ಬಾಜಿಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Baazigar
ಚಿತ್ರ:Baazigar1993.jpg
Baazigar poster
ನಿರ್ದೇಶನAbbas Mustan
ನಿರ್ಮಾಪಕGanesh Jain
ಲೇಖಕRobin Bhatt,
Akash Khurana,
Javed Siddiqui
ಪಾತ್ರವರ್ಗShahrukh Khan,
Kajol,
Shilpa Shetty,
Rakhee,
Dalip Tahil,
Anant Mahadevan,
Siddharth,
Johnny Lever
ಸಂಗೀತAnu Malik
ವಿತರಕರುEros Labs
ಬಿಡುಗಡೆಯಾಗಿದ್ದು12 November 1993
ಅವಧಿ181 min.
ದೇಶ ಭಾರತ
ಭಾಷೆHindi

ಬಾಜಿಗರ್ [[[ಹಿಂದಿ]] (ದೇವನಾಗರಿ): बाज़ीगर, ಉರ್ದು/ಪರ್ಷಿಯನ್‌‌‌ (ನಸ್ಟಾಲಿಕ್‌‌): بازیگ ಇಂಗ್ಲಿಷ್‌‌: ಗ್ಯಾಂಬ್ಲರ್‌‌‌ ] ಎಂಬುದು 1993ರಲ್ಲಿ ಬಂದ ಒಂದು ಭಾರತೀಯ ಹಿಂದಿ ಚಲನಚಿತ್ರವಾಗಿದ್ದು, ಅಬ್ಬಾಸ್‌‌‌‌-ಮಸ್ತಾನ್‌‌ ಈ ಚಿತ್ರವನ್ನು ನಿರ್ದೇಶಿಸಿದರು. 1953ರಲ್ಲಿ ಬಂದ ಇರಾ ಲೆವಿನ್‌‌‌ನ ಎ ಕಿಸ್‌ ಬಿಫೋರ್‌ ಡೈಯಿಂಗ್‌‌ ಎಂಬ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು ಒಂದು ಸಮಕಾಲೀನ ರೋಮಾಂಚಕ ಕೃತಿಯಾಗಿದ್ದು, ತಾನು ಬಯಸಿದ್ದನ್ನು ಪಡೆಯುವುದಕ್ಕಾಗಿ ಯಾವುದಕ್ಕೂ ಹೇಸದೆ ನಿರ್ದಯಿಯಾಗಿ ವರ್ತಿಸುವ ಓರ್ವ ಯುವಕನ ಕುರಿತ ಚಿತ್ರಣವಾಗಿದೆ. ಇಬ್ಬಗೆಯ ವರ್ತನೆಯ ಓರ್ವ ಕಥಾನಾಯಕನನ್ನು ಒಳಗೊಂಡಿದ್ದ ಈ ಚಿತ್ರವು, ಬಾಲಿವುಡ್‌‌‌ನ ಪ್ರಮಾಣಕ ಸಿದ್ಧ-ಸೂತ್ರವನ್ನು ಅನಿರೀಕ್ಷಿತವಾಗಿ ಮುರಿಯುವುದರ ಮೂಲಕ ತನ್ನ ಭಾರತೀಯ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿತು. ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸನ್ನು ದಾಖಲಿಸಿತು. ಓರ್ವ ಏಕಮೇವ ನಾಯಕನಾಗಿ ಇದು ಶಾರುಖ್‌ ‌ಖಾನ್‌‌‌‌‌‌ನ ಮೊದಲ ಚಲನಚಿತ್ರವಾಗಿದ್ದಷ್ಟೇ ಅಲ್ಲ, ಶಿಲ್ಪಾ ಶೆಟ್ಟಿಯ ಪ್ರಥಮ ಪ್ರವೇಶದ ಚಲನಚಿತ್ರವೂ ಆಗಿತ್ತು. ಈ ಚಲನಚಿತ್ರವು ಖಾನ್‌‌‌ನನ್ನು ಪ್ರಸಿದ್ಧಿಯ ತುತ್ತತುದಿಗೆ ಮುಟ್ಟಿಸುತ್ತಿದ್ದಂತೆ, ಅಗಾಧವಾದ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರಚಂಡ ಜನಪ್ರಿಯತೆಯನ್ನು ಅವನು ಸ್ವೀಕರಿಸಿದ. ಶಾರುಖ್‌ ‌ಖಾನ್‌‌‌‌‌‌ ಖಳನಾಯಕ-ಛಾಯೆಯ ಒಂದು ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ಚಲನಚಿತ್ರ ಎಂಬ ಕೀರ್ತಿಗೂ ಬಾಜಿಗರ್‌‌‌ ಪಾತ್ರವಾಯಿತು; ನಂತರ ಅದೇ ವರ್ಷದಲ್ಲಿ ಬಿಡುಗಡೆಯಾದ ಡರ್‌‌‌‌‌ ಮತ್ತು ನಂತರದ ವರ್ಷದಲ್ಲಿ ಬಿಡುಗಡೆಯಾದ ಅಂಜಾಮ್‌‌ ಚಿತ್ರಗಳಲ್ಲಿಯೂ ಶಾರುಖ್‌ ‌ಖಾನ್‌ಗೆ ಖಳನಾಯಕ-ಛಾಯೆಯ ಪಾತ್ರಗಳಿದ್ದವು.

ಕಥಾವಸ್ತು[ಬದಲಾಯಿಸಿ]

ಅಜಯ್‌‌ ಶರ್ಮಾ (ಶಾರುಖ್‌ ‌ಖಾನ್‌‌), ಪ್ರತೀಕಾರವನ್ನು ತೀರಿಸಿಕೊಳ್ಳಲು ಬಯಸುತ್ತಿರುವ ಓರ್ವ ವ್ಯಕ್ತಿಯಾಗಿರುತ್ತಾನೆ. ಅವನ ತಂದೆಯಾದ ವಿಶ್ವನಾಥ್‌‌ ಶರ್ಮಾ (ಅನಂತ್‌‌ ಮಹಾದೇವನ್‌‌) ಹಿಂದೆ ಒಂದು ಮಹಾನ್‌ ವ್ಯವಹಾರ ಸಾಮ್ರಾಜ್ಯದ ಮಾಲೀಕನಾಗಿದ್ದು, ತನ್ನದೇ ಕಂಪನಿಯಲ್ಲಿ ಓರ್ವ ನಂಬಿಕೆಯ ನೌಕರನಾಗಿದ್ದ ಮದನ್‌ ಚೋಪ್ರಾನಿಂದ (ದಲಿಪ್‌ ತಾಹಿಲ್‌‌) ವಂಚಿಸಲ್ಪಡುತ್ತಾನೆ. ತನ್ನದೇ ಸ್ವಂತದ ಕಂಪನಿಯಿಂದ ಹೊರದೂಡಲ್ಪಡುವ ಶರ್ಮಾ ಕುಟುಂಬವು ತಾನು ಹೊಂದಿದ್ದ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಇದಾದ ಕೆಲ ಸಮಯದಲ್ಲಿಯೇ, ಅಜಯ್‌‌‌ನ ತಂದೆ ಮತ್ತು ಶಿಶುವಾಗಿದ್ದ ಅವನ ಕಿರಿಯ ಸೋದರಿ ಸಾಯುತ್ತಾರೆ. ಈ ಸಂದರ್ಭದಲ್ಲಿ ಅವನ ತಾಯಿಯು (ರಾಖೀ) ಮಾನಸಿಕ ಅಸ್ವಸ್ಥತೆಗೆ ಈಡಾಗುತ್ತಾಳೆ ಮತ್ತು ಸ್ಮರಣಶಕ್ತಿಯನ್ನು ಕಳೆದುಕೊಳ್ಳುತ್ತಾಳೆ. ಈ ಎಲ್ಲಾ ಘಟನೆಗಳೂ ಪ್ರತೀಕಾರವನ್ನು ತೀರಿಸಿಕೊಳ್ಳುವಂತೆ ಅಜಯ್‌‌‌ನನ್ನು ಪ್ರೇರೇಪಿಸುತ್ತವೆ. ತನಗೆ ಈ ಅನ್ಯಾಯವನ್ನು ಉಂಟುಮಾಡಿದ ವ್ಯಕ್ತಿಯನ್ನು ಸಾಯಿಸಲು ಮತ್ತು ಅವನ ಕುಟುಂಬಕ್ಕೂ ಇದೇ ಗತಿಯನ್ನು ತರಲು ಅವನು ಬಯಸುತ್ತಾನೆ. ಮತ್ತು ಇದನ್ನು ಕೈಗೊಳ್ಳಲು ಯಾವುದೇ ಮಟ್ಟಕ್ಕಾದರೂ ಹೋಗಲು ಅವನು ಸಿದ್ಧನಿರುತ್ತಾನೆ.

ಚೋಪ್ರಾ ವ್ಯವಹಾರ ಸಾಮ್ರಾಜ್ಯದ ಮಾಲೀಕನ ಮಗಳಾದ ಸೀಮಾ ಚೋಪ್ರಾ (ಶಿಲ್ಪಾ ಶೆಟ್ಟಿ) ಜೊತೆಯಲ್ಲಿ ಅಜಯ್‌‌‌ ವಿಹಾರವನ್ನು (ಡೇಟಿಂಗ್‌‌) ಶುರುಮಾಡಿಕೊಳ್ಳುತ್ತಾನೆ. ಓರ್ವ ಬಡ ಅಳಿಯನನ್ನು ಅವಳ ತಂದೆಯು ಒಪ್ಪುವುದು ಅಸಾಧ್ಯವಾಗಿರುತ್ತದೆಯಾದ್ದರಿಂದ, ಅವರು ಪರಸ್ಪರ ರಹಸ್ಯವಾಗಿ ಸಂಧಿಸುತ್ತಿರುತ್ತಾರೆ. ಈ ಮಧ್ಯೆ, ಕಿರಿಯ ಮಗಳಾದ ಪ್ರಿಯಾ ಚೋಪ್ರಾ (ಕಾಜೋಲ್‌‌) ತನ್ನ ತಂದೆ ಮದನ್‌ ಚೋಪ್ರಾ ಜೊತೆಯಲ್ಲಿ ಮದ್ರಾಸ್‌‌ಗೆ (ಈಗಿನ ಚೆನ್ನೈ) ಪ್ರಯಾಣಿಸುತ್ತಾಳೆ; ಅಲ್ಲಿ ನಡೆಯುವ ಮೋಟಾರು ಓಟದ ಪಂದ್ಯದಲ್ಲಿ ಅವನು ಭಾಗವಹಿಸುವುದು ನಿಗದಿಯಾಗಿದ್ದು, ಇದು ಅವನು ಕಾಯಮ್ಮಾಗಿ ನಿವೃತ್ತಿಯಾಗುವುದಕ್ಕೆ ಮುಂಚಿನ ಕೊನೆಯ ಪಂದ್ಯವಾಗಿರುತ್ತದೆ. ಈ ಮುಂಚೆ ಪಂದ್ಯದಲ್ಲಿ ಎಂದಿಗೂ ಸೋಲದಿದ್ದ ಮದನ್‌‌, ವಿಕಿ ಮಲ್ಹೋತ್ರಾನನ್ನು [ಅವನು ಬೇರಾರೂ ಆಗಿರದೆ, ಕಂದುಬಣ್ಣದ ಸಂಪರ್ಕ-ಮಸೂರಗಳನ್ನು (ಕಾಂಟಾಕ್ಟ್‌-ಲೆನ್ಸ್‌‌ಗಳು) ಧರಿಸಿ ವೇಷಮರೆಸಿಕೊಂಡಿರುವ ಅಜಯ್‌‌ ಶರ್ಮಾ ಆಗಿರುತ್ತಾನೆ] ಪಂದ್ಯದಲ್ಲಿನ ಸಹಸ್ಪರ್ಧಿಯಾಗಿ ಭೇಟಿಯಾಗುತ್ತಾನೆ. ವಿಕಿ ಪಂದ್ಯದ ಕೊನೆಯ ಸಂಧಿಸ್ಥಾನದಲ್ಲಿ ತನ್ನ ಮೋಟಾರಿನ ವೇಗವನ್ನು ತಗ್ಗಿಸುವ ಮೂಲಕ, ಮದನ್‌‌ನ ಗೆಲುವಿಗೆ ಅವಕಾಶ ಮಾಡಿಕೊಡುತ್ತಾನೆ ಮತ್ತು ತನ್ನ "ಗುರು"ವನ್ನು ತಾನು ಸೋಲಿಸಲಾರೆ ಎಂದು ಮದನ್‌ಗೆ ಹೇಳುತ್ತಾನೆ. ವಿಕಿ ನಂತರ ತನ್ನ ಮಾತನ್ನು ಮುಂದುವರೆಸುತ್ತಾ, ಓರ್ವ ಸುಂದರ ಹುಡುಗಿಯ ಹೃದಯವನ್ನು ಒಡೆಯುವುದು ತನಗೆ ಅಸಾಧ್ಯವಾದ ಕೆಲಸವಾದ್ದರಿಂದ, ಓಟದ ಪಂದ್ಯದಲ್ಲಿ ತಾನು ಸೋತದ್ದಾಗಿ ಹೇಳುವ ಮೂಲಕ ಪ್ರಿಯಾಳನ್ನು ಆಕರ್ಷಿಸುತ್ತಾನೆ. ಈ ರೀತಿಯಾಗಿ, ಅವನು ಪ್ರಿಯಾಳ ಹೃದಯವನ್ನು ಗೆಲ್ಲುವುದರಿಂದ, ಕಳೆದುಕೊಳ್ಳುವ ಮೂಲಕ ಜಯಿಸುವ (ಬಾಜಿಗರ್‌‌‌ ಎಂಬರ್ಥದ) ಅವನ ತಂತ್ರ ಯಶಸ್ವಿಯಾಗುತ್ತದೆ. ಈ ರೀತಿಯಲ್ಲಿ, ವಿಭಿನ್ನ ಗುರುತುಗಳನ್ನು ಬಳಸುವ ಮೂಲಕ ಅವನು ಏಕಕಾಲಿಕವಾಗಿ ಸೀಮಾ ಮತ್ತು ಪ್ರಿಯಾ ಈ ಇಬ್ಬರೊಂದಿಗೂ ತನ್ನ ವಿಹಾರವನ್ನು ನಿರ್ವಹಿಸಿಕೊಂಡು ಹೋಗುತ್ತಾನೆ.

ಸೀಮಾಳ ಹುಟ್ಟುಹಬ್ಬದ ಸಂತೋಷಕೂಟವು ನಡೆಯುತ್ತಿರುವ ಕೋಣೆಯ ಹೊರಗಡೆ ಹೊಂಚಿ ಕಾಯುತ್ತಿರುವವನ ರೀತಿಯಲ್ಲಿ ಅಜಯ್‌ ನಿಂತಿರುವಾಗ, ಅವಳ ಸ್ನೇಹಿತರ ಪೈಕಿ ಒಬ್ಬರು (ಆಕಸ್ಮಿಕವಾಗಿ) ಅವನ ಛಾಯಾಚಿತ್ರವನ್ನು ತೆಗೆದಿರುತ್ತಾರೆ. ನಂತರದಲ್ಲಿ, ಮತ್ತೊಂದು ವ್ಯವಹಾರಸ್ಥ ಕುಟುಂಬಕ್ಕೆ ಸೇರಿದ ಹುಡುಗನೊಂದಿಗೆ ಸೀಮಾಳ ಮದುವೆ ಮಾಡಿಮುಗಿಸಲು ಮದನ್‌ ಚೋಪ್ರಾ ಏರ್ಪಾಡುಮಾಡುತ್ತಾನೆ. ಇದನ್ನು ಕೇಳಿ ಸೀಮಾ ಭಗ್ನ ಹೃದಯಿಯಾಗುತ್ತಾಳೆ. ಒಂದೇ ರೀತಿಯಲ್ಲಿರುವ ಆತ್ಮಹತ್ಯೆಯ ಪತ್ರಗಳನ್ನು ತಾವಿಬ್ಬರೂ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಳ್ಳುವುದೆಂದು ಅಜಯ್‌‌‌ ನಿರ್ಧರಿಸುತ್ತಾನೆ. ಇಬ್ಬರೂ ತಂತಮ್ಮ ಆತ್ಮಹತ್ಯೆಯ ಪತ್ರಗಳನ್ನು ಬರೆದಾಗ, ಈ ಆತ್ಮಹತ್ಯೆಯ ಪತ್ರವು ಕೇವಲ ಒಂದು ಪರೀಕ್ಷೆಯಾಗಿತ್ತೆಂದು ಅವನು ಹೇಳುತ್ತಾನೆ. ಕೇವಲ ಹೇಡಿಗಳ ಮಾತ್ರವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುವ ಅವನು, ತನ್ನ ಪತ್ರವನ್ನು ನಾಶಪಡಿಸಿ ಸೀಮಾಳ ಪತ್ರವನ್ನು ಹಾಗೆಯೇ ಇಟ್ಟುಕೊಳ್ಳುತ್ತಾನೆ. ಮರುದಿನವೇ ರಹಸ್ಯವಾಗಿ ಮದುವೆಯಾಗಲು ಅವರು ನಿರ್ಧರಿಸುತ್ತಾರೆ. ಅದರಂತೆಯೇ ನೋಂದಣಾಧಿಕಾರಿಯ ಕಚೇರಿಗೆ ಬಂದಾಗ ಅದು ಮುಚ್ಚಿರುತ್ತದೆ; ಅದ್ದರಿಂದ ಒಂದಷ್ಟು ದೃಶ್ಯವೀಕ್ಷಣೆ ಮಾಡಲು ಅವರು ಕಟ್ಟಡದ ಚಾವಣಿಯ ಮೇಲ್ಭಾಗಕ್ಕೆ ಹೋಗುತ್ತಾರೆ. ಅವಳನ್ನು ಮೋಟುಗೋಡೆಯ ಮೇಲೆ ಕೂರಿಸುವ ಅವನು ತನ್ನ ಕುರಿತಾದ ಸತ್ಯವನ್ನು ಅವಳಿಗೆ ಹೇಳುತ್ತಾನೆ; ನಂತರ ಆ ಕಟ್ಟಡದ ಚಾವಣಿಯ ಮೇಲಿನಿಂದ ಅವಳನ್ನು ಕೆಳಕ್ಕೆ ನೂಕಿ ಬೀಳಿಸಿ ಸಾಯಿಸುತ್ತಾನೆ. ನಂತರ ಕಟ್ಟಡದ ಕೆಳಗಿಳಿದುಬಂದು ತನ್ನ ಬಳಿಯಿದ್ದ ಸೀಮಾಳ ಆತ್ಮಹತ್ಯೆಯ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಿ, ಆ ಜಾಗವನ್ನು ಖಾಲಿಮಾಡುತ್ತಾನೆ; ಆದರೆ ನಂತರ (ವಿಕಿಯ ರೂಪದಲ್ಲಿ) ಪ್ರಿಯಾ ಜೊತೆಯಲ್ಲಿ ಆಗಮಿಸುತ್ತಾನೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅವನು ಚೋಪ್ರಾ ಕುಟುಂಬಕ್ಕೆ ನೆರವಾಗುತ್ತಾನೆ. ಸೀಮಾಳಿಂದ ಬರೆಯಲ್ಪಟ್ಟಿದ್ದ ಪತ್ರವು ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂಬುದನ್ನು ಸೂಚಿಸುತ್ತದೆ, ಮತ್ತು ಕೊಲೆ-ಸಂಬಂಧಿ ತನಿಖೆಯು ಅಲ್ಲಿಗೇ ಮುಗಿದಂತಾಗುತ್ತದೆ. ಆದರೆ ಇದನ್ನು ಪ್ರಿಯಾ ನಂಬುವ ಸ್ಥಿತಿಯಲ್ಲಿರುವುದಿಲ್ಲ; ಸದರಿ ಪ್ರಕರಣವನ್ನು ಮತ್ತೆ-ತೆರೆಸುವಂತೆ ಅವಳು ತನ್ನ ತಂದೆಯನ್ನು ಕೇಳಿಕೊಳ್ಳುತ್ತಾಳೆ. ಆದಾಗ್ಯೂ, ಸೀಮಾಳ ಪ್ರೇಮ ಪ್ರಕರಣದಿಂದಾಗಿ ತನ್ನ ಪ್ರತಿಷ್ಠೆಯನ್ನು ಕಳೆದುಕೊಳ್ಳಲು ತಾನು ಸಿದ್ಧನಿಲ್ಲ ಎಂದು ಹೇಳುವ ಮೂಲಕ, ಅವನು ಈ ಬೇಡಿಕೆಗೆ ಅಸಮ್ಮತಿಸುತ್ತಾನೆ. ಹಿಂದೆ ತನ್ನ ಸಹಪಾಠಿಯಾಗಿದ್ದು, ಹಾಲಿಯಾಗಿ ಓರ್ವ ಆರಕ್ಷಕ ನಿರೀಕ್ಷಕನಾಗಿರುವ ಕರಣ್‌‌ನನ್ನು (ಸಿದ್ಧಾರ್ಥ್‌‌) ನಂತರ ಸಂಪರ್ಕಿಸುವ ಪ್ರಿಯಾ ಈ ಕುರಿತು ನೆರವಾಗಲು ಕೇಳಿಕೊಳ್ಳುತ್ತಾಳೆ.

ಸೀಮಾಳ ಸಾವಿನ ಕುರಿತಾಗಿ ತನಿಖೆ ನಡೆಸಲು ಪ್ರಿಯಾ ಯತ್ನಿಸುತ್ತಾಳಾದರೂ, ಅವಳ ಪ್ರಯತ್ನಗಳು ನಿರರ್ಥಕವಾಗುತ್ತವೆ. ಸೀಮಾಳ ಕಾಲೇಜು ಸ್ನೇಹಿತನಾದ ರವಿಯು ಈ ನಿಟ್ಟಿನಲ್ಲಿ ಅವಳಿಗೆ ನೆರವಾಗುವುದಾಗಿ ಹೇಳುತ್ತಾನಾದರೂ, ವಿಕಿಯಿಂದ ಅವನು ಕ್ರೂರವಾಗಿ ಸಾಯಿಸಲ್ಪಡುತ್ತಾನೆ. ಅವನನ್ನು ನೇಣುಹಾಕುವುದಕ್ಕೆ ಮುಂಚಿತವಾಗಿ ಆತ್ಮಹತ್ಯೆಯ ಟಿಪ್ಪಣಿಪತ್ರವೊಂದಕ್ಕೆ ವಿಕಿ ಅವನಿಂದ ಸಹಿಹಾಕಿಸಿಕೊಳ್ಳುತ್ತಾನೆ; ರವಿಯು ಪ್ರಾಯಶಃ ಸೀಮಾಳನ್ನು ಪ್ರೀತಿಸುತ್ತಿದ್ದುದರಿಂದ ಅವನೇ ಅವಳ ಕೊಲೆಗಾರನಿರಬೇಕು ಎಂದು ಕರಣ್ ಭಾವಿಸುತ್ತಾನೆ. ನಂತರ, ಸೀಮಾಳ ಕಾಲೇಜು ಸ್ನೇಹಿತೆಯಾದ ಅಂಜಲಿಯನ್ನು ಪ್ರಿಯಾ ಮತ್ತು ವಿಕಿ ಸಂಧಿಸುತ್ತಾರೆ; ವಿಕಿಯ ಕುರಿತಾಗಿ ಅಂಜಲಿಯಲ್ಲಿ ಸಂದೇಹ ಹುಟ್ಟಿಕೊಳ್ಳುತ್ತದೆ. ಹಿಂದೆ ಕಾಲೇಜಿನಲ್ಲಿ ಓದುತ್ತಿರುವಾಗ ಅವನು ಸೀಮಾಳ ಸಂಗಾತಿಯಾಗಿದ್ದ ಎಂಬುದನ್ನು ಕಂಡುಕೊಳ್ಳುವ ಅವಳು, ವಿಕಿಯ ಮತ್ತು ಪ್ರಿಯಾಳ ನಿಶ್ಚಿತಾರ್ಥ ಸಂತೋಷಕೂಟದ ಸಂದರ್ಭದಲ್ಲಿ ಶರ್ಮಾ ಮನೆಯವರಿಗೆ ಕರೆಮಾಡುತ್ತಾಳೆ. ಸದರಿ ಕರೆಯು ಬೇರೆಯವರಿಗೆ ಸಿಗದಂತೆ ಚಾಣಾಕ್ಷತನದಿಂದ ಪ್ರತಿಬಂಧಿಸುವ ವಿಕಿ, ತನ್ನನ್ನು ಚೋಪ್ರಾನ ರೀತಿಯಲ್ಲಿ ಬಿಂಬಿಸಿಕೊಂಡು ದೂರವಾಣಿಯಲ್ಲಿ ಅವಳೊಂದಿಗೆ ಮಾತನಾಡುತ್ತಾ ವಿಷಯವನ್ನು ಗ್ರಹಿಸುತ್ತಾನೆ, ಮತ್ತು ಅವಳು ಉಳಿದುಕೊಂಡಿದ್ದ ಸ್ಥಳಕ್ಕೆ ಆಗಮಿಸುತ್ತಾನೆ. ಅವಳ ಕುತ್ತಿಗೆಯನ್ನು ಹಿಸುಕುವ ಆತ, ಆಮೇಲೆ ಅವಳ ದೇಹವನ್ನು ಒಂದು ಸೂಟ್‌ಕೇಸ್‌ನ‌ಲ್ಲಿ ಅಡಕಗೊಳಿಸಿ, ನದಿಯೊಳಗೆ ಎಸೆಯುತ್ತಾನೆ.

ಅಜಯ್‌‌‌ನ ತಂದೆಗೆ ಅನೇಕ ವರ್ಷಗಳ ಹಿಂದೆ ಚೋಪ್ರಾ ಮಾಡಿದ್ದ ರೀತಿಯಲ್ಲಿಯೇ, ಮದನ್‌ ಚೋಪ್ರಾನ ಆಸ್ತಿ-ಪಾಸ್ತಿಗಳನ್ನು ಕಸಿದುಕೊಂಡು, ಕಚೇರಿಯಿಂದ ಅವನನ್ನು ಆಚೆಗೆ ಎಸೆದು ಬೀದಿಗೆ ಬರುವಂತೆ ಮಾಡಿ, ಅವನನ್ನು ನಾಶಪಡಿಸಲು ವಿಕಿಯು ಶಪಥ ಮಾಡುತ್ತಾನೆ. ಚೋಪ್ರಾ ಒಂದು ವ್ಯವಹಾರ ಸಂಬಂಧಿ ಪ್ರವಾಸವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಒದಗಿಬರುತ್ತದೆ. ವಿಕಿಯು ಹೇಗಿದ್ದರೂ ಸದ್ಯದಲ್ಲಿಯೇ ತನ್ನ ಅಳಿಯನಾಗುವವ ಎಂಬುದನ್ನು ಅರಿತಿದ್ದ ಆತ, ವಿಕಿಗೆ ತನ್ನ ವ್ಯವಹಾರಾಧಿಕಾರವನ್ನು (ಪವರ್‌ ಆಫ್‌ ಅಟಾರ್ನಿ) ಕೊಡುತ್ತಾನೆ. ಚೋಪ್ರಾ ಹಿಂದೆ ಮಾಡಿದ್ದ ಭಿನ್ನಕೃತ್ಯಗಳನ್ನೇ ಪುನರಾವರ್ತನೆ ಎಂಬ ರೀತಿಯಲ್ಲಿ ಜೋಡಣೆ ಮಾಡುವ ವಿಕಿ, ಕೆಲವೇ ದಿನಗಳಲ್ಲಿ ಎಲ್ಲವನ್ನೂ ವಶಪಡಿಸಿಕೊಳ್ಳುತ್ತಾನೆ. ಒಂದು ದಿನ ಪ್ರಿಯಾಳ ಮನಸ್ಸನ್ನು ಶಮನಗೊಳಿಸಲು ಅವಳನ್ನು ವಿಕಿಯು ಕ್ಲಬ್‌‌‌ ಒಂದಕ್ಕೆ ಕರೆದೊಯ್ಯುತ್ತಾನೆ; ಅಲ್ಲಿ ಅವರು ಅಜಯ್‌‌‌ನ ಬಾಲ್ಯಸ್ನೇಹಿತನನ್ನು ಸಂಧಿಸುತ್ತಾರೆ. ಆತ ವಿಕಿಯನ್ನು ಅಜಯ್‌‌‌ ಎಂಬುದಾಗಿ ಸಂಬೋಧಿಸುತ್ತಾನೆ. ಅವನನ್ನು ಉಪೇಕ್ಷಿಸಲು ವಿಕಿ ಯತ್ನಿಸಿದರೆ, ಆ ವ್ಯಕ್ತಿಯು ತಪ್ಪಾಗಿ ಗ್ರಹಿಸಿರುವುದಾಗಿ ಹೇಳುವ ಪ್ರಿಯಾ, ಇವನು ಅಜಯ್‌‌‌ ಅಲ್ಲ, ವಿಕಿ ಮಲ್ಹೋತ್ರಾ ಎಂಬುದಾಗಿ ಆ ವ್ಯಕ್ತಿಗೆ ಹೇಳುತ್ತಾಳೆ. ಅಜಯ್‌‌‌ನ ಸ್ನೇಹಿತ ವಿಕಿಗೆ (ಅವನು ವಾಸ್ತವವಾಗಿ ಅಜಯ್‌‌‌ ಆಗಿರುತ್ತಾನೆ) ತಮ್ಮ ಗೆಳೆತನದ ಕುರಿತು ನೆನಪಿಸಲು ಮತ್ತೆಮತ್ತೆ ಯತ್ನಿಸುತ್ತಾನೆ. ತಾನು ಸಿಕ್ಕಿಕೊಂಡುದಾಗಿ ಭಾವಿಸುವ ವಿಕಿ ಅವನನ್ನು ನಿಂದಿಸುವ ಮೂಲಕ ಈ ಗೋಜಲಿನಿಂದ ಆಚೆಗೆಬರಲು ಯತ್ನಿಸುತ್ತಾನೆ; ಈ ಪ್ರಯತ್ನದಲ್ಲಿ ವಿಕಿ ಅವನೊಂದಿಗೆ ಕೈ ಕೈ ಮಿಲಾಯಿಸುವಿಕೆಗೂ ಇಳಿಯುತ್ತಾನೆ. ಅಜಯ್‌‌‌ನ ಸ್ನೇಹಿತನನ್ನು ಪ್ರಿಯಾ ಭೇಟಿಮಾಡುತ್ತಾಳೆ ಮತ್ತು ಅವನಿಂದ ಅವಳಿಗೆ ಸಂಪೂರ್ಣ ಸತ್ಯವು ಗೊತ್ತಾಗುತ್ತದೆ.

ಚೋಪ್ರಾ ತನ್ನ ವ್ಯವಹಾರ-ಸಂಬಂಧಿ ಪ್ರವಾಸದಿಂದ ಹಿಂದಿರುಗಿದಾಗ, ತಾನು ವಿಶ್ವನಾಥ್‌‌ ಶರ್ಮಾನ ಮಗ ಅಜಯ್‌‌‌ ಎಂಬ ವಿಷಯವನ್ನು ಹೊರಗೆಡಹುವ ವಿಕಿ, 15–20 ವರ್ಷಗಳ ಹಿಂದೆ ಚೋಪ್ರಾ ಮಾಡಿದ್ದ ರೀತಿಯಲ್ಲಿಯೇ ಅವನಿಗೆ ಬೀಳ್ಕೊಡುಗೆಯನ್ನು ನೀಡುತ್ತಾನೆ. ಅಜಯ್‌‌‌ನ ಮನೆಯ ವಿಳಾಸವನ್ನು ಪ್ರಿಯಾ ಪತ್ತೆಹಚ್ಚುತ್ತಾಳೆ, ಹಾಗೂ ಅವನ ನಿಜವಾದ ಗುರುತನ್ನು ಕಂಡುಕೊಳ್ಳುತ್ತಾಳೆ. ಅಜಯ್‌‌‌ ಅಲ್ಲಿಗೆ ಬಂದಾಗ, ಸೀಮಾಳ ಕೊಲೆಯ ಕುರಿತಾಗಿ ಅವರಿಬ್ಬರೂ ವಾದಿಸುತ್ತಾರೆ. ತಮ್ಮ ಎರಡು ಕುಟುಂಬಗಳ ಹಿಂದಿನ ಇತಿಹಾಸವನ್ನು ಅವಳಿಗೆ ಹೇಳುವ ಮೂಲಕ, ಅಜಯ್‌‌‌ ತನ್ನ ವಾದದಲ್ಲಿ ಮೇಲುಗೈ ಸಾಧಿಸುತ್ತಾನೆ. ಘಾತುಕರ ಒಂದು ಗುಂಪಿನೊಂದಿಗೆ ಅಲ್ಲಿಗೆ ದಾಳಿಮಾಡುವ ಮದನ್‌,‌ ಅಜಯ್‌‌‌ನ ಭುಜಕ್ಕೆ ಗುಂಡುಹಾರಿಸುತ್ತಾನೆ; ನಂತರ ಅಜಯ್‌ ತೀವ್ರವಾಗಿ ಥಳಿಸಲ್ಪಟ್ಟು ಗಾಯಗೊಳ್ಳುತ್ತಾನೆ. ಅಜಯ್‌‌‌ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಅಜಯ್‌‌‌ನ ತಾಯಿಗೆ ಬಡಿದು ಪ್ರಜ್ಞೆತಪ್ಪುವಂತೆ ಮಾಡಲಾಗುತ್ತದೆ. ಇದು ಚೇತರಿಸಿಕೊಳ್ಳುವಂತೆ ಅವನನ್ನು ಪ್ರಚೋದಿಸುತ್ತದೆ ಮತ್ತು ಆತ ಮದನ್‌‌ ಹಾಗೂ ಅವನ ತಂಡದೊಂದಿಗೆ ಏಕಾಂಗಿಯಾಗಿ ಹೋರಾಡುತ್ತಾನೆ. ಅಂತಿಮವಾಗಿ ಒಂದು ಚೂಪಾದ ಗೂಟವನ್ನು ಎತ್ತಿಕೊಳ್ಳುವ ಚೋಪ್ರಾ, ಅಜಯ್‌‌‌ವನ್ನು ಮಾರಕವಾಗಿ ಇರಿಯುತ್ತಾನೆ. ಆದಾಗ್ಯೂ, ಒಂದು ದಸಿಯ ಮೇಲೆ ಅವನನ್ನು ಏರಿಸುವಲ್ಲಿ ಅಜಯ್‌‌‌ ಯಶಸ್ವಿಯಾಗುತ್ತಾನೆ ಮತ್ತು ಅವರು ಒಂದು ಸಣ್ಣ ಬಂಡೆಯಿಂದ ಜಿಗಿಯುತ್ತಾರೆ. ಚೋಪ್ರಾ ಸಾಯುತ್ತಾನೆ. ಅಜಯ್‌ ತತ್ತರಿಸಿಕೊಂಡು ಮರಳಿ ತನ್ನ ತಾಯಿಯ ಬಳಿಗೆ ಬರುತ್ತಾ, ನ್ಯಾಯೋಚಿತವಾಗಿ ಅವಳಿಗೆ ಸೇರಬೇಕಾದುದನ್ನು ತಾನು ಮರುವಶಪಡಿಸಿಕೊಂಡುದಾಗಿ ಅವಳಿಗೆ ಹೇಳುತ್ತಾನೆ. ಶ್ರೀಮತಿ ಶರ್ಮಾ ತನ್ನ ಅಸ್ವಸ್ಥತೆಯಿಂದ ಗುಣಮುಖಳಾಗುತ್ತಾಳಾದರೂ, ತನ್ನ ತೋಳುಗಳಲ್ಲಿ ಅಜಯ್‌ ಸಾಯುತ್ತಿದ್ದಂತೆ ಅವಳಲ್ಲಿ ದುಃಖವು ಆವರಿಸುತ್ತದೆ.

ಪಾತ್ರವರ್ಗ[ಬದಲಾಯಿಸಿ]

  • ಶಾರುಖ್ ಖಾನ್... ಅಜಯ್‌ ಶರ್ಮ/ವಿಕಿ ಮಲ್ಹೋತ್ರಾ
  • ಕಾಜೋಲ್ ಪ್ರಿಯಾ M. ಚೋಪ್ರಾ
  • ಶಿಲ್ಪಾ ಶೆಟ್ಟಿ ಸೀಮಾ ಚೋಪ್ರಾ
  • ರಾಖೀ ... ಶೋಭಾ ಶರ್ಮಾ
  • ದಲಿಪ್‌ ತಾಹಿಲ್‌‌ ... ಮದನ್‌ ಚೋಪ್ರಾ
  • ಸಿದ್ಧಾರ್ಥ್‌‌ ... ಇನ್ಸ್‌‌ಪೆಕ್ಟರ್‌‌‌ ಕರಣ್‌‌
  • ಜಾನಿ ಲಿವರ್‌‌ ... ಬಾಬುಲಾಲ್‌‌‌
  • ಅನಂತ್‌‌ ಮಹಾದೇವನ್‌‌ ... ವಿಶ್ವನಾಥ್‌‌ ಶರ್ಮಾ
  • ದಿನೇಶ್‌ ಹಿಂಗೂ ... ಬಜೋಡಿಯಾ ಸೇಟ್‌
  • ಆದಿ ಇರಾನಿ ... ವಿಕಿ ಮಲ್ಹೋತ್ರಾ
  • ‌‌ರೇಷಮ್‌ ಟಿಪ್ನಿಸ್ ... ಅಂಜಲಿ ಸಿನ್ಹಾ
  • ‌‌ಹರ್‌‌ಪಾಲ್‌ ಸಿಂಗ್ ... ಹರ್‌‌ಪಾಲ್‌-ಮೋಟು
  • ‌‌‌ಅಮೃತ್‌‌ ಪಟೇಲ್ ... ಮಾರ್ಕೋ - ಚಾಲಕ
  • ಮನ್‌ಮೌಜಿ ... ಸೇವಕ

ಧ್ವನಿಪಥ[ಬದಲಾಯಿಸಿ]

ಈ ಚಲನಚಿತ್ರದ ಧ್ವನಿಪಥವು ಆ ವರ್ಷ ಅತ್ಯಂತ ಯಶಸ್ವಿ ಧ್ವನಿಪಥಗಳಲ್ಲಿ ಒಂದಾಗಿ ಹೊರಹೊಮ್ಮಿತು. ಹಾಡುಗಳಿಗೆ ಸಂಗೀತವನ್ನು ಅನು ಮಲಿಕ್‌‌ ಸಂಯೋಜಿಸಿದ. ಹಾಡುಗಳನ್ನು ಈ ಕೆಳಗೆ ಪಟ್ಟಿಮಾಡಲಾಗಿದೆ.

ಹಾಡು ಗಾಯಕ/ಗಾಯಕಿ ಇವರ ಮೇಲೆ ಚಿತ್ರೀಕರಿಸಲಾಯಿತು ಗೀತರಚನೆಕಾರ
ಯೆ ಕಾಲಿ ಕಾಲಿ ಆಂಖೇ ಕುಮಾರ್‌‌ ಸಾನು, ಅನು ಮಲಿಕ್‌‌ ಶಾರುಖ್‌ ‌ಖಾನ್‌‌, ಕಾಜೋಲ್‌‌ ದೇವ್‌ ಕೊಹ್ಲಿ
ಕಿತಾಬೇ ಬಹುತ್‌ ಸಿ ಆಶಾ ಭೋಸ್ಲೆ, ವಿನೋದ್‌ ರಾಥೋಡ್‌ ಶಾರುಖ್‌ ‌ಖಾನ್‌‌, ಶಿಲ್ಪಾ ಶೆಟ್ಟಿ ರಾಣಿ ಮಲಿಕ್‌‌
ಛುಪಾನಾ ಭೀ ನಹೀ ಆತಾ ವಿನೋದ್ ರಾಥೋಡ್‌ ಸಿದ್ಧಾರ್ಥ್‌‌, ಕಾಜೋಲ್‌‌ ರಾಣಿ ಮಲಿಕ್‌‌
ಸಮಜ್‌ ಕರ್‌ ಚಾಂದ್‌ ಜಿಸ್‌ ಕೊ ಅಲ್ಕಾ ಯಾಗ್ನಿಕ್‌‌, ವಿನೋದ್‌ ರಾಥೋಡ್‌ ಕಾಜೋಲ್‌‌ ಅಥವಾ ಶಿಲ್ಪಾ ಶೆಟ್ಟಿ, ಶಾರುಖ್‌ ‌ಖಾನ್‌‌ ಜಮೀರ್‌ ಕಾಜ್ಮಿ
ಬಾಜಿಗರ್‌‌‌ ಓ ಬಾಜಿಗರ್‌‌‌ ಕುಮಾರ್‌‌ ಸಾನು, ಅಲ್ಕಾ ಯಾಗ್ನಿಕ್‌‌ ಶಾರುಖ್‌ ‌ಖಾನ್‌‌, ಕಾಜೋಲ್‌‌ ನವಾಬ್‌ ಆರ್ಜೂ
ಏ ಮೆರೇ ಹಮ್‌‌‌ಸಫರ್‌‌ ವಿನೋದ್‌ ರಾಥೋಡ್‌, ಅಲ್ಕಾ ಯಾಗ್ನಿಕ್‌‌ ಶಾರುಖ್‌ ‌ಖಾನ್‌‌, ಶಿಲ್ಪಾ ಶೆಟ್ಟಿ ಗೌಹರ್‌ ಕಾನ್‌ಪುರಿ
ತೇರೆ ಚೆಹ್ರೆ ಪೆ ಕುಮಾರ್‌‌ ಸಾನು, ಸೋನಾಲಿ ಬಾಜ್‌ಪೈ (ಧ್ವನಿಪಥದಲ್ಲಿ ಮಾತ್ರವೇ ಇದೆಯೇ ಹೊರತು ಚಲನಚಿತ್ರದಲ್ಲಿಲ್ಲ) ಗೌಹರ್‌ ಕಾನ್‌ಪುರಿ

ಪ್ರಶಸ್ತಿಗಳು[ಬದಲಾಯಿಸಿ]

  • ‌‌ಫಿಲ್ಮ್‌ಫೇರ್ ಪ್ರಶಸ್ತಿ - ಅತ್ಯುತ್ತಮ ನಟ (ಶಾರುಖ್‌ ‌ಖಾನ್‌‌)
  • ಫಿಲ್ಮ್‌ಫೇರ್‌‌ ಪ್ರಶಸ್ತಿ - ಅತ್ಯುತ್ತಮ ಹಿನ್ನೆಲೆ ಗಾಯಕ (ಕುಮಾರ್‌‌ ಸಾನು)
  • ಫಿಲ್ಮ್‌ಫೇರ್‌‌ ಪ್ರಶಸ್ತಿ - ಅತ್ಯುತ್ತಮ ಸಂಗೀತ ನಿರ್ದೇಶನ (ಅನು ಮಲಿಕ್‌‌)
  • ಫಿಲ್ಮ್‌ಫೇರ್‌‌ ಪ್ರಶಸ್ತಿ - ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಬಾಜಿಗರ್&oldid=1048880" ಇಂದ ಪಡೆಯಲ್ಪಟ್ಟಿದೆ