ಮಾಧವೀಲತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಧವೀಲತೆ
Conservation status
Scientific classification
ಸಾಮ್ರಾಜ್ಯ:
plantae
ಉಪಸಾಮ್ರಾಜ್ಯ:
Division:
ವರ್ಗ:
Subclass:
ಗಣ:
ಕುಟುಂಬ:
ಕುಲ:
ಪ್ರಜಾತಿ:
H. benghalensis
Binomial name
ಹಿಪ್ಟೇಜ್ ಬೆಂಗಾಲೆನ್ಸಿಸ್
ಮಾಧವೀಲತೆ

ಮಾಧವೀಲತೆ ಒಂದು ಮರಬಳ್ಳಿ. ಮಾಲ್ಪೀಘಿಯೇಸೀ ಕುಟುಂಬಕ್ಕೆ ಸೇರಿದ ಹಂಬುಸಸ್ಯ. ವಸಂತದೂತಿ, ಚಂದ್ರವಳ್ಳಿ, ಮಧುಮಾಲತಿ ಮುಂತಾದ ಆಕರ್ಷಕ ಪರ್ಯಾಯ ನಾಮಗಳಿವೆ. ಇದನ್ನು ಮಲೆನಾಡಿನಲ್ಲಿ ಗಂಚೀ ಹಂಬು ಎಂದು ಕರೆಯಲಾಗುತ್ತದೆ. ಇದರ ಸಸ್ಯವೈಜ್ಞಾನಿಕ ಹೆಸರು ಹಿಪ್ಟೇಜ್ ಬೆಂಗಾಲೆನ್ಸಿಸ್. ದಕ್ಷಿಣ ಏಷಿಯಾ ಪ್ರದೇಶದ ಮೂಲನಿವಾಸಿ.[೧][೨] ಈ ಸಸ್ಯಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು, ಇದರ ಸಂರಕ್ಷಣೆ ಮಾಡಬೇಕಾಗಿದೆ. ಸದಾಹಸುರಾಗಿರುವ ಇದು ತನ್ನ ಚೆಲುವಾದ ರೂಪದಿಂದಲೂ ಸುಗಂಧಪೂರಿತ ಹೂವುಗಳಿಂದಲೂ ಬಲು ಪ್ರಾಚೀನ ಕಾಲದಿಂದ ಅಲಂಕಾರ ಸಸ್ಯವಾಗಿ ಪ್ರಸಿದ್ಧವಾಗಿದೆ. ಕಾಳೀದಾಸನ ನಾಟಕದಲ್ಲಿ ಇದರ ಉಲ್ಲೇಖವಿದೆ. ಹರಿಹರನ ರಗಳೆಗಳಲ್ಲೂ ಈ ಹೂವಿನ ವರ್ಣನೆಯನ್ನು ಕಾಣಬಹುದು.

ಹೂವುಗಳು
ಎಲೆಗಳು
ಹಣ್ಣುಗಳು
ಮಾಧವೀಲತೆ - MHNT
ಲಿಯಾನ

ವ್ಯಾಪ್ತಿ[ಬದಲಾಯಿಸಿ]

ಭಾರತಾದ್ಯಂತ ಇದನ್ನು ನೋಡಬಹುದು. ಅಂಡಮಾನ್ ದ್ವೀಪಸ್ತೋಮಗಳಲ್ಲೂ ಉಂಟು. ಮೈದಾನಗಳಿಂದ ಹಿಡಿದು ಸುಮಾರು 2000 ಮೀ ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಆರ್ದ್ರತೆ ಹೆಚ್ಚಾಗಿರುವಂಥ ನೆಲೆಗಳಲ್ಲಿ, ಹುಲುಸಾಗಿ ಬೆಳೆಯುತ್ತದೆ.

ವಿವರಗಳು[ಬದಲಾಯಿಸಿ]

ತೊಗಟೆ ಕಂದುಬಣ್ಣದ್ದು, ಸಿಪ್ಪೆ ಸಿಪ್ಪೆಯಾಗಿ ಸುಲಿದುಕೊಳ್ಳುತ್ತದೆ. ಎಲೆಗಳು ಸರಳ, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿದೆ. ಒಂದೊಂದೂ 10-15 ಸೆ.ಮೀ ಉದ್ದದವೂ ದೀರ್ಘವೃತ್ತದಾಕಾರವೂ ಆಗಿವೆ. ಹೂಗಳು ಸುಗಂಧಯುಕ್ತ, ರೇಷ್ಮೆಯಂತೆ ಮೃದು; ಅಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ದಳಗಳು ಬಿಳಿ ಬಣ್ಣದವು; ಇವುಗಳ ಅಂಚು ಕುಚ್ಚುಗಳಿಂದ ಕೂಡಿದೆ. ಕಾಯಿ ಮೂರು ರೆಕ್ಕೆಗಳುಳ್ಳ ಪಕ್ಷಫಲ (ಸಮಾರ). ಮಧ್ಯದ ರೆಕ್ಕೆ ಅಕ್ಕಪಕ್ಕದವಕ್ಕಿಂತ ದೊಡ್ಡದಾಗಿದೆ. ಫಲಪ್ರಸಾರ ಗಾಳಿಯ ಮೂಲಕ ನಡೆಯುತ್ತದೆ.

ಕೃಷಿ[ಬದಲಾಯಿಸಿ]

ಮಾಧವೀಲತೆಯನ್ನು ಬೀಜಗಳಿಂದ ಇಲ್ಲವೆ ಕಸಿತುಂಡುಗಳಿಂದ ವೃದ್ಧಿಸಬಹುದು. ಇದು ಶೀಘ್ರಗತಿಯಲ್ಲಿ ಬೆಳೆಯುವುದರಿಂದಲೂ ವರ್ಷಪೂರ್ತಿ ಎಲೆಗಳಿಂದ ಕೂಡಿದ್ದು ತಂಪಾದ ನೆರಳು ನೀಡುವುದರಿಂದಲೂ ಜೊತೆಗೆ ಸುವಾಸನಾಯುಕ್ತ ಹೂಗಳಿರುವುದರಿಂದಲೂ ತೋಟಗಳಲ್ಲಿ ಬೆಳೆಸಲು ಯೋಗ್ಯವೆನಿಸಿದೆ.

ಉಪಯೋಗಗಳು[ಬದಲಾಯಿಸಿ]

ಎಲೆಗಳನ್ನು ಚರ್ಮವ್ಯಾಧಿ ಚಿಕಿತ್ಸೆಯಲ್ಲೂ ಕಜ್ಜಿ ನಿವಾರಣೆಗೂ ಬಳಸುವುದಿದೆ.[೩] ದೀರ್ಘಕಾಲಿಕ ಸಂಧಿವಾತ, ಉಬ್ಬಸಗಳಿಗೂ ಇದು ಔಷಧಿಯಾಗಿ ಬಳಕೆಯಲ್ಲಿದೆ. ಚೌಬೀನೆಯಿಂದ ಹತ್ಯಾರುಗಳ ಹಿಡಿ ಮಾಡುವುದುಂಟು.

ಇದನ್ನು ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಇದರ ಬೇರು ಹಾಗೂ ಎಲೆಗಳು ಉಪಯೋಗವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Hiptage benghalensis". issg.org; Global Invasive Species Database. Retrieved 2007-06-27.
  2. Verma, Balakrishnan & Dixit, pp 240
  3. Agharkar, pp 115-116

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: