ಕರಿಯರ ರಾಷ್ಟ್ರೀಯತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  1. REDIRECT Template:Globalize/US

ಕರಿಯರ ರಾಷ್ಟ್ರೀಯತೆ (ಬಿಎನ್‌) ಎಂಬುದು, ಬಹು-ಸಾಂಸ್ಕೃತಿಕತೆಗೆ ತದ್ವಿರುದ್ಧವಾಗಿ, ಸ್ಥಳೀಯ ರಾಷ್ಟ್ರೀಯ ಗುರುತಿನ ಜನಾಂಗೀಯ ವ್ಯಾಖ್ಯಾನ ಅಥವಾ ಪುನರ್ವ್ಯಾಖ್ಯಾನವನ್ನು ಸಮರ್ಥಿಸುತ್ತದೆ. ಹಲವು ವಿವಿಧ ಸ್ಥಳೀಯ ರಾಷ್ಟ್ರೀಯತಾವಾದಿ ತತ್ತ್ವಗಳಿವೆ. ಆದರೂ, ಎಲ್ಲಾ ಆಫ್ರಿಕನ್ ರಾಷ್ಟ್ರೀಯತಾವಾದಿ ಸಿದ್ಧಾಂತಗಳ ತತ್ತ್ವಗಳೆಂದರೆ ಏಕತೆ ಹಾಗೂ ಯುರೋಪಿಯನ್ ಸಮಾಜದಿಂದ ಸ್ವಾತಂತ್ರ್ಯ ಅಥವಾ ಸ್ವಯಂನಿರ್ಧಾರ. ಮಾರ್ಟಿನ್‌ ಡೆಲಾನೆ ಅವರನ್ನು ಆಫ್ರಿಕನ್‌ ರಾಷ್ಟ್ರೀಯತೆಯ ಪಿತಾಮಹ ಎಂದು ಪರಿಗಣಿಸಲಾಗಿದೆ.[೧]

ಹೈಟಿಯ ಕ್ರಾಂತಿಯ ಯಶಸ್ಸಿನಿಂದ ಪ್ರೇರಣೆ ಹೊಂದಿ, ರಾಜಕೀಯ ಚಿಂತನೆಯಲ್ಲಿ ಆಫ್ರಿಕನ್‌ ಸ್ಥಳೀಯ ರಾಷ್ಟ್ರೀಯತೆಯ ಉಗಮ ಹತ್ತೊಂಬತ್ತನೆಯ ಶತಮಾನದಲ್ಲಾಯಿತು. ಮಾರ್ಕಸ್‌ ಗಾರ್ವೆ, ಎಲಿಜಾ ಮಹಮ್ಮದ್‌, ಹೆನ್ರಿ ಮೆಕ್ನೀಲ್ ಟರ್ನರ್‌, ಮಾರ್ಟಿನ್‌ ಡೆಲಾನಿ, ಹೆನ್ರಿ ಹೈಲೆಂಡ್‌ ಗಾರ್ನೆಟ್‌, ಎಡ್ವರ್ಡ್‌ ವಿಲ್ಮೊಟ್‌ ಬ್ಲೈಡನ್‌, ಪಾಲ್‌ ಕಫಿ ಮುಂತಾದವರೊಂದಿಗೆ ಇದು ಹುಟ್ಟಿಕೊಂಡಿತು. ಲೈಬೀರಿಯಾ ಅಥವಾ ಸಿಯರಾ ಲಿಯೊನ್‌ ಕಡೆಗೆ ಆಫ್ರಿಕನ್‌-ಅಮೆರಿಕನ್‌ ಗುಲಾಮರ ವಾಪಸಾತಿಯು ೧೯ನೆಯ ಶತಮಾನದಲ್ಲಿನ ಸಾಮಾನ್ಯ ಆಫ್ರಿಕನ್‌ ರಾಷ್ಟ್ರೀಯತಾವಾದದ ವಿಷಯವಾಗಿತ್ತು. ೧೯೧೦ ಹಾಗೂ ೧೯೨೦ರ ದಶಕದ ಕಾಲಾವಧಿಯಲ್ಲಿ, ಮಾರ್ಕಸ್‌ ಗಾರ್ವೆ ನೇತೃತ್ವದಲ್ಲಿ ಯುನಿವರ್ಸಲ್‌ ನಿಗ್ರೊ ಇಂಪ್ರೂವ್ಮೆಂಟ್‌ ಅಸೊಸಿಯೇಷನ್‌, ಇದುವರೆಗಿನ ಅತಿ ಪ್ರಬಲ ಕರಿಯ ರಾಷ್ಟ್ರೀಯತಾವಾದಿ ಚಳವಳಿಯಾಗಿದೆ. ಈ ಚಳವಳಿಯಲ್ಲಿ ೧೧ ದಶಲಕ್ಷ ಸದಸ್ಯರಿದ್ದರು. ಆಫ್ರಿಕನ್‌ ರಾಷ್ಟ್ರೀಯತಾವಾದದ ಮಹತ್ವಾಕಾಂಕ್ಷೆಗಳಿಗೆ ಆಫ್ರಿಕಾದ ಭವಿಷ್ಯವು ಕೇಂದ್ರಬಿಂದುವಾಗಿ ಕಾಣಲಾಗಿದ್ದರೂ, ನಿಗ್ರೊ ರಾಷ್ಟ್ರೀಯತೆಗೆ ಕಟ್ಟುಬಿದ್ದವರು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲೋ ಅಥವಾ ಪಶ್ಚಿಮ ಗೋಲಾರ್ಧದಲ್ಲೋ ಪ್ರತ್ಯೇಕ ಆಫ್ರಿಕನ್‌-ಅಮೆರಿಕನ್‌ ರಾಷ್ಟ್ರದ ರಚನೆ ಬಯಸಿದ್ದರು.

ತಮ್ಮ ಖ್ಯಾತ ಕೃತಿ ಕ್ಲಾಸಿಕಲ್ ಬ್ಲಾಕ್ ನ್ಯಾಷ್ನಲಿಸಂ ನಲ್ಲಿ ವಿಲ್ಸನ್‌ ಜೆರೆಮಿಯಾ ಮೋಸಸ್‌ ಪ್ರಕಾರ, ತತ್ತ್ವವಾಗಿ ಆಫ್ರಿಕನ್‌ ರಾಷ್ಟ್ರೀಯತೆಯನ್ನು ಮೂರು ವಿವಿಧ ಕಾಲಾವಧಿಗಳಿಂದ ಪರಿಶೀಲಿಸಬಹುದು. ಆಫ್ರಿಕನ್‌ ರಾಷ್ಟ್ರೀಯತೆ ಎಂಬುದು ಇಂದು ನಿಜಕ್ಕೂ ಏನು ಎಂಬುದರ ಬಗ್ಗೆ ವಿವಿಧ ಸೈದ್ಧಾಂತಿಕ ದೃಷ್ಟಿಕೋನಗಳು ಉದ್ಭವಿಸುತ್ತವೆ.

ಪೂರ್ವ ಪ್ರಾಚೀನ ಆಫ್ರಿಕನ್‌ ರಾಷ್ಟ್ರೀಯತೆಯು ಮೊದಲನೆಯದಾಗಿತ್ತು. ಅಮೆರಿಕಾ ಖಂಡಗಳಿಗೆ ಮೊದಲ ಬಾರಿ ಆಫ್ರಿಕನ್ನರನ್ನು ಕರೆತಂದ ಘಟನೆಯಿಂದ ಹಿಡಿದು ಕ್ರಾಂತಿಕಾರಿ ಅವಧಿಯ ತನಕದ ಹಂತವಿದು. ಕ್ರಾಂತಿಕಾರಿ ಯುದ್ಧ ಮುಗಿದ ನಂತರ, ನ್ಯೂಇಂಗ್ಲೆಂಡ್‌ ಮತ್ತು ಪೆನ್ಸಿಲ್ವಾನಿಯಾ ಪ್ರಾಂತ್ಯಗಳು ಸೇರಿದಂತೆ ಹಲವು ವಸಾಹತು ಪ್ರದೇಶಗಳಲ್ಲಿನ ಆಫ್ರಿಕನ್ನರು ಸಾಕ್ಷರತೆ ಪಡೆದು, ತಮ್ಮ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ತೀವ್ರ ಅಸಮಾಧಾನ ಹೊಂದಿದರು. ಇದು ಶಿಕ್ಷಣದಿಂದ ಪಡೆದ ಅರಿವಿನ ಕಲ್ಪನೆಗಳಿಂದ ಹುಟ್ಟಿಕೊಂಡಿತ್ತು. ಫ್ರೀ ಆಫ್ರಿಕನ್‌ ಸೊಸೈಟಿ, ಆಫ್ರಿಕನ್‌ ಮೇಸನಿಕ್‌ ವಠಾರದ ಮನೆಗಳು ಮತ್ತು ಚರ್ಚ್‌ ಸಂಸ್ಥೆಗಳಂತಹ ಕೆಲವು ಸಂಘಟನೆಗಳನ್ನು ಸ್ಥಾಪಿಸುವ ಅಗತ್ಯವನ್ನು ಐತಿಹಾಸಿಕ ಗಣ್ಯರಾದ ಪ್ರಿನ್ಸ್‌ ಹಾಲ್‌, ರಿಚರ್ಡ್‌ ಅಲೆನ್‌ ಮತ್ತು ಅಬಸಲೊಮ್‌ ಜೋನ್ಸ್‌ ಕಂಡುಕೊಂಡರು. ಬೆಳೆಯುತ್ತಿರುವ ಸ್ವತಂತ್ರ ಮತ್ತು ಪ್ರತ್ಯೇಕ ಸಂಘಟನೆಗಳಿಗೆ ಈ ಸಂಸ್ಥೆಗಳು ಆರಂಭಿಕ ಅಡಿಪಾಯಗಳಾದವು. ಪುನರ್ನಿರ್ಮಾಣ ಯುಗದ ನಂತರದ ಕಾಲದಲ್ಲಿ, ವಿಭಿನ್ನ ಆಫ್ರಿಕನ್‌-ಅಮೆರಿಕನ್‌ ಪಾದ್ರಿಗಳ ವಲಯಗಳಲ್ಲಿ, ಕರಿಯರ ರಾಷ್ಟ್ರೀಯತೆಯ ಹೊಸ ರೂಪವು ಗೋಚರಿಸಲಾರಂಭಿಸಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನವು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕರಿಯರ ದಮನ ನೀತಿ ಅಸ್ತಿತ್ವದಲ್ಲಿದ್ದ ಕಾರಣ ಪ್ರತ್ಯೇಕ ವಲಯಗಳು ಸ್ಥಾಪಿತವಾಗಿ, ಆಫ್ರಿಕನ್‌-ಅಮೆರಿಕನ್ನರು ಅವುಗಳಿಗೆ ಆಗಲೇ ಸಮ್ಮತಿಸಿದ್ದರು. ಈ ವಿದ್ಯಮಾನದಿಂದಾಗಿ ಆಧುನಿಕ ಅಫ್ರಿಕನ್‌ ರಾಷ್ಟ್ರೀಯತೆಯ ಉಗಮಕ್ಕೆ ಕಾರಣವಾಯಿತು. ಇದು ಪ್ರತ್ಯೇಕತೆಗೆ ಒತ್ತು ನೀಡಿ, ದೃಢ ಜನಾಂಗೀಯ ಪ್ರತಿಷ್ಠೆ ಹೆಚ್ಚಿಸುವ ಪ್ರತ್ಯೇಕ ಸಮುದಾಯಗಳ ನಿರ್ಮಾಣ ಹಾಗೂ ಸಂಪನ್ಮೂಲಗಳ ಒಗ್ಗೂಡಿಸುವಿಕೆಗೆ ಒತ್ತು ನೀಡಿತ್ತು. ಈ ಸಿದ್ಧಾಂತವು ಮೂರಿಷ್‌ ಸೈನ್ಸ್ ಟೆಂಪಲ್ ‌ ಹಾಗೂ ನೇಷನ್‌ ಆಫ್‌ ಇಸ್ಲಾಮ್‌ ನಂತಹ ಗುಂಪುಗಳ ತತ್ತ್ಬವಾಯಿತು. ಆದರೂ, ಅರವತ್ತನೆಯ ದಶಕದ ಕಾಲಾವಧಿಯಲ್ಲಿ, ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ರಾಷ್ಟ್ರೀಯತೆಯು ಉತ್ತುಂಗಕ್ಕೇರಿತು. ಆನಂತರ, ಆಫ್ರಿಕನ್‌ ರಾಷ್ಟ್ರೀಯತೆಯು ಆಫ್ರೊ-ಕೇಂದ್ರೀಯತೆ ಯ ಮೇಲೆ ಪ್ರಭಾವ ಬೀರಿತು.

ಹಿನ್ನೆಲೆ[ಬದಲಾಯಿಸಿ]

ಮಾರ್ಕಸ್‌ ಗಾರ್ವೆ[ಬದಲಾಯಿಸಿ]

ವಿಶ್ವದಾದ್ಯಂತ ಆಫ್ರಿಕಾ ಮೂಲದ ಜನರಿಗೆ ತಮ್ಮ ಜನಾಂಗೀಯತೆಯ ಬಗ್ಗೆ ಹೆಮ್ಮೆಪಟ್ಟುಕೊಂಡು, ಅದರ ಸೌಂದರ್ಯವನ್ನು ಅನುಭವಿಸಬೇಕೆಂದು ಮಾರ್ಕಸ್‌ ಗಾರ್ವೆ ಪ್ರೋತ್ಸಾಹ ನೀಡಿದರು. ವಿಶ್ವದ ಪ್ರತಿ ಭಾಗದಲ್ಲಿರುವ ಆಫ್ರಿಕನ್ನರು ಒಂದೇ ಜನರಾಗಿದ್ದು, ಅವರು ತಮ್ಮ ತಮ್ಮ ಸಾಂಸ್ಕೃತಿಕ ಮತ್ತು ಜನಾಂಗೀಯ ಭಿನ್ನಾಭಿಪ್ರಾಯಗಳು ಮತ್ತು ವೈರುದ್ಧ್ಯಗಳನ್ನು ಬದಿಗಿಡದಿದ್ದಲ್ಲಿ ಏಳ್ಗೆ ಕಾಣುವುದಿಲ್ಲ ಎಂಬುದು ಗಾರ್ವೆ ತತ್ತ್ವದ ಕೇಂದ್ರೀಯ ಕಲ್ಪನೆಯಾಗಿತ್ತು.

ಗಾರ್ವೆ ಜನಾಂಗೀಯ ಪ್ರತ್ಯೇಕತಾವಾದದ ಸಮರ್ಥಕರಾಗಿದ್ದರೂ, ಬಿಳಿಯರ ವಿರುದ್ಧ ಯಾವುದೇ ವೈರತ್ವವಿಲ್ಲ ಎಂದು ಸ್ಪಷ್ಟಪಡಿಸಿದ್ದರು ಮತ್ತು ಮಾನವ ಕುಲದಲ್ಲಿ ಎಲ್ಲರೂ ಸಮಾನರು ಎಂದು ನಂಬಿದ್ದರು. ಗಾರ್ವೆ ಮುಂದಿನ ಆಫ್ರಿಕನ್‌ ರಾಷ್ಟ್ರೀಯತೆ ಮತ್ತು ಪ್ಯಾನ್‌-ಆಫ್ರಿಕನ್‌ ಚಿಂತನೆಗೆ ಪೂರ್ವನಿದರ್ಶನ ಹಾಕಿಕೊಟ್ಟರು. ಕ್ವಾಮೆ ಎನ್‌ಕ್ರುಮಾ (ಹಾಗೂ ಹಲವು ಇತರೆ ಆಫ್ರಿಕನ್‌ ನಾಯಕರು) ನೇಷನ್‌ ಆಫ್‌ ಇಸ್ಲಾಮ್‌, ಮಾಲ್ಕಮ್‌ ಎಕ್ಸ್‌ ಹಾಗೂ ಬಹಳಷ್ಟು ಗಮನಾರ್ಹವಾಗಿ, ಕಾರ್ಲೊಸ್‌ ಕುಕ್ಸ್‌ (ಮಾರ್ಕಸ್‌ ಗಾರ್ವೆಯ ಸೈದ್ಧಾಂತಿಕ ಪುತ್ರ ಎಂದು ಪರಿಗಣಿಸಲಾಗಿದೆ) ಹಾಗೂ ಅವರ ಆಫ್ರಿಕನ್‌ ನ್ಯಾಷನಲಿಸ್ಟ್‌ ಪಯೊನಿಯರ್‌ ಮೂವಮೆಂಟ್‌ ಕೂಡ ಒಳಗೊಂಡಿವೆ.

ದಿ ಫಿಲಾಸಫಿ ಅಂಡ್‌ ಒಪಿನಿಯನ್ಸ್‌ ಅಫ್‌ ಮಾರ್ಕಸ್‌ ಗಾರ್ವೆ ಹಾಗೂ ಮೆಸೇಜ್‌ ಟು ದಿ ಪೀಪಲ್‌: ದಿ ಕೋರ್ಸ್‌ ಆಫ್‌ ಆಫ್ರಿಕನ್‌ ಫಿಲೋಸಫಿ ಕೃತಿಗಳಲ್ಲಿ ಮಾರ್ಕಸ್‌ ಗಾರ್ವೆಯವರ ತತ್ತ್ವಗಳನ್ನು ನಮೂದಿಸಲಾಗಿದೆ.

ಮಾಲ್ಕಮ್‌ ಎಕ್ಸ್‌[ಬದಲಾಯಿಸಿ]

೧೯೫೩ರಿಂದ ೧೯೬೫ರ ನಡುವೆ, ಆಫ್ರಿಕನ್‌ ಜನರನ್ನು ಮುಖ್ಯವಾಹಿನಿ ಅಮೆರಿಕನ್‌ ಜೀವನಶೈಲಿಯಲ್ಲಿ ಕರೆತರಲು, ಹಲವು ಆಫ್ರಿಕನ್‌ ಪ್ರಮುಖರು ನಾಗರಿಕ ಹಕ್ಕು ಚಳವಳಿಯಲ್ಲಿ ಕೆಲಸಮಾಡುತ್ತಿದ್ದಾಗ, ಮ್ಯಾಲ್ಕಮ್‌ ಎಕ್ಸ್ ಸ್ವಾತಂತ್ರ್ಯ ಪರ ಭಾಷಣ ಮಾಡುತ್ತಿದ್ದರು. ಪಾಶ್ಚಾತ್ಯ ಸಂಸ್ಕೃತಿ ಹಾಗೂ ಅದಕ್ಕೆ ಆಧಾರವಾದ ಯೆಹೂದ್ಯ-ಕ್ರಿಶ್ಚಿಯನ್‌ ಧಾರ್ಮಿಕ ಸಂಪ್ರದಾಯಗಳು ಅಂತರ್ಗತವಾಗಿ ಜನಾಂಗೀಯವಾದಿಯಾಗಿತ್ತು ಎಂದು ಅವರು ಪ್ರತಿಪಾದಿಸಿದರು. ಮುಖ್ಯವಾಹಿನಿಯಲ್ಲಿದ್ದ ನಾಗರಿಕ ಹಕ್ಕುಗಳ ನಾಯಕ ಡಾ. ಮಾರ್ಟಿನ್‌ ಲುಥರ್‌ ಕಿಂಗ್‌ ಜೂನಿಯರ್‌ಅವರನ್ನು ಸದಾ ಟೀಕಿಸುತ್ತಿದ್ದ ಮಾಲ್ಮಕ್‌ ಎಕ್ಸ್‌, ಅಹಿಂಸೆಯೆಂಬುದು 'ಮೂರ್ಖರ ಸಿದ್ಧಾಂತ' ಎಂದು ಜರಿದಿದ್ದರು. ಇಂದು ಬಹಳಷ್ಟು ಪ್ರಚಾರ ಪಡೆದಿರುವ ರೆವರೆಂಡ್ ಕಿಂಗ್‌ರ 'ನನಗೊಂದು ಕನಸುಂಟು' ಭಾಷಣಕ್ಕೆ ಪ್ರತಿಕ್ರಿಯಿಸಿದ ಮಾಲ್ಕಮ್ ಎಕ್ಸ್‌, 'ಕಿಂಗ್‌ ಕನಸು ಕಾಣುತ್ತಿದ್ದರೆ, ಉಳಿದ ನೀಗ್ರೊಗಳಾದ ನಮಗೆ ದುಃಸ್ವಪ್ನಗಳಾಗುತ್ತಿವೆ ಎಂದು ಕುಹಕವಾಡಿದರು.

ಕರಿಯ ಮುಸ್ಲಿಮರು ಬೆಂಬಲಿಸುವ ಸ್ವಸಹಾಯ ಮತ್ತು ಸಮುದಾಯ ಆಧಾರಿತ ಉದ್ಯಮಗಳು ಸೇರಿದಂತೆ, ಆಫ್ರಿಕದ ಜನರು ಅವರದೇ ಸಮಾಜ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಮಾಲ್ಕಮ್ ಎಕ್ಸ್ ನಂಬಿದ್ದರು. ಆಫ್ರಿಕನ್‌ ಅಮೆರಿಕನ್ನರು ಪರಸ್ಪರರ ನಡುವೆ ಸಹಕಾರ ಸಾಧಿಸುವವರೆಗೂ ಯುರೋಪಿಯನ್‌ ಅಮೆರಿಕನ್ನರೊಂದಿಗೆ ಏಕೀಕರಣ ಅಥವಾ ಸಹಕಾರವನ್ನು ತಳ್ಳಿಹಾಕಬೇಕೆಂದು ಮ್ಯಾಲ್ಕಮ್‌ ಎಕ್ಸ್‌ ಭಾವಿಸಿದ್ದರು. 'ಕರಿಯರ ಕ್ರಾಂತಿ'ಗಾಗಿ ಸಹ ಮಾಲ್ಕಮ್‌ ಕರೆ ನೀಡಿದರು. ಅಮೆರಿಕಾದಲ್ಲಿ ಜನಾಂಗೀಯತೆಯ ಸಮಸ್ಯೆಯ ಔದಾಸೀನ್ಯದಿಂದಾಗಿ ರಕ್ತಪಾತ ಸಂಭವಿಸುತ್ತದೆ ಎಂದು ಅವರು ಘೋಷಿಸಿದರು ಮತ್ತು ಬಿಳಿಯರೊಂದಿಗೆ ಯಾವುದೇ ರಾಜಿಯನ್ನು ಅವರು ತಳ್ಳಿಹಾಕಿದರು. ಮೆಕ್ಕಾ ಯಾತ್ರೆಯಾದ ಹಜ್‌ ನಲ್ಲಿ ಭಾಗವಹಿಸಿದ ನಂತರ, ಅವರು ತಮ್ಮ ಉಗ್ರವಾದ-ಪರ ಅಭಿಪ್ರಾಯಗಳನ್ನು ತ್ಯಜಿಸಿ, ಮುಖ್ಯವಾಹಿನಿಯ ಇಸ್ಲಾಮ್‌ ಧರ್ಮ‌ ಮತ್ತು ನೈಜ ಭ್ರಾತೃತ್ವದ ಪರ ಮಾತನಾಡತೊಡಗಿದರು. ಕೆಲವೇ ದಿನಗಳ ನಂತರ, ನ್ಯೂಯಾರ್ಕ್‌ (ಎನ್‌ವೈಸಿ)ಯ ಆಡಬೊನ್‌ ಬಾಲ್‌ರೂಮ್‌ನಲ್ಲಿ ಮಾಲ್ಕಮ್‌ ಭಾಷಣ ನೀಡುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಯಿತು.

ಮೆಕ್ಕಾದಿಂದ ವಾಪಸ್‌ ಬಂದ ಮಾಲ್ಕಮ್‌ ಎಕ್ಸ್‌, ಜನಾಂಗೀಯ ಪ್ರತ್ಯೇಕತಾವಾದಕ್ಕೆ ತಮ್ಮ ಬದ್ಧತೆಯನ್ನು ತ್ಯಜಿಸಿದರು. ಆದರೆ, ಅವರು ಆಫ್ರಿಕನ್‌ ರಾಷ್ಟ್ರೀಯತೆಯ ಪರವಾಗಿದ್ದರು ಮತ್ತು ಅಮೆರಿಕದ ಆಫ್ರಿಕನ್‌ ಜನಾಂಗದವರು ಸ್ವಾವಲಂಬಿಗಳಾಗಬೇಕೆಂದು ವಾದಿಸಿದರು. ಮೆಕ್ಕಾದಿಂದ ವಾಪಸಾದ ನಂತರ ಮಾಲ್ಕಮ್‌ ಎಕ್ಸ್‌ರ ಸಿದ್ಧಾಂತಗಳನ್ನು ಅವರ 'ಆಫ್ರೊ-ಅಮೆರಿಕನ್ ಏಕತಾ ಸಂಘಟನೆ (Organization of Afro-American Unity)'ಯ(ಆಫ್ರಿಕನ್ ಏಕತೆ ಸಂಘಟನೆಯ ಮಾದರಿಯಲ್ಲಿರುವ ಆಫ್ರಿಕನ್ ರಾಷ್ಟ್ರೀಯತಾವಾದಿ ಸಮೂಹ)ಸನ್ನದಿನಲ್ಲಿ ನಮೂದಿಸಲಾಗಿದೆ.

ಫ್ರಾನ್ಜ್‌ ಫ್ಯಾನೊನ್[ಬದಲಾಯಿಸಿ]

ತಾವು ಫ್ರಾನ್ಸ್‌ನಲ್ಲಿರುವಾಗ ಫ್ರಾನ್ಜ್‌ ಪ್ಯಾನೊನ್‌ ತಮ್ಮ ಮೊದಲ ಕೃತಿ ಬ್ಲ್ಯಾಕ್ ಸ್ಕಿನ್‌, ವೈಟ್‌ ಮಾಸ್ಕ್‌ ರಚಿಸಿದರು. ಇದು ಆಫ್ರಿಕನ್‌ ಮನೋಭಾವದ ಮೇಲೆ ವಸಾಹತಿನ ದಬ್ಬಾಳಿಕೆಯ ಪ್ರಭಾವಗಳ ವಿಶ್ಲೇಷಣೆಯಾಗಿದೆ. ಈ ಕೃತಿಯಲ್ಲಿ ಆಫ್ರಿಕನ್ ಮೂಲದವರಾದ ಫಾನೋನ್ ವ್ಯಕ್ತಿಯಾಗಿ, ಬುದ್ಧಿಜೀವಿಯಾಗಿ ಮತ್ತು ಫ್ರೆಂಚ್ ಶಿಕ್ಷಣದ ಭಾಗವಾಗಿ ಅನುಭವದ ಬಗ್ಗೆ ವೈಯಕ್ತಿಕ ವಿವರವನ್ನು ನೀಡುತ್ತದೆ. ಫಾನೊನ್‌ ತಾವು ಇನ್ನೂ ಫ್ರಾನ್ಸ್‌ನಲ್ಲಿದ್ದಾಗ ಈ ಕೃತಿ ರಚಿಸಿದರಾದರೂ, ಇವರು ತಮ್ಮ ಇತರೆ ಕೃತಿಗಳಲ್ಲಿ ಬಹಳಷ್ಟನ್ನು ಉತ್ತರ ಆಫ್ರಿಕಾದಲ್ಲಿ, ಅದರಲ್ಲೂ ವಿಶಿಷ್ಟವಾಗಿ, ಅಲ್ಜೀರಿಯಾದಲ್ಲಿ ವಾಸಿಸುತ್ತಿದ್ದಾಗ ಬರೆದರು. ಈ ಸಮಯದಲ್ಲಿ ಅವರು ತಮ್ಮ ಮಹಾನ್‌ ಕೃತಿಗಳನ್ನು ರಚಿಸಿದರು. ಎ ಡೈಯಿಂಗ್‌ ಕೊಲೊನಿಯಲಿಸಮ್‌ ಹಾಗೂ ವಸಾಹತು ತೆರವಿನ ದಿ ರೆಚ್ಡ್‌ ಆಫ್‌ ದಿ ಅರ್ಥ್‌ ಎಂಬ ಇನ್ನೊಂದು ಪ್ರಮುಖ ಕೃತಿಯನ್ನು ಸಹ ರಚಿಸಿದರು. ಇದರಲ್ಲಿ ಫ್ಯಾನೋನ್ ರಾಷ್ಟ್ರೀಯ ವಿಮೋಚನೆಯ ಹೋರಾಟದಲ್ಲಿ ವರ್ಗ, ಜನಾಂಗೀಯತೆ, ರಾಷ್ಟ್ರೀಯ ಸಂಸ್ಕೃತಿ ಮತ್ತು ಹಿಂಸೆಗಳ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ವಸಾಹತಿನಲ್ಲಿ ಹಿಂಸೆಯ ವಿಮೋಚನೆ ಪಾತ್ರ ಹಾಗೂ ವಸಾಹತು-ವಿರೋಧಿ ಆಂದೋಲನದಲ್ಲಿ ಹಿಂಸೆಯ ಒಟ್ಟಾರೆ ಅಗತ್ಯದ ಬಗ್ಗೆ ಈ ಮೂಲಾವಸ್ಥೆಯ ಕೃತಿಯಲ್ಲಿ ಫ್ಯಾನೋನ್‌ ತಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸಿದ್ದಾರೆ. ಇವೆರಡೂ ಕೃತಿಗಳು ಫ್ಯಾನೋನ್‌ರನ್ನು ಬಹುಮಟ್ಟಿನ ತೃತೀಯ ಪ್ರಪಂಚದ ದೃಷ್ಟಿಯಲ್ಲಿ ೨೦ನೇ ಶತಮಾನದ ಅತಿ-ಪ್ರಮುಖ ವಸಾಹತು-ವಿರೋಧಿ ಚಿಂತಕ ಎಂದು ದೃಢವಾಗಿ ಸ್ಥಾಪಿಸಿತು. ೧೯೫೯ರಲ್ಲಿ ಅವರು ಅಲ್ಜಿರಿಯಾ ಬಗ್ಗೆ ಪ್ರಬಂಧಗಳನ್ನು L'An Cinq: De la Révolution Algérienne ಎಂಬ ಕೃತಿಯಲ್ಲಿ ದಾಖಲಿಸಿದರು.

ಬ್ಲ್ಯಾಕ್‌ ಪವರ್‌[ಬದಲಾಯಿಸಿ]

ಬ್ಲ್ಯಾಕ್‌ ಪವರ್‌ ಎಂಬುದು, ೧೯೬೦ ಹಾಗೂ ೧೯೭೦ರ ದಶಕದ ಕಾಲಾವಧಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಕರಿಯರಲ್ಲಿ ಹೊಸ ರೀತಿಯ ಜನಾಂಗೀಯತೆ ಪ್ರಜ್ಞೆ ವ್ಯಕ್ತಪಡಿಸುವ ರಾಜಕೀಯ ಚಳವಳಿಯಾಗಿತ್ತು. ಬ್ಲ್ಯಾಕ್‌ ಪವರ್‌ ಎಂಬುದು ಆ ದಶಕದ ನಾಗರಿಕ ಹಕ್ಕು ಚಳವಳಿಯ ಸಮಾಪ್ತಿ ಹಾಗೂ೧೯೬೦ರ ದಶಕದ ಕಾಲಾವಧಿಯಲ್ಲಿ ಆಫ್ರಿಕನ್‌ ಕಾರ್ಯಕರ್ತರ ಪ್ರಯತ್ನಗಳ ನಡುವೆಯೂ ಉಳಿದುಕೊಂಡಿದ್ದ ಜನಾಂಗೀಯತೆಯನ್ನು ಎದುರಿಸುವಲ್ಲಿ ಪರ್ಯಾಯ ಮಾರ್ಗಗಳು ಎರಡನ್ನೂ ಬಿಂಬಿಸಿತು. ಚಳವಳಿ ಪ್ರಗತಿಯಲ್ಲಿರುವಾಗಲೇ 'ಬ್ಲ್ಯಾಕ್‌ ಪವರ್‌' ಎಂಬುದರ ಅರ್ಥವನ್ನು ಗಹನವಾಗಿ ಚರ್ಚಿಸಲಾಯಿತು. ಕೆಲವರಿಗೆ, ಇದು ಜನಾಂಗೀಯ ಸ್ಥಾನಮಾನ ಮತ್ತು ಸ್ವಾವಲಂಬನೆಗೆ ಆಫ್ರಿಕನ್‌-ಅಮೆರಿಕನ್ನರ ಒತ್ತಾಯವನ್ನು ಬಿಂಬಿಸಿತು. ಇದನ್ನು ಸಾಮಾನ್ಯವಾಗಿ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಹಾಗೂ ಬಿಳಿಯರ ಅಧಿಕಾರದಿಂದ ಮುಕ್ತಿ ಎಂದೂ ವ್ಯಾಖ್ಯಾನಿಸಲಾಯಿತು. ಮಾಲ್ಕಮ್‌ ಎಕ್ಸ್‌ ೧೯೬೦ರ ದಶಕದಲ್ಲಿ ಈ ವಿಷಯಗಳನ್ನು ಇನ್ನಷ್ಟು ಬಲವಾಗಿ ಪ್ರತಿಪಾದಿಸಿದರು. ಸಂಪೂರ್ಣ ಏಕೀಕರಣಕ್ಕೆ ಪ್ರಯತ್ನಿಸುವ ಬದಲಿಗೆ, ಆಫ್ರಿಕನ್‌ ಜನರು ತಮ್ಮ-ತಮ್ಮ ಸಮುದಾಯಗಳನ್ನು ಸುಧಾರಿಸುವಲ್ಲಿ ಗಮನ ಹರಿಸಬೇಕು. ಹಿಂಸಾತ್ಮಕ ದೌರ್ಜನ್ಯಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದು ಕರಿಯರ ಕರ್ತವ್ಯ ಎಂದು ಅವರು ವಾದಿಸಿದರು. ೧೯೬೫ರಲ್ಲಿ ಪ್ರಕಟಣೆಯಾದ 'ದಿ ಆಟೊಬಯೊಗ್ರಫಿ ಆಫ್‌ ಮಾಲ್ಕಮ್‌ ಎಕ್ಸ್‌', ಆಫ್ರಿಕನ್‌-ಅಮೆರಿಕನ್‌ ಸ್ವಯಂ ನಿರ್ಧಾರದ ಕಲ್ಪನೆಗೆ ಇನ್ನಷ್ಟು ಬೆಂಬಲ ತಂದುಕೊಟ್ಟು, ಬ್ಲ್ಯಾಕ್‌ ಪವರ್‌ ಚಳವಳಿಯಲ್ಲಿ ಉದಯೋನ್ಮುಖ ನಾಯಕರ ಮೇಲೆ ಪ್ರಬಲ ಪ್ರಭಾವ ಬೀರಿತ್ತು. ಬ್ಲ್ಯಾಕ್‌ ಪವರ್‌ನ ಇತರೆ ವ್ಯಾಖ್ಯಾನಕಾರರು ಕರಿಯರ ಸಾಂಸ್ಕೃತಿಕ ಪರಂಪರೆಗೆ ಮಹತ್ವ ನೀಡಿದರು. ವಿಶೇಷವಾಗಿ ಅವರ ಸ್ವಸ್ವರೂಪದ ಆಫ್ರಿಕನ್ ಮೂಲಗಳ ಬಗ್ಗೆ ಮಹತ್ವ ನೀಡಿದರು. ಆಫ್ರಿಕನ್‌ ಇತಿಹಾಸ ಮತ್ತು ಪರಂಪರೆಯ ಅಧ್ಯಯನ ಮತ್ತು ಆಚರಣೆಗೆ ಈ ದೃಷ್ಟಿಕೋನವು ಪ್ರೋತ್ಸಾಹಿಸಿತು. ೧೯೬೦ರ ದಶಕದ ಅಪರಾರ್ಧದಲ್ಲಿ,ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಇತಿಹಾಸವನ್ನು ಪರಿಶೋಧಿಸುವ ಆಫ್ರಿಕನ್‌-ಅಮೆರಿಕನ್‌ ಅಧ್ಯಯನಗಳನ್ನು ಒಳಗೊಂಡ ಹೊಸ ಪಠ್ಯಕ್ರಮಕ್ಕಾಗಿ ಆಫ್ರಿಕನ್ ಅಮೆರಿಕನ್ ಕಾಲೇಜು ವಿದ್ಯಾರ್ಥಿಗಳು ಕೋರಿಕೆ ಸಲ್ಲಿಸಿದರು. ಬ್ಲ್ಯಾಕ್‌ ಪವರ್‌ನ ಇನ್ನೊಂದು ದೃಷ್ಟಿಕೋನವು, ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಇತರೆ ದೇಶಗಳಲ್ಲಿ ಜನಾಂಗೀಯತೆ, ಆರ್ಥಿಕ ಶೋಷಣೆ ಹಾಗೂ ವಸಾಹತುಗಾರಿಕೆಯನ್ನು ತಿರಸ್ಕರಿಸಲು ಕ್ರಾಂತಿಕಾರಿ ರಾಜಕೀಯ ಆಂದೋಲನಕ್ಕೆ ಕರೆ ನೀಡಿತ್ತು. ಈ ವ್ಯಾಖ್ಯಾನವು ತಮ್ಮ ಜೀವನ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ, ಹಿಸ್ಪಾನಿಕ್‌ಗಳು ಏಷ್ಯನ್ನರು ಸೇರಿದಂತೆ ಎಲ್ಲಾ ಬಿಳಿಯೇತರ ಬಣಗಳ ಮೈತ್ರಿಕೂಟಕ್ಕೆ ಪ್ರೋತ್ಸಾಹ ನೀಡಿತು.

ಉಹುರು ಚಳವಳಿ[ಬದಲಾಯಿಸಿ]

ಉಹುರು ಚಳವಳಿಯು ೧೯೮೦ರಲ್ಲಿ ಫ್ಲಾರಿಡಾದ ಸೇಂಟ್‌ ಪೀಟರ್ಸ್ಬರ್ಗ್‌ನಲ್ಲಿ ಸ್ಥಾಪನೆಯಾದ ಆಫ್ರಿಕನ್ ರಾಷ್ಟ್ರೀಯತೆಯನ್ನು ಸಮರ್ಥಿಸುವ ಅತಿದೊಡ್ಡ ಸಮಕಾಲೀನ ಆಫ್ರಿಕನ್‌-ಅಮೆರಿಕನ್‌ ಚಳವಳಿಯಾಗಿದೆ. ಆಫ್ರಿಕನ್‌ ಜನತಾ ಸಮಾಜವಾದಿ ಪಕ್ಷದವರಿಂದ ಕೂಡಿದ್ದ ಈ ಉಹುರು ಚಳವಳಿಯು, ಆಫ್ರಿಕಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಮೂಲದ ಇತರೆ ಸಂಘಟನೆಗಳನ್ನು ಒಳಗೊಂಡಿದೆ. ಈ ಸಂಘಟನೆಗಳು ಆಫ್ರಿಕನ್‌ ಸೊಷಿಯಲಿಷ್ಟ್‌ ಇಂಟರ್ನ್ಯಾಷನಲ್‌ ಎಂಬ ಬೃಹತ್ ಸಂಘಟನೆ ಸ್ಥಾಪಿಸುವ ಪ್ರಕ್ರಿಯೆಯಲ್ಲಿವೆ. ಸ್ವಹಿಲಿ ಬಾಷೆಯಲ್ಲಿ ಉಹುರು ಎಂದರೆ 'ಸ್ವಾತಂತ್ರ್ಯ '

ಟೀಕೆ[ಬದಲಾಯಿಸಿ]

ಆಫ್ರಿಕನ್‌ ರಾಷ್ಟ್ರೀಯತೆಯೆಂಬುದು ಕೇವಲ ಛದ್ಮವೇಷದಲ್ಲಿರುವ ಕರಿಯರ ಪಾರಮ್ಯ ಎಂಬ ಟೀಕೆಗಳು ಕೇಳಿಬಂದಿವೆ. ಅಂತರ್ಗತ ಸಂಸ್ಕೃತಿಗಳ ಪರಿಣಾಮ ಅಥವಾ ಜನಾಂಗೀಯತೆಯನ್ನು ಆಧರಿಸಿದ ಏಕತೆ(ಅಮೆರಿಕ ರಾಷ್ಟ್ರೀಯತೆಯ ಕೇಂದ್ರೀಯ ಕಲ್ಪನೆ) ಜನಾಂಗೀಯತಾವಾದವೇ ಆಗಿದೆ ಎಂದು ಕೆಲವರು ವಾದಿಸುವುದುಂಟು.

ಆಫ್ರಿಕನ್‌ ರಾಷ್ಟ್ರೀಯತೆಯು 'ಗಹನ ಚಿಂತನೆ ಮತ್ತು ಅಪ್ಪಟ ಅಸಂಬದ್ಧತೆಯ ವಿಚಿತ್ರ ಮಿಶ್ರಣ' ಎಂದು ಜಾತ್ಯತೀತ ಮಾನವತಾವಾದ ಮಂಡಳಿ‌‌ಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾರ್ಮ್‌ ಆರ್‌ ಅಲೆನ್‌ ಜೂನಿಯರ್‌ ಅಭಿಪ್ರಾಯ ಪಟ್ಟಿದ್ದಾರೆ.

ಒಂದೆಡೆ "ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯ"ಗಳಿಗೆ ಉತ್ತೇಜಿಸುವ ಬಲಪಂಥೀಯರ ರೀತಿಯಲ್ಲಿ 'ಪ್ರತಿಕ್ರಿಯಾವಾದಿ ಆಫ್ರಿಕನ್‌ ರಾಷ್ಟ್ರೀಯತಾವಾದಿ'ಗಳು(ಆರ್‌ಬಿಎನ್‌ಗಳು) ಸ್ವಪ್ರೇಮ, ಸ್ವಾಭಿಮಾನ, ಸ್ವ-ಸ್ವೀಕಾರ, ಸ್ವಸಹಾಯ, ಅಭಿಮಾನ, ಏಕತೆ ಇತ್ಯಾದಿಗಳನ್ನು ಪ್ರತಿಪಾದಿಸುತ್ತಾರೆ. ಆದರೂ, ನಿಮಗಿಂತಲೂ ಪವಿತ್ರ ಎನ್ನುವ ಬಲಪಂಥೀಯರ ರೀತಿಯಲ್ಲಿ ಆರ್‌ಬಿಎನ್‌‌ಗಳು ಮತಾಂಧತೆ, ಅಸಹಿಷ್ಣುತೆ, ದ್ವೇಷ, ಲಿಂಗ ತಾರತಮ್ಯ, ಹೊಮೊಫೊಬಿಯಾ, ಯೆಹೂದ್ಯರ ವಿರೋಧ, ಹುಸಿ ವಿಜ್ಞಾನ, ವಿವೇಚನಾಶೂನ್ಯತೆ, ಮತತಾತ್ತ್ವಿಕ ಐತಿಹಾಸಿಕ ಪರಿಶೀಲನಾವಾದ, ಹಿಂಸೆ ಇತ್ಯಾದಿಗಳನ್ನು ಸಮರ್ಥಿಸುವರು.[೨]

ಇನ್ನೂ ಹೆಚ್ಚಿಗೆ, ಕರಿಯ ರಾಷ್ಟ್ರೀಯತಾವಾದಿಗಳು 'ನಿರ್ದಯಿ ಕೈದಿಗಳು ಮತ್ತು ಮಾಜಿ ಕೈದಿಗಳತ್ತ ವಿಶೇಷ ಆಕರ್ಷಣೆ ತೋರುವುದು,ಆಫ್ರಿಕನ್‌ ಅಮೆರಿಕನ್‌ ವ್ಯಕ್ತಿಗಳು ಅಥವಾ ಗುಂಪುಗಳಿಗೆ ಟಾಮ್ಸ್‌, ದ್ರೋಹಿಗಳು ಅಥವಾ ವಂಚಕರು ಎಂದು ಹೆಸರು ಕೊಟ್ಟಾಗ ಆಫ್ರಿಕನ್ ಅಮೆರಿಕನ್ ಹಿಂಸಾಚಾರ ಕುರಿತು ಆಫ್ರಿಕನ್‌-ಅಮೆರಿಕನ್ನ‌‌ನಿಗೆ ಅವರ ಪ್ರೋತ್ಸಾಹ, ಅವ್ಯಾಹತವಾದ ಲಿಂಗ ತಾರತಮ್ಯದ ನಿಲುವು ಹಾಗೂ ಬಿಳಿಯ ಪಾರಮ್ಯವಾದದ ಸಿದ್ಧಾಂತಗಳಿಗೆ ಸಾದೃಶ್ಯಗಳು ಎಂದು ಅಲೆನ್‌ ಟೀಕಿಸಿದ್ದಾರೆ.

ಹಲವು ಆರ್‌ಬಿಎನ್‌ಗಳು ಆಗಾಗ್ಗೆ ದ್ವೇಷ ಬೋಧಿಸುತ್ತಾರೆ. ಬಿಳಿಯ ಪಾರಮ್ಯವಾದಿಗಳು ಆಫ್ರಿಕನ್‌-ಅಮೆರಿಕನ್ನರನ್ನು ದೆವ್ವಗಳು ಎಂದು ಬಯ್ಯುವಂತೆ, ಆರ್‌ಬಿಎನ್‌ಗಳು ಬಿಳಿಯರನ್ನು ಅದೇ ರೀತಿ ಉಲ್ಲೇಖಿಸುತ್ತಾರೆ. ಬಿಳಿಯ ಪಾರಮ್ಯವಾದಿಗಳು ಸಲಿಂಗಕಾಮಿಗಳ ಮೇಲೆ ವಾಗ್ದಾಳಿ ಮಾಡಿದ್ದಾರೆ, ಹಾಗೆಯೇ ಆರ್‌ಬಿಎನ್‌ಗಳು ಕೂಡ ದಾಳಿ ಮಾಡಿದ್ದಾರೆ. ಬಿಳಿಯ ಪಾರಮ್ಯವಾದಿಗಳು ಸಂಶಯಗ್ರಸ್ತ ಷಡ್ಯಂತ್ರ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವರು. ಅದೇ ರೀತಿ ಅಫ್ರಿಕನ್‌ ಪಾರಮ್ಯವಾದಿಗಳು ಕೂಡ. ಅನೇಕ ಬಿಳಿಯ ಪಾರಮ್ಯವಾದಿಗಳು ಮತ್ತು ಆರ್‌ಬಿಎನ್‌ ಸಂಘಟನಾ ಸದಸ್ಯರು ತಾವು ದ್ವೇಷವನ್ನು ಬೋಧಿಸುತ್ತೇವೆಂಬುದನ್ನು ಸತತವಾಗಿ ನಿರಾಕರಿಸುತ್ತಾರೆ. ಮುಖ್ಯವಾಹಿನಿಯ ಮಾಧ್ಯಮಗಳು ತಪ್ಪು ಮಾಹಿತಿ ನೀಡುತ್ತಿವೆಯೆಂದು ದೂರುತ್ತಾರೆ. (ಎನ್‌ಒಐಯ ಖಾಲಿದ್‌ ಮಹಮ್ಮದ್ ಇದಕ್ಕೆ ಅಪವಾದ. ಗೇಟ್ಸ್‌ ಪ್ರಕಾರ, 'ಇತರೆ ಗುಂಪಿನವರತ್ತ ಯಾವುದೇ ಪ್ರೀತಿ ವಿಶ್ವಾಸವಿಲ್ಲ. ಸೆಮಿಟಿಕ್ ವಿರೋಧಿಯಲ್ಲ ಎಂದು ನಾನು ಎಂದಿಗೂ ಹೇಳಲಾರೆ. ದೇವರು ನನ್ನ ಶತ್ರುಗಳನ್ನು ಕೊಂದು ಅವರನ್ನು ಈ ಭೂಮಿಯಿಂದ ಅಳಿಸಿಬಿಡಬೇಕು!') ಬದಲಿಗೆ, ಅವರು "ಸತ್ಯ"ವನ್ನು ಬೋಧಿಸುತ್ತಿದ್ದು, ತಮ್ಮ ಜನರನ್ನು ಪ್ರೀತಿಯಿಂದ ನೋಡಿರೆಂದು ಪ್ರತಿಪಾದಿಸುತ್ತಿದ್ದಾರಂತೆ. ಸ್ವಜನರತ್ತ ಪ್ರೀತಿ ಮತ್ತು ಇತರರತ್ತ ದ್ವೇಷವು ಪರಸ್ಪರ ವಿಶೇಷ ನಿಲುವುಗಳು ಎಂಬಂತೆ. ಇದಕ್ಕೆ ತದ್ವಿರುದ್ಧವಾಗಿ, ಆರ್‌ಬಿಎನ್‌ಗಳು ಸ್ವಯಂಪ್ರೀತಿ ಮತ್ತು ಶತ್ರುಗಳ ವಿರುದ್ಧ ದ್ವೇಷವನ್ನು ಬೋಧಿಸುವರು. (ಸ್ವಜನ ಪ್ರೇಮಕ್ಕಿಂತಲೂ ಹೆಚ್ಚಾಗಿ, ಈ ಗುಂಪುಗಳು ಶತ್ರುಗಳ ದ್ವೇಷದಿಂದ ಹೆಚ್ಚಾಗಿ ಪ್ರೇರೇಪಣೆ ಪಡೆದಿರುವುದು ಗೋಚರವಾಗುತ್ತದೆ.)[೨]

ನೈಜೀರಿಯಾ-ಸಂಜಾತ, ಇತಿಹಾಸ ಪ್ರಾಧ್ಯಾಪಕ ಹಾಗೂ ಮೊಂಟನಾದಲ್ಲಿ ಆಫ್ರಿಕನ್‌-ಅಮೆರಿಕನ್‌ ಅಧ್ಯಯನ ಪಠ್ಯಕ್ರಮದ ನಿರ್ದೇಶಕ ತೊಂಡೆ ಅದೆಲಕೆ ತಮ್ಮ ಕೃತಿ "ಅನ್‌ಆಫ್ರಿಕನ್ ಅಮೆರಿಕನ್ಸ್: ನೈಟೀಂತ್-ಸೆಂಚುರಿ ಆಫ್ರಿಕನ್ ನ್ಯಾಷ್ನಲಿಸ್ಟ್ಸ್ ಎಂಡ್ ದಿ ಸಿವಿಲೈಸಿಂಗ್ ಮಿಷನ್‌" ನಲ್ಲಿ, '೧೯ನೆಯ ಶತಮಾನದ ಆಫ್ರಿಕನ್‌-ಅಮೆರಿಕನ್‌ ರಾಷ್ಟ್ರೀಯತಾವಾದವು, ಯುರೋ-ಅಮೆರಿಕನ್‌ ಸಂಸ್ಕೃತಿಯ ಜನಾಂಗೀಯತೆ ಮತ್ತು ಪಿತೃಪ್ರಾಯತಾವಾದದ ಮೌಲ್ಯಗಳನ್ನು ಮೈಗೂಡಿಸಿಗೊಂಡಿವೆ. ಆಫ್ರಿಕನ್‌ ರಾಷ್ಟ್ರೀಯತಾವಾದ ಯೋಜನೆಗಳು ಆಫ್ರಿಕನ್ನರ ಶೀಘ್ರ ಅನುಕೂಲಕ್ಕಾಗಿ ವಿನ್ಯಾಸವಾಗಿಲ್ಲ, ಬದಲಿಗೆ ತಮ್ಮದೇ ದೆಸೆಗಳನ್ನು ಹೆಚ್ಚಿಸಿಕೊಳ್ಳಲಿಕ್ಕೆ' ಎಂದು ವಾದಿಸಿದ್ದಾರೆ.[೩] 'ಆಫ್ರಿಕನ್‌ ರಾಷ್ಟ್ರೀಯತಾವಾದದ ಚಿಂತನೆಯೊಳಗೆ ಕಾರ್ಯನಿರ್ವಹಿಸುವ ಸಾಮ್ರಾಜ್ಯಶಾಹಿಯ ಉದ್ದೇಶಗಳು ಹಾಗೂ ನಾಗರೀಕರಿಸುವ ಧ್ಯೇಯದ ಕಲ್ಪನೆ ಆಫ್ರಿಕಾದಲ್ಲಿ ಯುರೋಪಿಯನ್‌ ಸಾಮ್ರಾಜ್ಯಶಾಹಿ ರೂಪಿಸುವುದಕ್ಕೆ ಮತ್ತು ಕಾನೂನುಬದ್ಧತೆಗೆ ನೆರವು ನೀಡುತ್ತದೆ ಎಂದು ಅಡೆಲೆಕೆ ಟೀಕಿಸಿದ್ದಾರೆ.

ಉಲ್ಲೇಖಗಳು‌[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2009-04-25. Retrieved 2011-03-16.
  2. ೨.೦ ೨.೧ ಶಿರೋನಾಮೆಯಿಲ್ಲದ ಕಡತ[ಶಾಶ್ವತವಾಗಿ ಮಡಿದ ಕೊಂಡಿ]
  3. "ಯುನಿವರ್ಸಿಟಿ ಪ್ರೆಸ್‌ ಆಫ್‌ ಕೆಂಟುಕಿ". Archived from the original on 2007-09-28. Retrieved 2021-08-09.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಮೋಸಸ್‌, ವಿಲ್ಸನ್‌. ಕ್ಲಾಸಿಕಲ್‌ ಬ್ಲ್ಯಾಕ್‌ ನ್ಯಾಷನಲಿಸಮ್‌: ಫ್ರಮ್‌ ದಿ ಅಮೆರಿಕನ್‌ ರೆವೊಲ್ಯೂಷನ್‌ ಟು ಮರ್ಕಸ್‌ ಗಾರ್ವೆ (೧೯೯೬) ಉದ್ಧರಣೆ ಮತ್ತು ಪಠ್ಯ ಹುಡುಕುವಿಕೆ
  • ಪ್ರೈಸ್‌, ಮೆಲಾನ್ಯೆ, ಟಿ. ಡ್ರೀಮಿಂಗ್‌ ಬ್ಲ್ಯಾಕ್ನೆಸ್‌: ಬ್ಲ್ಯಾಕ್ ನ್ಯಾಷನಲಿಸಮ್‌ ಅಂಡ್‌ ಆಫ್ರಿಕನ್‌ ಅಮೆರಿಕನ್‌ ಪಬ್ಲಿಕ್‌ ಒಪೀನಿಯನ್‌ (೨೦೦೯) ಉದ್ದರಣೆ ಮತ್ತು ಪಠ್ಯ ಶೋಧ
  • ಟೇಲರ್‌, ಜೇಮ್ಸ್‌ ಲ್ಯಾನ್ಸ್‌. ಬ್ಲ್ಯಾಕ್‌ ನ್ಯಾಷನಲಿಸಮ್‌ ಇನ್‌ ದಿ ಯುನೈಟೆಡ್‌ ಸ್ಟೇಟ್ಸ್‌: ಫ್ರಮ್‌ ಮ್ಯಾಲ್ಕಮ್‌ ಎಕ್ಸ್‌ ಟು ಬಾರಕ್‌ ಒಬಾಮಾ (ಲಿನ್‌ ರೀನರ್‌ ಪಬ್ಲಿಷರ್ಸ್‌; ೨೦೧೧) ೪೧೪ ಪುಟಗಳು
  • ವಾನ್ ಡಿಬರ್ಗ್‌‌, ವಿಲಿಯಮ್. ಮಾಡರ್ನ್‌ ಬ್ಲ್ಯಾಕ್‌ ನ್ಯಾಷನಲಿಸಮ್‌: ಪ್ರಮ್‌ ಮಾರ್ಕಸ್‌ ಗಾರ್ವೆ ಟು ಲೂಯಿಸ್‌ ಫರಖಾನ್‌ (೧೯೯೬)

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಆಫ್ರಿಕನ್‌ ಮಧ್ಯಮಾರ್ಗ
  • ಹ್ಯಾರಿ ಹೇವುಡ್‌
  • ಬ್ಯಾಕ್-ಟು-ಆಫ್ರಿಕಾ ಚಳವಳಿ
  • ಜನಾಂಗೀಯ ರಾಷ್ಟ್ರೀಯತೆ
  • ಆಫ್ರಿಕಾದ ಅರಾಜಕತಾವಾದ
  • ಪೆಸಿಫಿಕ್‌ ಮೂವ್ಮೆಂಟ್‌ ಆಫ್‌ ದಿ ಈಸ್ಟರ್ನ್‌ ವರ್ಲ್ಡ್‌
  • ಪ್ಯಾನ್‌-ಆಫ್ರಿಕನಿಸಮ್‌
  • ಕರಿಯರ ಪ್ರತ್ಯೇಕತಾವಾದಿ ಚಳವಳಿ
  • ಕರಿಯರ ಪಾರಮ್ಯ