ಇಕ್ಕೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಇದು ಸಾಗರ ಪಟ್ಟಣದಿಂದ ಆರು ಕಿಲೋಮೀಟರ್ ದೂರದಲ್ಲಿದೆ, ಸಹ್ಯಾದ್ರಿಯ ವನರಾಜಿಯ ನಡುವಿನಲ್ಲಿದೆ..

ಸನ್ನಿವೇಶ : 14º 08' ಉದ್ದ. ಅಗಲ; 75º 5' ಪೂ.ರೇ.

ಇಲ್ಲಿನ ಅಘೋರೇಶ್ವರ ದೇವಸ್ಥಾನ ತುಂಬಾ ಪ್ರಸಿದ್ಧವಾಗಿದೆ. ಇದರ ಎಡಭಾಗಕ್ಕೆ ಅಖಿಲಾಂಡೇಶ್ವರಿ ಅಮ್ಮನವರ ದೇವಾಲಯವೂ ಇದೆ.

ಇತಿಹಾಸ[ಬದಲಾಯಿಸಿ]

ಇಕ್ಕೇರಿಯು 16 ಮತ್ತು 17ನೆಯ ಶತಮಾನಗಳಲ್ಲಿ ಕೆಳದಿ ಅರಸರ ವೈಭವಾನ್ವಿತ ರಾಜಧಾನಿಯಾಗಿ ಮೆರೆಯಿತು. ರುವ ಈ ಹಳ್ಳಿ 1560 ರಿಂದ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು. ಆದರೂ ಇಕ್ಕೇರಿ ಕೆಳದಿ ಅರಸರ ರಾಜಧಾನಿ ಎಂಬ ಗೌರವವನ್ನು ಬಹಳ ಕಾಲ ಪಡೆದಿತ್ತು. ಇಕ್ಕೇರಿಯಿಂದ ಟಂಕಸಾಲೆಯ ವರ್ಗವಾದರೂ ಇಕ್ಕೇರಿ ಪಗೋಡ, ಇಕ್ಕೇರಿ ಪಣಗಳು ಚಲಾವಣೆಯಲ್ಲಿದ್ದವು.

ನಗರದ ಸುತ್ತಲೂ ಮೂರು ಸುತ್ತುಕಟ್ಟು ಆವರಣಗಳ ವಿಶಾಲವಾದ ಕೋಟೆ ಗೋಡೆಗಳಿದ್ದುವು. ಕೋಟೆಯಲ್ಲಿ ಅರಮನೆ ಮತ್ತು ಭವ್ಯ ಕಟ್ಟಡಗಳಿದ್ದುವು. ಗತವೈಭವದ ಕುರುಹಾಗಿ ಈಗ ಅಲ್ಲಿ ಉಳಿದಿರುವುದು ಅಘೋರೇಶ್ವರ ದೇವಾಲಯ ಮಾತ್ರ. ಈ ದೇವಾಲಯದಲ್ಲಿನ ಮಧ್ಯದ ಕಂಬಗಳ ಪರಸ್ಪರ ದೂರವನ್ನು ಬಾಗಾಯತಿನ ಪ್ರಮಾಣಬದ್ಧ ಅಳತೆ ಎಂದು ಪರಿಗಣಿಸಲಾಗುತ್ತಿತ್ತು. ಈ ಮಾನವನ್ನು ದಾಯ ಎಂದು ಕರೆಯುತ್ತಿದ್ದರು.

ಅಘೋರೇಶ್ವರ ದೇವಸ್ಥಾನ[ಬದಲಾಯಿಸಿ]

ಅಘೋರೇಶ್ವರ ದೇವಸ್ಥಾನ

ಅಘೋರೇಶ್ವರ ದೇವಸ್ಥಾನವು ಹೊಯ್ಸಳ-ಕದಂಬ ಶೈಲಿಯಲ್ಲಿದೆ. ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಇದನ್ನು ಹೊಂಬುಚದ ವೆಂಕಟಯ್ಯ ಎಂಬ ಶಿಲ್ಪಿ ಕಟ್ಟಿದನೆಂದು ದೇಗುಲದಲ್ಲಿನ ಕಲ್ಲಿನ ಹಳೆಗನ್ನಡದ ಬರಹವೊಂದು ಹೇಳುತ್ತದೆ.ಉತ್ತರ-ದಕ್ಷಿಣ ದಿಕ್ಕಿನಲ್ಲಿರುವ ಈ ದೇಗುಲವು ಗರ್ಭಗೃಹ, ಅರ್ಧಮಂಟಪ, ಮುಖಮುಂಟಪ ಮತ್ತು ಎದುರಿಗೆ ನಂದಿಗೆ ಪ್ರತ್ಯೇಕ ಮಂಟಪವನ್ನು ಹೊಂದಿದೆ.ಗರ್ಭಗೃಹದಲ್ಲಿ ಕಲ್ಲಿನ ಶಿವಲಿಂಗವಿದೆ. ಈ ದೇವಾಲಯದಲ್ಲಿ ೩೨ ಕೈಗಳ ಅಘೋರೇಶ್ವರನ ಉತ್ಸವ ಮೂರ್ತಿಯಿದೆ. ಅರ್ಧಮಂಟಪದಲ್ಲಿ ಬಿಳಿ ಕಲ್ಲಿನಿಂದ (ಅಮೃತ ಕಲ್ಲಿನಿಂದ) ಕೆತ್ತಿದ ಸಣ್ಣ ನಂದಿಯಿದೆ. ಅರ್ಧಮಂಟಪದ ದ್ವಾರದಲ್ಲಿ ಎರಡೂ ಬದಿಯಲ್ಲಿ ಅಘೋರೇಶ್ವರನ ಪರಿವಾರದ ಕೆತ್ತನೆಗಳಿವೆ. ಎಡಭಾಗದಲ್ಲಿ ಮಹಿಷಮರ್ದಿನಿ, ಭೈರವನ ಕೆತ್ತನೆಗಳಿದ್ದರೆ ಬಲಭಾಗದಲ್ಲಿ ಗಣಪತಿ, ಷಣ್ಮುಖನ ಕೆತ್ತನೆಗಳಿವೆ. ಎದುರಿನ ಮುಖಮಂಟಪ ಕೆತ್ತನೆಯಿರುವ ಕಂಬಗಳ ಆಧಾರದ ಮೆಲೆ ನಿಂತಿದೆ. ದೇಗುಲವು ದ್ರಾವಿಡ ಶೈಲಿಯ ಕಳಸವನ್ನು ಹೊಂದಿದೆ. ದೇಗುಲದ ಪಶ್ಚಿಮದಲ್ಲಿ ಇದೇ ಶೈಲಿಯ ಆದರೆ ಸ್ವಲ್ಪ ಸಣ್ಣದಾದ ಅಖಿಲಾಂಡೇಶ್ವರಿಯ ದೇಗುಲವಿದೆ. ದೇವಸ್ಥಾನದ ಎದುರು ಕಲ್ಲಿನ ಬೃಹತ್ ಬಸವನ ವಿಗ್ರಹವಿದ್ದು, ಅದರ ಒಂದು ಕಾಲಿನ ಕೆಳಭಾಗದಲ್ಲಿ ಚಿಕ್ಕ ಮಕ್ಕಳು ನುಸುಳುವಷ್ಟು ಜಾಗವಿದ್ದು, ಅದರಲ್ಲಿ ನುಸುಳಿದರೆ ಇಷ್ಟಾರ್ಥ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿಯಿದೆ. ದೇವಸ್ಥಾನದ ಹೊರ ಆವರಣವು ಹಚ್ಚ ಹಸುರಿನ ಹುಲ್ಲು ಹಾಸಿನಿಂದ ಕಂಗೊಳಿಸುತ್ತದೆ.

ದಂತಕತೆಗಳು[ಬದಲಾಯಿಸಿ]

ಇಕ್ಕೇರಿಯ ಗುಡಿಯ ಗೋಡೆಯಲ್ಲಿ ಕೆತ್ತಿರುವ ಹಲ್ಲಿಗಳು
  • ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನು ಜೊತೆಗೆ ಒಂದು ಚೇಳನ್ನೂ ಕೆತ್ತಲಾಗಿದ್ದು ಆ ಹಲ್ಲಿಗಳು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ, ಆದರೆ ಅಲ್ಲಿರುವ ಚೇಳು ಅವನ್ನು ತಡೆಯುತ್ತದೆ ಎಂಬ ಐತಿಹ್ಯವಿದೆ[೧]
  • ದೇವಾಲಯದ ಎರಡೂ ಬದಿಗಳಲ್ಲಿ ಕೆರೆಗಳಿದ್ದು, ಅವುಗಳಿಂದಲೇ ಈ ಊರಿಗೆ ಇಕ್ಕೇರಿ (ಎರೆಡು + ಕೆರೆ = ಇಕ್ಕೆರೆ) ಎಂಬ ಹೆಸರು ಬಂದಿದೆ ಎಂಬ ಊಹೆ ಇದೆ

ಇವನ್ನೂ ನೋಡಿ[ಬದಲಾಯಿಸಿ]

ಇನ್ನಷ್ಟು ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಕ್ಕೇರಿ&oldid=1023336" ಇಂದ ಪಡೆಯಲ್ಪಟ್ಟಿದೆ