂರು ಡಿಗ್ರಿ ಉಷ್ಣತೆಗೆ ಬಿಸಿ ಮಾಡಿದಾಗಲೂ ಗಾಜಿನ ಘನರೂಪ ಬದಲಾಗುವುದಿಲ್ಲ. ಆದರೆ ಇದನ್ನು ಮತ್ತಷ್ಟು ಬಿಸಿ ಮಾಡಿದರೆ ನಿಧಾನವಾಗಿ ಮೆತ್ತಗಾಗಿ ಮಂದವಾದ ದ್ರವರೂಪವನ್ನು ಪಡೆಯುತ್ತದೆ. ಮಿಕ್ಕ ಘನಪದಾರ್ಥಗಳಂತೆ ನಿರ್ದಿಷ್ಟವಾದ ಉಷ್ಣತಾಮಟ್ಟದಲ್ಲಿ ಇದು ಒಮ್ಮೆಲೇ ದ್ರವವಾಗುವುದಿಲ್ಲ. ಅಧಿಕ ಉಷ್ಣತಾಮಟ್ಟದಲ್ಲಿ ಗಾಜು ಮಿಕ್ಕ ದ್ರವಗಳಂತೆಯೇ ವರ್ತಿಸುತ್ತದೆ. ಮಿಕ್ಕ ದ್ರವಗಳಂತೆ, ಹರಿಯುವ, ತಾನಿರುವ ಪಾತ್ರೆಯ ಆಕಾರವನ್ನು ಪಡೆಯುವ, ಪಾತ್ರೆಗೆ ಯಾವ ಆಕಾರವಿದ್ದರೂ ತನ್ನ ಮಟ್ಟವನ್ನು ಉಳಿಸಿಕೊಳ್ಳುವ ಗುಣಗಳು ದ್ರವಗಾಜಿಗೂ ಇವೆ. ದ್ರವಗಾಜನ್ನು ಘನೀಭವನ ಉಷ್ಣತೆಗೆ ತಣಿಸಿದರೂ ಘನೀಭವಿಸುವುದಿಲ್ಲ. ಗಾಜಿನ ಹರಳುಗಳೂ ಕಾಣಿಸುವುದಿಲ್ಲ. ಅದು ದ್ರವರೂಪದಲ್ಲೇ ತಣಿಸಿ ಅದು ಘನರೂಪವನ್ನು ಹೊಂದುವಂತೆ ಮಾಡಬಹುದು. ಈ ಸ್ಥಿತಿಯಲ್ಲಿ ಅದು ದ್ರವರೂಪದಿಂದಿದ್ದರೂ ಅದರ ಹರಿಯವ ಗುಣ ಅತಿ ಕಡಿಮೆಯಾಗಿ ಅದು ಘನ ಪದಾರ್ಥದಂತೆ ಕಾಣುತ್ತದೆ.

ತಯಾರಿಕೆ[ಬದಲಾಯಿಸಿ]

ಶುದ್ಧವಾದ ಮತ್ತು ಕಬ್ಬಿಣದ ಸಂಯುಕ್ತರಹಿತ ಮರಳು (ಗ್ಲಾಸ್ ಸ್ಯಾಂಡ್) ಸೋಡಖಾರ (ಸೋಡಿಯಂ ಕಾರ್ಬೊನೇಟ್) ಮತ್ತು ಸುಣ್ಣದ ಕಲ್ಲು (ಲೈಮ್ ಸ್ಟೋನ್) ಇವು ಆವಶ್ಯಕ ಘಟಕಾಂಶಗಳು. ಇನ್ನು ಗಾಜಿನ ಬಗೆಯನ್ನು ಅನುಸರಿಸಿ ಕೆಲವೊಮ್ಮೆ ಪೊಟ್ಯಾಸಿಯಮ್ ಕಾರ್ಬನೇಟ್, ಲೆಡ್ ಮಾನಾಕ್ಸೈಡ್, ಬೋರಾನ್ ಟ್ರೈ ಆಕ್ಸೈಡ್ ಮುಂತಾದವನ್ನು ಸೇರಿಸುವರು. ಇಷ್ಟಲ್ಲದೇ ಕೆಳಗೆ ಕೊಟ್ಟಿರುವ ಒಂದು ಅಥವಾ ಹೆಚ್ಚು ವರ್ಗಗಳ ವಸ್ತುಗಳನ್ನು ಸಹ ಸೇರಿಸುತ್ತಾರೆ:

  • ಕಲೆಟ್ ಎಂಬ ಅನುಪಯುಕ್ತವಾದ ಗಾಜು ಮತ್ತು ಚೂರಾದ ಗಾಜು
  • ಉತ್ಕರ್ಷಣಕಾರಕಗಳು (ಆಕ್ಸಿಡೈಸಿಂಗ್ ಏಜೆಂಟ್ಸ್)
  • ಬಣ್ಣಗಳನ್ನು ಹೋಗಲಾಡಿಸುವ ವಸ್ತುಗಳು
  • ನಿರ್ದಿಷ್ಟ ಬಣ್ಣಗಳನ್ನು ಬರಿಸುವ ವಸ್ತುಗಳು.

ಗಾಜಿನ ವಸ್ತುಗಳ ತಯಾರಿಕೆಯಲ್ಲಿ ಹಾಳಾಗಿ ಉಳಿಯುವ ಗಾಜು ಮತ್ತು ಗಾಜಿನ ಚೂರುಗಳು (ಕಲೆಟ್ಸ್) ಗಾಜಿನ ತಯಾರಿಕೆಯಲ್ಲಿ ವಿವಿಧ ರೀತಿಯಲ್ಲಿ ಸಹಾಯಕವಾಗಿವೆ. ಅವನ್ನು ಪುನಃ ಉಪಯೋಗಿಸುವುದರಿಂದ ಹಾಳಾಗಿ ಹೋಗುವ ಪಾಲು ಉಳಿತಾಯವಾಗುತ್ತದೆ. ಅಲ್ಲದೆ ಗಾಜು ದ್ರವಗೊಳ್ಳುವುದಕ್ಕೆ ಕಲೆಟ್ ತುಂಬ ಸಹಾಯಕವಾಗುವುದು. ಉತ್ಕರ್ಷಣಕಾರಕಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುತ್ತಾರೆ. ಉದಾಹರಣೆಗಾಗಿ ಗಾಜಿನ ತಯಾರಿಕೆಯಲ್ಲಿ ಲೆಡ್ ಆಕ್ಸೈಡನ್ನು ಬಳಸಬೇಕಾದಾಗ ಕುಲುಮೆಯ ಅನಿಲಗಳಿಂದಾಗಿ ಅದು ಲೋಹರೂಪಕ್ಕೆ ಮಾರ್ಪಾಡುಗೊಳ್ಳದಂತೆ ಈ ಕಾರಕಗಳನ್ನು ಉಪಯೋಗಿಸಬೇಕಾಗುವುದು. ಅನೇಕ ವೇಳೆ ಗಾಜಿನ ತಯಾರಿಕೆಯಲ್ಲಿ ಉಪಯೋಗಿಸುವ ವಸ್ತುಗಳಲ್ಲಿ ಅನಗತ್ಯವಾದ ಇತರ ವಸ್ತುಗಳು ಬೆರೆತಿರುವುದರಿಂದ ಪುರೈಸಿದ ಗಾಜಿಗೆ ವಿವಿಧ ಬಣ್ಣಗಳು ಬರುತ್ತವೆ. ಹಾಗೆ ಬಣ್ಣ ಬಾರದಂತೆ ಈ ಅನಗತ್ಯ ವಸ್ತುಗಳನ್ನು ನಿಷ್ಕ್ರಿಯಗೊಳಿಸಲು ಉತ್ಕರ್ಷಣಕಾರಕ ವಸ್ತುಗಳನ್ನು ಸೇರಿಸುವರು. ಹೀಗೆ ಅಗತ್ಯವಾದ ಎಲ್ಲ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಮಿಶ್ರಣವನ್ನು ದ್ರವರೂಪ ಬರುವವರೆಗೆ ಕುಲುಮೆಗಳಲ್ಲಿ ಕಾಯಿಸುತ್ತಾರೆ. ಇದಕ್ಕೆ ವಿವಿಧ ರೀತಿಯ ಕುಲುಮೆಗಳನ್ನು ಸಂದರ್ಭಾನುಸಾರ ಉಪಯೋಗಿಸುತ್ತಾರೆ. ವಿಶಿಷ್ಟ ಜಾತಿಯ ಗಾಜನ್ನು ತಯಾರಿಸಲು ಮಡಿಕೆ ಅಕಾರದ ಕುಲುಮೆಯನ್ನೂ ಸಾಮಾನ್ಯ ಗಾಜನ್ನು ಭಾರಿ ಗಾತ್ರದಲ್ಲಿ ತಯಾರಿಸಲು ಟ್ಯಾಂಕ್ ಆಕಾರದ ಕುಲುಮೆಗಳನ್ನೂ (ಟ್ಯಾಂಕ್ ಫರ್ನೇಸಸ್) ಉಪಯೋಗಿಸುವರು. ಮಿಶ್ರಣ ಸರಿಯಾಗಿ ದ್ರವವಾದ ಬಳಿಕ ರಾಸಾಯನಿಕ ಕ್ರಿಯೆಗಳಿಂದ ಉಂಟಾದ ಅನಿಲಗಳು ಹೊರಹೊಮ್ಮುವುದಕ್ಕಾಗಿ ಸಾಕಷ್ಟು ಕಾಲವನ್ನು ಬಿಡುತ್ತಾರೆ. ಅನಂತರ ಗಾಜಿನ ದ್ರವವನ್ನು ಹೊರತೆಗೆದು ನುರಿತ ಕಾರ್ಮಿಕರು ಅದನ್ನು ಕೊಳವೆಗಳ ಮೂಲಕ ಊದಿ, ಅಚ್ಚುಗಳಿಂದೊತ್ತಿ ಅಥವಾ ಯಂತ್ರಗಳ ಸಹಾಯದಿಂದ ಅದಕ್ಕೆ ಭಿನ್ನರೂಪಗಳನ್ನು ಕೊಟ್ಟು ಜನರ ಉಪಯೋಗಕ್ಕೆ ಒದಗುವ ಹಾಗೆ ಮಾಡುತ್ತಾರೆ.

ದ್ರವರೂಪದಲ್ಲಿದ್ದಾಗ ಗಾಜಿಗೆ ಯಾವ ಆಕೃತಿಯನ್ನು ಕೊಡಲಾಗುವುದೋ ಅದೇ ಆಕೃತಿಯನ್ನು ಅದು ಘನವಸ್ತುವಾದಾಗಲೂ ಇಟ್ಟುಕೊಳ್ಳುವುದು ಗಾಜಿನ ಒಂದು ವಿಶಿಷ್ಟ ಗುಣ. ಗಾಜಿಗೆ ಬೇರೆ ಬೇರೆ ಆಕೃತಿ ಕೊಟ್ಟು ತಣಿಸಿದಾಗ ಅದರಲ್ಲಿ ಒಂದು ಬಗೆಯ ಎಳೆತ ಸೆಳೆತಗಳು ಉಂಟಾಗಿ ಅದು ನಿರ್ಬಲಗೊಳ್ಳುವುದು. ಅದರ ಬಲವನ್ನೂ ಬಾಳುವಿಕೆಯನ್ನೂ ಹೆಚ್ಚಿಸುವ ಸಲುವಾಗಿ ಈ ಎಳೆತ ಸೆಳೆತಗಳನ್ನು ಹೋಗಲಾಡಿಸುವುದು ಅಗತ್ಯ. ಅದಕ್ಕಾಗಿ ಗಾಜಿನ ವಸ್ತುಗಳನ್ನು ಪುನಃ ಒಂದು ನಿರ್ದಿಷ್ಟವಾದ ಉಷ್ಣತೆಗೆ ಬಿಸಿ ಮಾಡಿ ಮತ್ತೆ ನಿಧಾನವಾಗಿ ಅದನ್ನು ತಣಿಸುವ ಕ್ರಮವಿದೆ. ಅನ್ನೀಲನ ಕ್ರಿಯೆ ಎಂದು ಇದರ ಹೆಸರು. ಇದಕ್ಕೆ ಒಳಪಟ್ಟು ಗಾಜಿನ ಬಾಳಿಕೆ ದೀರ್ಘವಾಗುವುದು. ಗಾಜಿನಲ್ಲಿ ವಿವಿಧ ಬಗೆಗಳಿವೆ. ಕುಪ್ಪಿಗಳು, ಪಾತ್ರೆಗಳು, ತಟ್ಟೆಗಳು, ಹಾಳೆಗಳು ಮುಂತಾದವನ್ನು ಸಾಮಾನ್ಯ ಗಾಜಿನಿಂದ ತಯಾರಿಸುವರು. ಈ ಜಾತಿ ಗಾಜಿನಲ್ಲಿ ಶುದ್ಧ ಮರಳು, ಸೋಡಖಾರ ಮತ್ತು ಸುಣ್ಣದ ಕಲ್ಲು ಸೇರಿವೆ. ಇಂಥ ಗಾಜು ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳಲಾರದು. ಅತ್ಯುಷ್ಣತೆಯಲ್ಲಿರುವ ಪದಾರ್ಥಗಳನ್ನು ಈ ಪಾತ್ರೆಗಳಿಗೆ ಫಕ್ಕನೆ ಸುರಿದರೆ ಇವು ಒಡೆದುಹೋಗುತ್ತವೆ. ಅದೇ ರೀತಿ ಪಾತ್ರೆಗಳು ಬಲು ಬಿಸಿಗೊಂಡಿರುವಾಗ ಫಕ್ಕನೆ ಅವನ್ನು ತಣಿಸಿದಾಗಲೂ ಅವು ಒಡೆದು ಹೋಗುತ್ತವೆ. ಉಷ್ಣತೆಯ ತೀವ್ರ ಏರಿಳಿತಗಳನ್ನು ತಡೆಯಬಲ್ಲ ಗಾಜನ್ನು ವಿಶಿಷ್ಟವಾಗಿ ನಿರ್ಮಿಸ ಬೇಕಾಗುತ್ತದೆ. ಇದಕ್ಕೆ ಗಟ್ಟಿಗಾಜು ಎಂದು ಹೆಸರು. ಇದರ ತಯಾರಿಕೆಯಲ್ಲಿ ಸೋಡಖಾರದ ಬದಲು ಪೊಟ್ಯಾಸಿಯಮ್ ಕಾರ್ಬನೇಟನ್ನು ಉಪಯೋಗಿಸುವರು.

Bohemian flashed and engraved ruby glass (19th-century)

ಗಾಜಿಗೆ ಇನ್ನೂ ಬೇರೆ ವಿಶಿಷ್ಟ ಗುಣಗಳನ್ನು ಕೊಡಲು ಸೀಸದ ಇಲ್ಲವೆ ಬೇರಿಯಮಿನ ಸಂಯುಕ್ತ ವಸ್ತುಗಳನ್ನು ಸುಣ್ಣದಕಲ್ಲಿನ ಬದಲು ಉಪಯೋಗಿಸುವರು. ಕೆಲವು ಸಂದರ್ಭದಲ್ಲಿ ಮರಳಿನ ಬದಲು ಅಥವಾ ಅದರ ಜೊತೆಗೆ ಬೋರಾನ್ ಟ್ರೈ ಆಕ್ಸೈಡನ್ನು ಉಪಯೋಗಿಸುವರು. ಇದರಿಂದಾಗಿ ಒದಗುವ ಬೋರೋ ಸಿಲಿಕೇಟ್ ಗಾಜು ಉಷ್ಣತೆಯ ತೀವ್ರ ಬದಲಾವಣೆಗಳನ್ನು ತಡೆಯಲು ಚೆನ್ನಾಗಿ ಸಮರ್ಥವಾಗುತ್ತದೆ. ಇನ್ನು ಬಣ್ಣಬಣ್ಣದ ಗಾಜುಗಳೂ ಇವೆ. ತಯಾರಿಕೆಯ ವೇಳೆ ಕಚ್ಚಾ ಪದಾರ್ಥಗಳೊಡನೆ ಅಗತ್ಯವಾದ ಲೋಹದ ಆಕ್ಸೈಡನ್ನು ಸಣ್ಣ ಪ್ರಮಾಣದಲ್ಲಿ ಸೇರಿಸುವುದರಿಂದ ಗಾಜಿಗೆ ಬೇಕಾದ ಬಣ್ಣ ಬರಿಸಬಹುದು. ಕೊಬಾಲ್ಟ್ ಆಕ್ಸೈಡನ್ನು ಸೇರಿಸುವುದರಿಂದ ನೀಲಿಗಾಜನ್ನೂ ಮ್ಯಾಂಗನೀಸ್ ಡೈ ಆಕ್ಸೈಡ್ನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ಬಂಗಾರ ಅಥವಾ ಸಿಲೇನಿಯಮ್ ಸೇರಿಸುವುದರಿಂದ ಕೆಂಪು ಬಣ್ಣದ ಗಾಜನ್ನೂ, ಯುರೇನಿಯಮ್ ಆಕ್ಸೈಡನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ತಯಾರಿಸಬಹುದು. ಕ್ಯಾಲ್ಸಿಯಂ ಫ್ಲೋರೈಡ್, ಅರ್ಸಿನಿಯಸ್ ಆಕ್ಸೈಡ್, ಅಲ್ಯೂಮಿನಿಯಮ್ ಆಕ್ಸೈಡ್, ಜಿಂಕ್ ಮತ್ತು ಕ್ಯಾಲ್ಸಿಯಮ್ ಫಾಸ್ಫೇಟುಗಳನ್ನು ಒಂದೊಂದಾಗಿ ಆಗಲಿ ಅಥವಾ ಕೆಲವುಗಳ ಕೂಟದಲ್ಲಿ ಆಗಲಿ ಬಳಸುವುದರಿಂದ ಗಾಜಿಗೆ ಬಿಳಿಬಣ್ಣವನ್ನು ಅಲ್ಪಪಾರದರ್ಶಕ ಗುಣವನ್ನೂ ಒದಗಿಸಬಹುದು. ಇಂಡಿಯನ್ ಆಕ್ಸೈಡನ್ನು ಸೇರಿಸಿದರೆ ಗಾಜು ಕಪ್ಪುಬಣ್ಣವನ್ನು ಪಡೆಯುತ್ತದೆ. ಇನ್ನೊಂದು ಅತಿ ಉಪಯುಕ್ತವಾದ ಜಾತಿ ಪೈರೆಕ್ಸ್ ಗಾಜು. ಇದರಲ್ಲಿ ಶೇ.80 ರಷ್ಟು ಮರಳು ಸೇರಿರುವುದರಿಂದ ಇದನ್ನು ಹೆಚ್ಚು ಬಿಸಿಮಾಡಿ ಕೂಡಲೆ ತಣಿಯಬಿಟ್ಟರೂ ಅದು ಒಡೆಯುವುದಿಲ್ಲ. ಅಲ್ಲದೆ ಅದು ಅಧಿಕ ಉಷ್ಣತೆಯನ್ನು ತಡೆದುಕೊಳ್ಳುವುದು. ಕನ್ನಡಕ, ಸೂಕ್ಷ್ಮದರ್ಶಕ, ದೂರದರ್ಶಕ ಮೊದಲಾದ ಉಪಕರಣ ತಯಾರಿಕೆಯಲ್ಲಿ ಆಪ್ಟಿಕಲ್ ಗಾಜು ಎಂಬ ವಿಶಿಷ್ಟ ಜಾತಿಯ ಗಾಜನ್ನು ಉಪಯೋಗಿಸುವರು. ಇದರ ತಯಾರಿಕೆಯಲ್ಲಿ ಕಚ್ಚಾ ಪದಾರ್ಥಗಳನ್ನೂ ತಯಾರಿಕೆಯ ಕ್ರಿಯೆಗಳನ್ನೂ ಚೆನ್ನಾಗಿ ಪರಿಶೀಲಿಸಿ ಅದಕ್ಕೆ ವಿಶಿಷ್ಟ ಗುಣಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ತೆಳುವಾದ ಗಾಜಿನ ಪದರಗಳನ್ನು ಸೆಲ್ಯುಲೋಸ್ ಅಸಿಟೇಟ್ ಎಂಬ ವಸ್ತುವಿನಿಂದ ಒಂದಕ್ಕೊಂದು ಜೋಡಿಸಿಕೊಳ್ಳುವ ಹಾಗೆ ಮಾಡುವುದರಿಂದ ಅಪಾಯರಹಿತ ಗಾಜಿನ ಹಾಳೆಯನ್ನು ತಯಾರಿಸಬಹುದು. ಇದರ ಪದರಗಳು ಕಾಣಿಸುವುದಿಲ್ಲ. ಅಲ್ಲದೆ ಈ ಗಾಜು ಪಾರದರ್ಶಕವಾಗಿಯೂ ಇರುತ್ತದೆ. ಅಪಘಾತಕ್ಕೆ ಒಳಗಾದಾಗ ಇಂಥ ಗಾಜು ಪುಡಿಪುಡಿಯಾದರೂ ಅದರ ಚೂರುಗಳು ಸಿಡಿದು ಯಾವ ಹಾನಿಯನ್ನೂ ಮಾಡುವುದಿಲ್ಲ. ಬದಲು ಆ ಚೂರುಗಳು ಇದ್ದಲ್ಲಿಯೇ ಅಂಟಿಕೊಂಡಿರುವುವು. ಇಂಥ ಗಾಜನ್ನು ಮೋಟಾರು ವಾಹನಗಳಲ್ಲಿ ಚಾಲಕರ ಎದುರು ಗಾಳಿರಕ್ಷಕಗಳಾಗಿ (ವಿಂಡ್ ಷೀಲ್ಡ್) ಉಪಯೋಗಿಸುತ್ತಾರೆ.

ನೀರು ಗಾಜು[ಬದಲಾಯಿಸಿ]

ದಪ್ಪವಾಗದ ದ್ರವರೂಪದಲ್ಲಿರುವ ಒಂದು ಜಾತಿಯ ಗಾಜು. ಸೋಡಖಾರ ಮತ್ತು ಶುದ್ಧವಾದ ಮರಳನ್ನು ಟ್ಯಾಂಕ್ ಆಕಾರದ ಕುಲುಮೆಯಲ್ಲಿ ಚೆನ್ನಾಗಿ ಕಾಯಿಸಿದಾಗ ಸೋಡಿಯಮ್ ಸಿಲಿಕೇಟ್ ಎಂಬ ವಸ್ತು ದ್ರವರೂಪದಲ್ಲಿ ತಯಾರಾಗುವುದು. ಇದನ್ನು ಹೊರತೆಗೆದು ನೀರು ಚಿಮುಕಿಸಿ ಚೂರು ಚೂರು ಮಾಡುವರು. ಈ ಚೂರುಗಳನ್ನು ಮಿತಗಾತ್ರದ ನೀರಿನೊಂದಿಗೆ ಬಾಯ್ಲರಿನಲ್ಲಿ ಹೆಚ್ಚು ಒತ್ತಡದಲ್ಲಿ ಕುದಿಸಿದಾಗ ಸೋಡಿಯಂ, ಸಿಲಿಕೇಟ್ ಕರಗಿ ದ್ರಾವಣವಾಗುವುದು. ಇದನ್ನು ಅಗತ್ಯವಿರುವಷ್ಟು ದಪ್ಪ ದ್ರವವಾಗುವವರೆಗೆ ಬಿಸಿ ಮಾಡಿದಾಗ ನೀರು ಗಾಜು ದೊರೆಯುತ್ತದೆ. ಈ ಜಾತಿಯ ಗಾಜಿನ ಉಪಯೋಗಗಳು ಬಹಳ. ಮರದ ವಸ್ತುಗಳಿಗೆ ಇದನ್ನು ಸವರಿದರೆ ಅವಕ್ಕೆ ಬೆಂಕಿ ತಗಲುವುದಿಲ್ಲ. ಮೊಟ್ಟೆಗಳನ್ನು ಈ ದ್ರಾವಣದಲ್ಲಿ ಅದ್ದಿಟ್ಟರೆ ಅವು ದೀರ್ಘಕಾಲದವರೆಗೆ ಕೆಡುವುದಿಲ್ಲ. ಇತರ ರಾಸಾಯನಿಕ ವಸ್ತುಗಳನ್ನು ಸೇರಿಸಿ ಅಥವಾ ಬರೀ ಇದೇ ವಸ್ತುವನ್ನು ಅಂಟಾಗಿ ಉಪಯೋಗಿಸಬಹುದು. ಇದನ್ನು ರಂಗು ಮತ್ತು ಸಾಬೂನಿನ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತಿದೆ.

ಗಾಜು ಇಂದು ಉತ್ತಮ ವಾಸ್ತುಶಿಲ್ಪದ ಸರಕಾಗಿದೆ. ಇಂದಿನ ಗೃಹನಿರ್ಮಾಣ ಉದ್ದಿಮೆಗೆ ಗಾಜು ಹೊಸ ಚೌಕಟ್ಟನ್ನೇ ತೊಡಿಸಿದೆ. ಇದಕ್ಕೆ ಕಾರಣ ಗಾಜು ತಂತ್ರಜ್ಞಾನದಲ್ಲಿ ಘಟಿಸುತ್ತಿರುವ ಅತ್ಯಾಧುನಿಕ ಬೆಳೆವಣಿಗೆ. ಗಾಜನ್ನು ಯಾಂತ್ರಿಕವಾಗಿ ಅಥವಾ ರಾಸಾಯನಿಕವಾಗಿ ಮಾರ್ಪಾಡುಗೊಳಿಸಬಹುದು. ಸಮರ್ಥವಾಗಿ ಸಂಸ್ಕರಿಸಿ ಗಾಜನ್ನು ಶಬ್ದನಿರೋಧಕ, ಶಾಖಹೀರುವಿಕೆ, ಶಾಖಪ್ರತಿಫಲನ, ಹವಾಮಾನ ಪ್ರತಿರೋಧಕ, ಅಗ್ನಿನಿರೋಧಕ ಮತ್ತು ವಿದ್ಯುತ್ ಆಘಾತ ತಡೆಯಬಲ್ಲ ಸಾಧನವಾಗಿ ಬಳಸಬಹುದಾಗಿದೆ. ನೂರಾರು ವರ್ಷಗಳಿಂದ ಗೃಹ ನಿರ್ಮಾಣದಲ್ಲಿ ಗಾಜಿನ ಬಳಕೆಯಾಗಿದೆಯಾದರೂ ಅಂದಿನ ಷೀಟ್ ಗ್ಲಾಸ್ನಿಂದ ಅತ್ಯಾಧುನಿಕ ಫ್ಲೋಟ್ ಗ್ಲಾಸ್ವರೆಗೂ ಗಾಜು ಭಾರಿ ಮಾರ್ಪಾಡು ಕಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಗಾಜಿನ ಬಳಕೆ ಯಥೇಚ್ಛವಾಗಿದೆ. ತೆಳು ಗಾಜಿನ ಹಾಳೆಗಳಿಂದ ಹಿಡಿದು ಸೂರ್ಯನ ರಶ್ಮಿಗಳನ್ನು ತಡೆ ಹಿಡಿಯಬಲ್ಲ ಗುಣಮಟ್ಟದ ಗಾಜುಗಳು ಇಂದು ಲಭ್ಯ. ಗಾಜು ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ಗೂಡುಗಳಂತಿದ್ದ ಮನೆಗಳು ಇಂದು ಹೆಚ್ಚು ಪಾರದರ್ಶಕವಾಗಿರಲು ಸಾಧ್ಯವಾಗಿರುವುದು ಗಾಜಿನಿಂದ. ಗಾಜು ಸೂಕ್ಷ್ಮ ಪರಿಕರವಾಗಿದ್ದು ಅದರ ಅಗತ್ಯಗಳಿಗೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಗಾಜು&oldid=1046415" ಇಂದ ಪಡೆಯಲ್ಪಟ್ಟಿದೆ