ಅದ್ವೈತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಂಸ - ಅದ್ವೈತದ ಪ್ರತೀಕ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ಅದ್ವೈತ ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ (non-dualistic) ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. 'ಅದ್ವೈತ' ಎಂದೊಡನೆ ಶ್ರೀ ಆದಿ ಶಂಕರಾಚಾರ್ಯರ ಹೆಸರು ಪ್ರಸ್ತಾಪಿಸಲ್ಪಡುತ್ತದೆ. ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ್ಟು, ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚಾರ ಪಡಿಸಿದವರು ಆದಿ ಶಂಕರರು. ಹಾಗೆಂದು ಶಂಕರರ ಮೊದಲು ಅದ್ವೈತ ಸಿದ್ಧಾಂತವಿರಲಿಲ್ಲವೆಂದಲ್ಲ. ಶಂಕರರು ಗೌಡಪಾದರ ಪರಂಪರೆಗೆ ಸೇರಿದ ಗೋವಿಂದ ಭಗವತ್ಪಾದರ ಶಿಷ್ಯರು. ಹಾಗಾಗಿ ಶಂಕರರಿಗಿಂತಲೂ ಮೊದಲು ಅದ್ವೈತ ಸಿದ್ಧಾಂತವು ಉದಯಿಸಿತ್ತೆಂದೂ, ಈ ಪರಂಪರೆಯಲ್ಲಿ ಅನೇಕ ಆಚಾರ್ಯರುಗಳು ಆಗಿಹೋಗಿದ್ದರೆಂದೂ ಹೇಳಬಹುದಾಗಿದೆ. 'ಅದ್ವೈತ'ವೆಂದರೆ ಎರಡಿಲ್ಲದ್ದು. ಅಂದರೆ 'ಒಂದೇ' ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು ಅಭೇದ ಸಿದ್ಧಾಂತವೆಂದೂ ಕರೆಯಲಾಗುತ್ತದೆ.

ಅದ್ವೈತ ದರ್ಶನ ಇತಿಹಾಸ[ಬದಲಾಯಿಸಿ]

ಪೀಠಿಕೆ :-
ಅದ್ವೈತ ದರ್ಶನ (ಚರ್ಚೆ)
ಅದ್ವೈತ ಸಿದ್ಧಾಂತವು , ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದ ದರ್ಶನ. ಅದ್ವೈತವೆಂದರೆ ಎರಡಿಲ್ಲದ್ದು -ಒಂದೇ ಎಂದು ಅರ್ಥ. ಸುಮಾರು ಕ್ರಿ.ಪೂ. ೮೦೦ -೩೦೦ ವರ್ಷಗಳ ಹಿಂದಿನ ಉಪನಿತ್ತುಗಳಲ್ಲಿ ಅದ್ವೈತ ಪರ ವಾಕ್ಯಗಳು ಸಾಕಷ್ಟಿವೆ. ಉದಾಹರಣೆಗೆ: "ಸರ್ವಂ ಖಲ್ವಿದಂ ಬ್ರಹ್ಮ" ; "ಆತ್ಮೈವೇದ ಸರ್ವಂ" ; "ಅಯಮಾತ್ಮಾಬ್ರಹ್ಮ;" ; "ಬ್ರಹ್ಮ"ವೇದ ಬ್ರಹ್ಮೈವ ಭವತಿ" ; ಇತ್ಯಾದಿ

ಇವುಗಳ ಆಧಾರದಿಂದ, ಒಂದು ವ್ಯವಸ್ಥಿತವಾದ ದರ್ಶನವನ್ನು ರೂಪಿಸುವ ಕೆಲಸ ಆಗಿರಲಿಲ್ಲ. ಸುಮಾರು ಕ್ರಿ. ಶ. ೫೦೦ ರಲ್ಲಿ ಬದುಕಿರಬಹುದಾದ , ಗೌಡಪಾದ ಮುನಿಗಳು, ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮತ್ತು ದೃಢವಾಗಿ ಪ್ರತಿಪಾದಿಸಿದರು. ಗೌಡಪಾದರ ಶಿಷ್ಯರು, ಗೋವಿಂದ ಭಗವತ್ಪಾದರು., ಅವರ ಶಿಷ್ಯರು ಶ್ರೀ ಶಂಕರರು. ಗೋವಿಂದ ಭಗವತ್ಪಾದರು "ರಸತಂತ್ರ" ವೆಂಬ ರಸಾಯನ ಶಾಸ್ತ್ರದ ಗ್ರಂಥವನ್ನು ಮಾತ್ರ ರಚಿಸಿದ್ದಾಗಿ ತಿಳಿದು ಬರುತ್ತದೆ.

ಶ್ರೀಶಂಕರಾಚಾರ್ಯರು (ಕ್ರಿ.ಶ.೭೮೮-೮೨೦)ಒಬ್ಬ ಅದ್ಭುತ ವ್ಯಕ್ತಿ . ಕೇರಳದ ಕಾಲಟಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತವನ್ನು ಸುತ್ತಿ ತಮ್ಮ ತರ್ಕ ಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ, ಅದ್ವೈತದ ಧ್ವಜವನ್ನು ಎತ್ತಿ ಹಿಡಿದವರು. ಅವರು ಬದುಕಿದ್ದು ಕೇವಲ ೩೨ ವರ್ಷಗಳ ಕಾಲ ಮಾತ್ರವಾದರೂ , ಪ್ರತಿಯೊಂದು ಕ್ಷಣವನ್ನೂ, ಸಾರ್ಥಕ ಪಡಿಸಿಕೊಂಡವರು. ಅವರ ಬಗೆಗೆ ಜನಶ್ರುತಿ ಹೀಗಿದೆ :
ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಹೊರಟು ಹೋದರು .
ಅವರ ಅತ್ಯಂತ ಪ್ರಸಿದ್ಧವಾದ ಕೃತಿ ಬ್ರಹ್ಮ ಸೂತ್ರ ಭಾಷ್ಯ. ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ ಅದು . ಅದೊಂದು ಅಮೋಘ ಕೃತಿ. ಹಾಗೆಯೇ ಉಪನಿಷತ್ತು ಮತ್ತು ಭಗವದ್ಗೀತೆಗಳ ಮೇಲಿನ ಅವರ ಭಾಷ್ಯಗಳೂ ಅದರ ಸರಳ ನಿರೂಪಣೆ, ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದಿದೆ . ಈ ಮೇಲಿನ ಮೂರು ವಿಷಯಕ್ಕೆ ಪ್ರಸ್ಥಾನತ್ರಯವೆಂದು ಹೆಸರು . ಅವರು ಪ್ರಸ್ಥಾನತ್ರಯದ ಮೊದಲ ಭಾಷ್ಯಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೆ ಅವರು "ಆತ್ಮ ಬೋಧೆ," ಮೊದಲಾದ ಅನೇಕ ಗ್ರಂಥಗಳನ್ನೂ ಸ್ತೋತ್ರಗಳನ್ನೂ ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನ ಮಿಶ್ರರು ಅವರ ಸಮಕಾಲೀನರಾದ ಮತ್ತೊಬ್ಬ ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ -ವಾರ್ತಿಕಕಾರರೆಂದೂ ಪ್ರಸಿದ್ಧಿ. ಶಂಕರ ಭಾಷ್ಯಕ್ಕೆ ಟೀಕೆ - ವಾರ್ತಿಕವನ್ನು ಬರೆದಿದ್ದಾರೆ. ಶಂಕರರ ಇನ್ನೊಬ್ಬ ಶಿಷ್ಯರಾದ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ ಪಂಚಪಾದಿಕಾ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ

ಶಂಕರ ಪೂರ್ವ ಯುಗ[ಬದಲಾಯಿಸಿ]

ನಂತರ ಬಂದ ವಿದ್ಯಾರಣ್ಯರ "ಪಂಚದಶೀ" ಅತ್ಯಂತ ಜನಪ್ರಿಯ ಕೃತಿ. ಅದ್ವೈತ ದರ್ಶನವನ್ನು ಶಂಕರ ಪೂರ್ವ ಯುಗ ; ಶಂಕರ ಯುಗ ; ಶಂಕರೋತ್ತರ ಯುಗವೆಂದು ವಿಂಗಡಿಸುತ್ತಾರೆ. ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು. ನಂತರದ ಯುಗದಲ್ಲಿ ಶಂಕರರ ಅಭಿಪ್ರಾಯದ ಬಗೆಗೆ ವಾದ, ವಿವಾದ, ಭಿನ್ನಾಭಿಪಾಯಗಳ ಕೃತಿಗಳು ಉದಯಿಸಿದವು

ಗೌಡಪಾದರು -ಗೌಡಪಾದ ಕಾರಿಕೆಯ ಸಾರಾಂಶ[ಬದಲಾಯಿಸಿ]

ಗೌಡಪಾದರ ಮಾಂಡೂಕ್ಯ ಕಾರಿಕೆ ಅದ್ವೈತ ದರ್ಶನದ ಗ್ರಂಥ; ೧೧೨ ಶ್ಲೋಕಗಳ ಪುಟ್ಟ ಗ್ರಂಥ. ಮಾಂಡೂಕ್ಯೋಪನಿಷತ್ತಿನ ಹನ್ನೆರಡು (೧೨) ವಾಕ್ಯಗಳ ವ್ಯಾಖ್ಯಾನ ಎನ್ನಬಹುದು. ಈ ಗ್ರಂಥದಲ್ಲಿ ನಾಲ್ಕು ಅಧ್ಯಾಯಗಳಿವೆ ಅವು : ೧)ಆಗಮ ಪ್ರಕರಣ , ೨) ವೈತಥ್ಯ ಪ್ರಕರಣ ,೩) ಅದ್ವೈತ ಪ್ರಕರಣ , ೪ ) ಅಲಾತ ಶಾಂತಿ ಪ್ರಕರಣ . ಈ ಪ್ರಕರಣಗಳಲ್ಲಿ ಮುಖ್ಯವಾಗಿ ಈ ಕೆಳಗಿನ ವಿಚಾರಗಳನ್ನು ಮಂಡಿಸಲಾಗಿದೆ:

ಅವಸ್ಥಾತ್ರಯ ವಿಚಾರ[ಬದಲಾಯಿಸಿ]


ಜಾಗ್ರತ್ (ಎಚ್ಚರ) , ಸ್ವಪ್ನ (ಕನಸು), ಸುಷುಪ್ತಿ (ಗಾಢ ನಿದ್ದೆ) ಇವು ಮೂರು ಅವಸ್ಥಾತ್ರಯಗಳು . ಎಚ್ಚರದ, ಕನಸಿನ, ಪೂರ್ಣನಿದ್ರೆಯ ಸ್ಥಿತಿಗಳು . ಕನಸಿನಲ್ಲಿರುವಾಗ - ಕನಸು -ಅನುಭವ ಸತ್ಯವಾಗಿರುತ್ತದೆ. ಆಗ ಎಚ್ಚರ ಸುಳ್ಳು ; ಎಚ್ಚರವಾಗಿದ್ದಾಗ ಕನಸು ಸುಳ್ಳು ; ಇವೆರಡೂ ನಿದ್ದೆಯಲ್ಲಿ ಇಲ್ಲವೇ ಇಲ್ಲ. ಸತ್ಯಕ್ಕೆ ಅನುಭವವೇ ಆಧಾರವಾದ್ದರಿಂದ , ಕನಸಿನಲ್ಲಿ ಕಂಡದ್ದು ಮತ್ತು ಎಚ್ಚರದಲ್ಲಿ ಕಂಡದ್ದು ಸಮನಾಗಿದೆ (ಮಿಥ್ಯೆ -ಸುಳ್ಳು). ಸತ್ಯವು ತ್ರಿಕಾಲಾಭಾದಿತವಾಗಿರಬೇಕು (ಈ ಮೂರು ಕಾಲಗಳಲ್ಲಿ ಆಭಾದಿತ -ಭಾದಿತವಾಗಬಾರದು- ಮಿಥ್ಯೆ ಯಾಗಬಾರದು) ,ಆತ್ಮನಿಗಿಂತ ಭಿನ್ನವಾದುದು(ಬೇರೆಯಾದುದು) ಯಾವುದೂ ಇಲ್ಲ. ಆತ್ಮನಿಗಿಂತ ಬೇರೆಯಾಗಿರುವುದೇನಿದ್ದರೂ ಅದು ಮಿಥ್ಯೆ ( ಏನೊಂದು ಅತ್ಮನಿಗಿಂತ ಬೇರೆಯಾಗಿರಲು ಸಾಧ್ಯವಿಲ್ಲ, ಭಗವದ್ಗೀತೆಯ ಸಾರ). ಆದ್ದರಿಂದ ಮಿಥ್ಯೆಯು ನಮ್ಮ ಅಂತಹಕರಣದ ಜಗತ್ತಿಗೆ ಹೊರತು ಎಚ್ಚರದ ಕಾಣಿಸುವ ಜಗತ್ತಿಗೆ ಅಲ್ಲ. ನೋಡಿ ಅನುಭವ ಪ್ರಧಾನವಾದ

ಅಜಾತಿ ವಾದ[ಬದಲಾಯಿಸಿ]


ಗೌಡಪಾದರ ಇನ್ನೊಂದು ಪ್ರಸಿದ್ಧ ಸಿದ್ಧಾಂತವೆಂದರೆ , ಅಜಾತಿವಾದ. ಅಜಾತಿ ಎಂದರೆ ಅನುತ್ಪತ್ತಿ . -ಹುಟ್ಟದೇ ಇರುವುದು; ಅಸ್ತಿತ್ವವು (ಇದೆ ಎಂಬುದು) ಆತ್ಮಕ್ಕೆ ಮಾತ್ರ ಇದೆ. ಹಾಗಾಗಿ ಯಾವುದೂ -ಯಾವ ಭಾವವೂ ಹುಟ್ಟಿಲ್ಲ. ಯಾವ ಜೀವನೂ ಹುಟ್ಟುವುದಿಲ್ಲ . ಇವನ ಜನ್ಮಕ್ಕೆ ಕಾರಣವೇ ಇಲ್ಲ. ಯಾವುದೂ ಹುಟ್ಟುವುದೇ ಇಲ್ಲ. ಬ್ರಹ್ಮ ಕ್ಕೆ ಜನ್ಮವೇ ಮೊದಲಾದ ಯಾವ ಬದಲಾವಣೆಗಳೂ ಇಲ್ಲ.
ಸೃಷ್ಟಿಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಆದರೆ ಈಶ್ವರನಿಗೆ ಸೃಷ್ಟಿಸುವ ಇಚ್ಛೆಯಾದರೂ ಎಲ್ಲಿಂದ ಬಂತು ? ಸತ್ಕಾರ್ಯವಾದಂತೆ ಕಾರ್ಯವು ಕಾರಣದಲ್ಲಿ ಇರುತ್ತದೆ. ಆದ್ದರಿಂದ ಹುಟ್ಟಿರುವುದು ಮತ್ತೆ ಹುಟ್ಟಲು ಸಾಧ್ಯವಿಲ್ಲ. ಇಲ್ಲದಿರುವುದು (ಅಂತಹಕರಣದ ಜಗತ್ತು)ಹುಟ್ಟುವುದಾದರೂ ಹೇಗೆ? ( ನಾಸತೋ ವಿದ್ಯತೇ ಭಾವೋ ನಾಭಾವೋವಿದ್ಯತೇ ಸತಃ : ಗೀತೆ) .

ಬೌದ್ಧರು ಹೇಳುವಂತೆ ಇದು ಶೂನ್ಯವೂ ಅಲ್ಲ. ಇಲ್ಲದಿರುವುದು ಹುಟ್ಟುವುದಿಲ್ಲ. ಆದರೆ ಮಾಂಡೂಕೋಪನಿಷತ್ತಿನಲ್ಲಿ ಹೇಳಿದ ನಾಲ್ಕು ಪಾದಗಳನ್ನು ಗೌಡಪಾದರು ಒಪ್ಪುತ್ತಾರೆ. ಅವು -ವಿಶ್ವ , ತೈಜಸ , ಪ್ರಾಜ್ಞ , ತುರೀಯ.

ಹೊರ ಜಗತ್ತಿನ ಜ್ಞಾನವುಳ್ಳವನು ವಿಶ್ವ , -ನೋಡುವವನು;
ಅಂತರ್ವಿಷಯ ಜ್ಞಾನವುಳ್ಳವನು -ತೈಜಸ (ಅರಿಯುವವನು);
ಜ್ಞಾನ ಘನನು ಪ್ರಾಜ್ಞ , ಹೃದಯದಲ್ಲಿ ಸಾಕ್ಷಿ ;
ಇವರು ಕ್ರಮವಾಗಿ ಸ್ಥೂಲ , ಸೂಕ್ಷ್ಮ , ಆನಂದಗಳನ್ನು ಅನುಭವಿಸುತ್ತಾರೆ.
ಈ ಮೂರೂ ಸ್ಥಿತಿಗೆ ಮೀರಿದ್ದು ತುರೀಯ ಅವಸ್ಥೆ ; ಅದು ಆತ್ಮನ ಶುದ್ಧ ರೂಪ. ಅದ್ವೈತವು ಅಲ್ಲಿ ತಾನೇತಾನಾಗಿರುತ್ತದೆ.

ಸಾಧನೆ[ಬದಲಾಯಿಸಿ]


ಬ್ರಹ್ಮ ವನ್ನು ಸಾದಿಸಲು , ಪ್ರಣವ ಅಥವಾ ಓಂ ಕಾರ ಉಪಾಸನೆ ಯು ಸಾಧನ ; ಇದು ಸಾಮಾನ್ಯರಿಗೆ (ಸಾಧನೆ) ಅಗತ್ಯ. ಓಂ ಕಾರವು ಪರಾಪರ ಬ್ರಹ್ಮ ರೂಪಿಯಾಗಿದೆ. ಓ ಕಾರ ಅ-ಉ-ಮ ,ಗಳಿಂದ ಆಗಿದೆ ; ಅವು ಕ್ರಮವಾಗಿ , ವಿಶ್ವ , ತೈಜಸ , ಪ್ರಾಜ್ಞ ರಿಗೆ ಒಯ್ಯುತ್ತದೆ.
ಅ ಕಾರದಿಂದ ವೈಶ್ವಾನರನಾಗುತ್ತಾನೆ . ; ಈ ಜಗತ್ತನ್ನು ನೋಡುವವನು-ಅನುಭವಿಸುವವನು (ಇದು ಎಚ್ಚರ)
ಉ ಕಾರದಿಂದ ತೈಜಸ ನಾಗುತ್ತಾನೆ -ಹಿರಣ್ಯಗರ್ಭನಾಗುವನು ; (ಆಂತರಿಕ ದೈವ) ಸೂಕ್ಮ ಜಗತ್ತು ; ( ಸ್ವಪ್ನ).
ಮ ಕಾರದಿಂದ ಈಶ್ವರನಾಗುತ್ತಾನೆ ; ಪ್ರಾಜ್ಞ ; ಆತ್ಮ ಸ್ವರೂಪ ; (ಸುಷುಪ್ತಿಯಲ್ಲಿ)
ಓಂ ಕಾರದ ಅ ಮಾತ್ರೆ (ಅಕ್ಷರವಿಲ್ಲದ ಕೊನೆಯ ಉಚ್ಛಾರ,).ತುರೀಯ ಅವಸ್ಥೆ .

ಅಸ್ಪರ್ಶ ಯೋಗ[ಬದಲಾಯಿಸಿ]


ಅಸ್ಪರ್ಶಯೋಗವೆಂದರೆ - ಜ್ಞಾನಯೋಗ .
ಇಂದ್ರಿಯಗಳಿಗೂ, ವಿಷಯಗಳಿಗೂ (ಮಾತ್ರಾ -ಸ್ಪರ್ಶ) ಆಗುವ ಸಂಯೋಗ ಅಥವಾ ಸಂಪರ್ಕ . ಅದರಿಂದಲೇ ಸುಖ , ದುಃಖ ಅನುಭವವಾಗುವುದು. ಅದನ್ನು ದೂರಮಾಡುವುದು ಇಲ್ಲಿನ ಯೋಗ. ಆಗ ಪರಮಾತ್ಮ ತತ್ವವೇ ಅಸ್ಪರ್ಶ ಎನಿಸಿಕೊಳ್ಳುವುದು.

ಮನಸ್ಸೇ ದ್ವೈತಕ್ಕೆಲ್ಲಾ ಕಾರಣ ; (ನಾನಾವಸ್ತುಗಳು -ಬೇಧಗಳು) . ವಿವೇಕ, ಅಭ್ಯಾಸ ವೈರಾಗ್ಯಗಳಿಂದ ಮನೋರಾಹಿತ್ಯ ಹೊಂದಿದರೆ, ನಾನಾತ್ವ ವೆಲ್ಲಾ ನಶಿಸಿ ಹೋಗಿ ; ಪರಮಾತ್ವ ತತ್ವದಲ್ಲಿ ನೆಲೆ ನಿಲ್ಲುತ್ತದೆ. ಅಡಚಣೆ ಗಳು ಇದರಲ್ಲಿವೆ :ಅವು ಲಯ, ವಿಕ್ಷೇಪ , ಕಷಾಯ , ರಸಾಸ್ವಾದ.

ನಿದ್ರೆಗೆ ಒಳಗಾಗುವುದು , ಲಯ ;
ವಿಷಯಗಳತ್ತ ಮನಸ್ಸು ಓಡುವುದು -ವಿಕ್ಷೇಪ ;
ಆಸೆಯು (ಕಾಮವಾಸನೆ) ಬೀಜ ರೂಪದಲ್ಲಿರುವುದು. -ಕಷಾಯ ;
ಸಮಾಧಿಯ ಸುಖ ಅನುಭವಿಸುವುದು : ರಸಾಸ್ವಾದ . :
ಇವನ್ನು ನಿವಾರಿಸಿ ಮುಂದುವದರೆ : ತುರೀಯ - ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ .
ಅದು ಆತ್ಮನ ಸಹಜ ಸ್ಥಿತಿ. ಮರಣವಾಗಬೇಕಿಲ್ಲ. ಜೀವಂತ ಇರುವಾಗಲೇ , ಮುಕ್ತಿ ಸಾದ್ಯ. ಇದು ಗೌಡ ಪಾದರ ಪ್ರತಿಪಾದನೆ.
ಬೌದ್ಧರ ಪ್ರಭಾವ : ಕೆಲವರು ಗೌಡಪಾದರ ಮೇಲೆ ಬೌದ್ಧರ ಪ್ರಭಾವವಾಗಿದೆ ಎಂದು ಹೇಳುತ್ತಾರೆ. ಅವರ (ಬೌದ್ಧರ) ವಿಜ್ಞಾನವಾದ ಶೂನ್ಯ ವಾದ ದ ಪ್ರಭಾವವಿದೆಯೆಂದು ಅಥವಾ ಬೌದ್ಧರೇ ಅಗಿದ್ದಿರಬಹುದೇ ? ಎಂದು ಹೇಳುವವರಿದ್ದಾರೆ.

ಆದರೆ ಬೌದ್ಧ ದರ್ಶನವೂ ಉಪನಿಷತ್ತಿನಿಂದ ಪ್ರಭಾವಿತವಾಗಿದೆ ಎಂಬುದರಲ್ಲಿ ಸಂಶಯವಿಲ್ಲ,. ಹಾಗಾಗಿ ಉಪನಿಷತ್ತುಗಳಿಗೆ ವಿರೋಧವಿಲ್ಲದ, ಬೌದ್ಧ ದರ್ಶನ ತತ್ವಗಳು ಅದ್ವೈತ ದರ್ಶನದಲ್ಲಿ ಬರುವ ಸಾಧ್ಯತೆ ಇದೆ. ಪಾರಭಾಷಿಕ ಪದಗಳು ಒಂದೇ ಆದುದರಿಂದ ಸಾಮ್ಯತೆ ಸಹಜ. ಅಲ್ಲದೆ ಉಪನಿಷತ್ ಗಳಿಗೆ ವಿರೋಧವಲ್ಲದ ಬೌದ್ಧ ಮತದತತ್ವಗಳನ್ನು ಒಪ್ಪಿಕೊಳ್ಳುವುದರಲ್ಲಿ , ಅವರ ವಿಶಾಲ ಮನೋಭಾವ -ಔದಾರ್ಯತೆ ಕಾಣುವುದು ; (ಅದು ಇತರರಲ್ಲಿ ಕಾಣಲಾರದು) .

ಶ್ರೀ ಶಂಕರರ ಯುಗ[ಬದಲಾಯಿಸಿ]

ಅದ್ವೈತದ ವಿಕಾಸ : ಗೌಡಪಾದರ ಮಾಂಡೂಕ್ಯ ಕಾರಿಕೆಯಲ್ಲಿನ ಅದ್ವೈತದ ಸಿದ್ಧಾಂತದ , ರೂಪರೇಷೆಗಳನ್ನು , ವಿಕಸಿತ ಗೊಳಿಸಿದವರು ಶ್ರೀ ಶಂಕರರು .
ಉಪನಿಷತ್ತು,ಬ್ರಹ್ಮ ಸೂತ್ರ, ಭಗವದ್ಗೀತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳಿಗೆ ಸಮ್ಮತವಾದುದು ಅದ್ವೈತ ಸಿದ್ಧಾಂತವೆಂದು ಅತ್ಯಂತ ಕೌಶಲದಿಂದ, ನಿರೂಪಿಸಿದರು . ಅವು ಪ್ರಸ್ಥಾನತ್ರಯವೆಂದು ಪ್ರಸಿದ್ಧವಾಗಿದೆ.

ಬೌದ್ಧ ಮತ್ತು ಇತರ ವೈದಿಕ ದರ್ಶನಗಳಲ್ಲಿರುವ ದೋಷಗಳನ್ನು ಎತ್ತಿ ತೋರಿಸಿ, ವೇದಾಂತವೇ ಪರಿಪೂರ್ಣ ದರ್ಶನವೆಂದು ಸಾಧಿಸಿದರು. ಸ್ವಮತ ಸ್ಥಾಪನೆ, ಪರಮತ ಖಂಡನೆಗಳಲ್ಲಿ ಅವರಂಥ ನಿಪುಣರನ್ನು ಕಾಣುವುದು ಕಷ್ಟ. ಯಾರೇ ಆಗಲಿ ಅವರ ಧೀಮಂತ ವ್ಯಕ್ತಿತ್ವಕ್ಕೆ ತಲೆಬಾಗುವುದು ಸಹಜ. ಅವರ ವೇದಾಂತವನ್ನೆಲ್ಲಾ ಒಂದು ವಾಕ್ಯದಲ್ಲಿ ಸಂಗ್ರಹಿಸಬಹುದು.(ವ+ಓ=ವೋ- ವಓ) ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋಬ್ರಹೈವನಾಪರಃ : (ಈ ವಾಕ್ಯವು ಶಂಕರರು ಹೇಳಿದ್ದಲ್ಲ - ಅವರ ಅನುಯಾಯಿಗಳು ಹೇಳಿದ್ದು -?) ಬ್ರಹ್ಮವು ಸತ್ಯ ಜಗತ್ತು ಮಿಥ್ಯ ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ, ಎಂಬುದೇ ಆ ಪ್ರಸಿದ್ಧ ಉಕ್ತಿ. ಸತ್,ಚಿತ್,ಆನಂದ ಸ್ವರೂಪಿಯಾದುದು ಬ್ರಹ್ಮ. ನಮ್ಮ ಕಣ್ಣಿಗೆ ಕಾಣುವ ಅನುಭವಕ್ಕೆ ಎಟಕುವ, ಈ ಪ್ರಪಂಚವೆಲ್ಲಾ, ಮಿಥ್ಯೆ . ಅಂದರೆ ಅದು ಬ್ರಹ್ಮದ ತೋರಿಕೆಯೇ. ನೀರ ಮೇಲಿನ ಗುಳ್ಳೆಗೆ ನೀರನ್ನು ಬಿಟ್ಟು ಬೇರೆ ಅಸ್ತಿತ್ವವಿಲ್ಲದಂತೆ ಈ ಪ್ರಪಂಚಕ್ಕೆ ಪ್ರತ್ಯೇಕವಾದ ಸ್ವತಂತ್ರವಾದ ಅಸ್ತಿತ್ವವಿಲ್ಲ (ಬ್ರಹ್ಮವನ್ನು ಬಿಟ್ಟು). ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲಾ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು ಕೇವಲ ಮಾಯಾ ಕಲ್ಪಿತ (ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು). ಜೀವಿಗಳೂ ಅಷ್ಟೇ, ಅವು ಅನಾದಿ ಯಿಂದ ಅಜ್ಞಾನದ ಮುಸುಕಿನಲ್ಲಿದ್ದಾರೆ. ಜೀವಿಗಳ ಬೇಧಕ್ಕೆ, ಜೀವ ಜಗತ್ತುಗಳ ಬೇಧಕ್ಕೆ , ಜೀವ-ಜಗತ್ತು-ಬ್ರಹ್ಮಗಳ ಬೇಧಕ್ಕೆ ಅಜ್ಞಾನವೇ ಕಾರಣ.

ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಬೇಧವೆಲ್ಲಾ ಅಳಿದುಹೋಗಿ, ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ ; ಅದೇ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ.

ತ್ರಿವಿಧ ಸತ್ತೆಗಳು[ಬದಲಾಯಿಸಿ]

ಜೀವ, ಜಗತ್ತು , ಬ್ರಹ್ಮಗಳನ್ನರಿಯಲು, ಸತ್ಯವನ್ನು ಅರಿಯುವ ಮಾರ್ಗ , ಮತ್ತು ಕಂಇ ವನ್ನುವ ಅನುಭವದ ಸಂಗತಿ ಮೂರುಬಗೆ. ಮೀಮಾಂಸಕರ ಸ್ವತಃ ಪ್ರಾಮಾಣ್ಯ ವಾದವನ್ನು ಇವರು ಒಪ್ಪುತ್ತಾರೆ ಅಂದರೆ ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಯತಾರ್ಥವೆಂದೇ ತಿಳಿಯಬೇಕು. ಆದರೆ ಈ ಸತ್ಯ ಮೂರು ಬಗೆ, ೧. ಪಾರಮಾರ್ಥಿಕ ಸತ್ಯ, ೨. ವ್ಯಾವಹಾರಿಕ ಸತ್ಯ , ೩.ಪ್ರಾತಿಭಾಸಿಕ ಸತ್ಯ.

ಪಾರಮಾರ್ಥಿಕ ಸತ್ಯ[ಬದಲಾಯಿಸಿ]


(excerpts taken from the book "All about Hinduism", written by Sri Swami Sivananda)

The world is not an illusion according to Sankara. The world is relatively real (Vyavaharika Satta), while Brahman is absolutely real (Paramarthika Satta). The unchanging Brahman appears as the changing world because of a superimposition of non-Self (objects) on Self (subject - Brahman). This is called Avidya (Pratibhasika satta) See also: Works of Adi Shankara Prasthānatrayī 'ಸತ್ತಾ' -ಇದನ್ನು ಕನ್ನಡದಲ್ಲಿ ಸತ್ತೆ ಎಂದಿದೆ; ಮುಂದೆ ಅದನ್ನು 'ಸತ್ಯ' ವೆಂದು ಹೇಳಿದೆ.

ತ್ರಿಕಾಲಾಬಾದ್ಯಂಸತ್ಯಂ ; ಮೂರೂ ಕಾಲಗಳಲ್ಲಿ- ಭೂತ,ವರ್ತಮಾನ, ಭವಿಷ್ಯತ್ -ಈ ಮೂರೂ ಕಾಲಗಳಲ್ಲಿ ಬಾಧಿತವಾಗದಿರುವುದು , -ಬದಲಾವಣೆಯಾಗದಿರುವುದು ಪಾರಮಾರ್ಥಿಕ ಸತ್ಯ. ಯದ್ ರೂಪೇಣ ಯನ್ನಿಶ್ಚಿತಂ ತದ್ರೂಪಂ ನವ್ಯಭಿಚರತಿ ತತ್ಸತ್ಯಂ.(ತೈತ್ತರೀಯ ೨-೧ ಶಾಂಕರ ಭಾಷ್ಯ)ಅಂದರೆ ವಸ್ತುವು ಯಾವ ರೂಪದಲ್ಲಿರುವುದೆಂದು ನಿಶ್ಚತವಾಗಿದೆಯೋ, ಆ ರೂಪದಲ್ಲಿ ಬದಲಾವಣೆಯಾಗುವುದಿಲ್ಲ. ಅದು ಸತ್ಯ.. ಆ ಸತ್ಯವನ್ನು ಅಲ್ಲಗಳೆಯಲು ಬರುವುದಿಲ್ಲ. ಇದಕ್ಕೆ ಪಾರಮಾರ್ಥಿಕ ಸತ್ಯವೆಂದು ಹೆಸರು.ಅದಕ್ಕೆ ಅರ್ಹವಾದುದು ಬ್ರಹ್ಮವೊಂದೇ (ಪರಬ್ರಹ್ಮ). ಎಂದರೆ ಸತ್ಯವು ಯಾವಾಗಲೂ ಒಂದೇರೀತಿ ಇರುತ್ತದೆ. ಇದು ತಾತ್ವಿಕ.

ವ್ಯವಹಾರಿಕ ಸತ್ಯ[ಬದಲಾಯಿಸಿ]


ಸ್ವಲ್ಪ ಕಾಲ ಇದ್ದು ನಂತರ ಬದಲಾಗುವುದು ಈ ಪ್ರಪಂಚ ಮತ್ತು ಈ ಪ್ರಾಪಂಚಿಕ ಪದಾರ್ಥಗಳು ಆ ಬಗೆಯವು. ಇದು ಐದು ಅಂಶಗಳನ್ನು ಹೊಂದಿದೆ.
  1. ಅಸ್ತಿ (ಇರುತ್ತದೆ) ;
  2. ಭಾತಿ (ಬೆಳಗುತ್ತದೆ -ಕಾಣುತ್ತದೆ) ;
  3. ಪ್ರಿಯಂ (ಆನಂದದಾಯಕ) ;
  4. ನಾಮ (ಹೆಸರು ಇದೆ) ;
  5. ರೂಪ (ಆಕಾರ ವಿದೆ) ;
ಇವುಗಳಲ್ಲಿ ಅಸ್ತಿ , ಭಾತಿ, ಪ್ರಿಯಂ ಗಳೆಂಬವು, ಬ್ರಹ್ಮಕ್ಕೆ ಸೇರಿದವು, ನಾಮ ,ರೂಪಗಳು ತೋರಿಕೆಯವು.ಅವು ತ್ರಿಕಾಲಾಬಾಧಿತವಾಗಿರುವುದಿಲ್ಲ(ತ್ರಿಕಾಲದಲ್ಲೂ ಇರುವುವು ಅಲ್ಲ). ಹುಟ್ಟು ಸಾವುಗಳುಂಟು.

ಪ್ರಾತಿಭಾಸಿಕ ಸತ್ಯ[ಬದಲಾಯಿಸಿ]

ಇನ್ನೂ ಕೆಳಗಿನ ಹಂತದ ಸತ್ಯ . ನಂಬಿರುವವರೆಗೆ ಮಾತ್ರ ಸತ್ಯವಾಗಿ ಗೋಚರಿಸುತ್ತದೆ. ಒಂದು ಕ್ಷಣವಾದರೂ ಇದೆಯೆಂದು ಗೋಚರಿಸಿದರೆ , ಅದು ಅನುಭವಕ್ಕೆ ಬಂದರೆ, ಅದನ್ನು ಇಲ್ಲವೆನ್ನುವಂತಿಲ್ಲ. ಉದಾ : ಹಗ್ಗವನ್ನು ಹಾವೆಂದು ತಿಳಿಯುವುದು, ; ಕನಸು ಕೂಡಾ ಈ ವರ್ಗಕ್ಕೆ ಸೇರಿದ್ದು .

ಅಸತ್ಯ[ಬದಲಾಯಿಸಿ]

ಪಾರಮಾರ್ಥಿಕ, ವ್ಯವಹಾರಿಕ , ಪ್ರಾಪಂಚಿಕ ಇವು ಮೂರೂ ಸತ್ಯಗಳಾದರೆ, ಅಸತ್ಯವೆಂದರೇನು ?ಇಲ್ಲದಿರುವುದು , ಅಸಂಭವನೀಯ ; ಉದಾ : ಬಂಜೆಯ ಮಗ ; ಬಾನಿನ ಹೂ ; ಇತ್ಯಾದಿ. ಒಂದೇ ಕ್ಷಣವಾದರೂ, ನಮಗೆ ಇದರ ಅನುಭವ ಆಗುವುದಿಲ್ಲ. ಅಸತ್ಯವೆಂದರೆ ಇರಲಾರದ್ದು. ತ್ರಿಕಾಲದಲ್ಲೂ ಇರಲಾರದ್ದು ಇವನ್ನು ತುಚ್ಛ , ಅಲೀಕ ಎನ್ನಲಾಗಿದೆ.

ಮಿಥ್ಯೆ[ಬದಲಾಯಿಸಿ]

ಜಗತ್ತು ಮಿಥ್ಯೆ ಎಂದರೆ ಮೇಲಿನ ಬಗೆಯ ಅಸತ್ಯವಲ್ಲ . ಜಗತ್ತು ತ್ರಿಕಾಲದಲ್ಲೂ ಒಂದೇ ರೀತಿಯಾಗಿ ಇರುವುದಿಲ್ಲ . ಮತ್ತು ಪಾರಮಾಥಿಕ ಸತ್ಯಕ್ಕೆ ಹೋಲಿಸಿದಾಗ ಮಿಥ್ಯೆ ; ಜಗತ್ತು ಇಂದ್ರಿಯ ಮನಸ್ಸುಗಳಿಗೆ ಸತ್ಯವೆಂದು ಅನುಭವಕ್ಕೆ ಬರುತ್ತೆ - ವಿಚಾರದಿಂದ ಅದು ಮಿಥ್ಯೆಯೆಂದು ತಿಳಿದುಬರುತ್ತೆ ; ಇದನ್ನು ಶಾಂಕರ ವೇದಾಂತದಲ್ಲಿ ಅನಿರ್ವಚನೀಯ ವಿವರಿಸಲುಬಾರದ್ದು -ಮಿಥ್ಯೆ , ಎಂಬುದಾಗಿ ಹೇಳುತ್ತಾರೆ ; ಹೀಗೆ ಮಿಥ್ಯೆಯು ಅನಿರ್ವಚನೀಯ ವಾಗಿರುವುದೊಂದು - ಅಸತ್ಯವು ಅಸಂಭವನೀಯವಾಗಿರುವುದೊಂದು -ಎರಡು ಬಗೆ ಎನ್ನಬಹುದು.

ಆತ್ಮ -ಬ್ರಹ್ಮ[ಬದಲಾಯಿಸಿ]

ಆತ್ಮದ ಅಸ್ತಿತ್ವವು (ಇದೆ ಎನ್ನುವುದು) ಸ್ವಯಂ ಸಿದ್ಧ ಎನ್ನುವುದು ಅದ್ವೈತದ ಅಭಿಪ್ರಾಯ . ಇದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ . ಏಕೆಂದರೆ "ನಾನು ಇದ್ದೇನೆ" ಎಂದು ಪ್ರತಿಯೊಬ್ಬರೂ ತಿಳಿಯುತ್ತಾರೆ. ಇದು ಆತ್ಮ ದ ಅಸ್ತಿತ್ವಕ್ಕೆ ಸಾಕ್ಷಿ . ('ನಾನು ಇಲ್ಲ' ಎಂಬುದು ಸಾಧ್ಯವಿಲ್ಲ. ) ಅದು ("ನಾನು ಇದ್ದೇನೆ" ಎಂಬುದು) ನಮ್ಮ ತಿಳುವಿಗೆಲ್ಲಾ ಆಧಾರಭೂತವಾದುದು.
ಚರ್ಚೆಗೆ ಮೊದಲು ಆತ್ಮವು ಇದೆಯೋ ಇಲ್ಲವೋ ಅದು ಸಿದ್ಧವಾಗಬೇಕು (ರುಜುವಾತಾಗಬೇಕು) . ಆದರೆ ಅದ್ವೈತದಲ್ಲಿ ಅದಕ್ಕೆ ಅವಕಾಶವಿಲ್ಲ. - ಏಕೆಂದರೆ ನಾನು ಇಲ್ಲ- ಆತ್ಮವು ಇಲ್ಲ ಎಂದು ನಿರಾಕರಿಸಲು ಸಾಧ್ಯವೆ ಇಲ್ಲ.
ಆಗಂತುಕ (ಹೊರಗಿನಿಂದ ಬಂದ) ವಸ್ತುವನ್ನು ನಿರಾಕರಿಸ ಬಹುದು . ಆದರೆ ಅದರ ಸ್ವರೂಪವನ್ನು ನಿರಾಕರಿಸಲು ಆಗುವುದಿಲ್ಲ. ಉದಾ : ಬೆಂಕಿಯನ್ನು ನಿರಾಕರಿಸಬಹುದು (ಭ್ರಮೆ ಎಂದು) ; ಆದರೆ ಅದರ ಉಷ್ಣತೆಯನ್ನು ನಿರಾಕರಿಸಲು ಬರುವುದಿಲ್ಲ. ಆದ್ದರಿಂದ ನಾನು ಇದ್ದೇನೆ ಎಂಬ ಅನುಭವವನ್ನು ನಿರಾಕರಿಸಲುಬಾರದು. ಆ ಕಾರಣ ಆತ್ಮವು ಸ್ವಯಂ ಸಿದ್ಧ ವಾದುದು.
ಆದ್ದರಿಂದ ಚರ್ಚಿಸ ಬೇಕಾದದ್ದು ಆತ್ಮದ ಅಸ್ತಿತ್ವದ ಬಗೆಗಲ್ಲ - ಅದರ ಸ್ವರೂಪದ ಬಗೆಗೆ.
ಚಾರ್ವಾಕರು , ಮುಂತಾದವರು ಇಂದ್ರಿಯ, ಮನಸ್ಸು ಗಳನ್ನೇ ಆತ್ಮ ಎಂದು ಭಾವಿಸಿದರೂ, ಆತ್ಮ ಅವುಗಳಿಗಿಂತ ಭಿನ್ನವಾದುದು. ಅದನ್ನು ಜಡವೆಂದಾಗಲೀ (ಇಂದ್ರಿಯಗಳಂತೆ) ಅವುಗಳಿಂದ ಹುಟ್ಟಿ ದ್ದೆಂದಾಗಲೀ ತಿಳಿಯುವುದು ಸರಿಯಲ್ಲ. ಅದು (ಆತ್ಮ) ಚೈತನ್ಯ ಸ್ವರೂಪಿ. ಜಾಗ್ರತ್ , ಸ್ವಪ್ನ , ಸುಷುಪ್ತಿ ಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ, "ನಾನು ಇದ್ದೇನೆ" ಎಂಬ ಅನುಭವ, ಈ ಮೂರೂ ಅವಸ್ಥೆಗೂ ಇರುವುದು.

ಜ್ಞಾನ ಸ್ವರೂಪಿ[ಬದಲಾಯಿಸಿ]

ಆತ್ಮವು ಜ್ಞಾನ ಸ್ವರೂಪಿ.. ಜ್ಞಾನವು ಎರಡು ಬಗೆ. ನಿತ್ಯ , ಅನಿತ್ಯ ಎಂದು ; ಯಾವುದೇವಿಷಯಕ್ಕೆ (ಪಂಚೇಂದ್ರಿಯಗಳಿಗೆ) ಸಂಬಂಧಿಸಿದ ಜ್ಞಾನವು ಅನಿತ್ಯವಾದುದು. ಜ್ಞಾನಕ್ಕೆ ವಿಷಯಗಳಿರುವಾಗ (ಗುಣ) ಮಾತ್ರಾ ಆ ಜ್ಞಾನ ಇರುತ್ತದೆ - ಇಲ್ಲವಾದರೆ ಇಲ್ಲ. ಮೂಗಿಗೆ ಗ್ರಹಣ ಶಕ್ತಿ ಇದ್ದರೆ ಪರಿಮಳ ಇರುತ್ತದೆ- ಇಲ್ಲದಿದ್ದರೆ ಪರಿಮಳವಿಲ್ಲ. ಆದರೆ ಶುದ್ಧ ಜ್ಞಾನವು ಯಾವಾಗಲೂ ಇರುತ್ತದೆ.

ಅಖಂಡ ಆನಂದ ರೂಪಿ[ಬದಲಾಯಿಸಿ]

ಆತ್ಮವು ಆನಂದ ರೂಪಿಯಾದುದು, ಅಲ್ಲಿ ದುಃಖದ ಸೋಂಕು ಇಲ್ಲ. ವಿಷಯ (ಇಂದ್ರಿಯ) ಸಂಪರ್ಕದಿಂದ ಸುಖ ದುಃಖ ಉಂಟಾಗುತ್ತದೆ. ಶುದ್ಧ ಚೈತನ್ಯಕ್ಕೆ ವಿಷಯ ಸಂಪರ್ಕವಿಲ್ಲದಿರುವಾಗ, ಸುಖ ದುಃಖಗಳಿಗೆ ಮೀರಿದ ಸ್ಥಿತಿ ಇರುತ್ತದೆ. ಇದು ಆನಂದ . ಆತ್ಮವು ಕರ್ತೃವಾಗಲೀ ಭೋಕ್ತೃವಾಗಲೀ ಆಗಲಾರದ್ದು. ಏಕೆಂದರೆ ಅದು ಕ್ರಿಯೆಗೆ ಆಶ್ರಯವಾಗಿದೆ. ಕಾರಣ ಅದರಲ್ಲಿ ಬದಲಾವಣೆ ಇಲ್ಲ. ಬದಲಾವಣೆ ಇದ್ದರೆ ಅನಿತ್ಯವಾಗುವುದು. ಆತ್ಮವೆಂಬ ಈ ಚೈತನ್ಯವು , ಸಮಸ್ತ ಪ್ರಪಂಚವನ್ನೂ ವ್ಯಾಪಿಸಿದೆ. ಅದು -ಅಖಂಡ , ಅದ್ವಯ ; ಇದು ಬಿಟ್ಟರೆ ಮತ್ತಾವುದೂ ಪಾರಮಾರ್ಥಿಕ ಸತ್ಯವಲ್ಲ.

ಆತ್ಮ -ಬ್ರಹ್ಮ[ಬದಲಾಯಿಸಿ]

ಆತ್ಮದ ಅಸ್ತಿತ್ವವು ಸಿದ್ಧವಾದ ಮೇಲೆ. ಬ್ರಹ್ಮ ತತ್ವದ ಸಿದ್ಧಿಯೂ ಆಯಿತು. ಏಕೆಂದರೆ ಆತ್ಮವೇ ಬ್ರಹ್ಮ. . (ಸರ್ವಸ್ಯ, ಆತ್ಮತ್ವಾಚ್ಚ , ಬ್ರಹ್ಮಾಸ್ತಿತ್ವ ಪ್ರಸಿದ್ಧಿಃ : ಶಂಕರ ಭಾಷ್ಯ-೧.೧.೧.)

ಬ್ರಹ್ಮ ಮತ್ತು ಈಶ್ವರ[ಬದಲಾಯಿಸಿ]

ನಿರ್ಗುಣ ಬ್ರಹ್ಮ : ಉಪನಿಷತ್ತುಗಳಲ್ಲಿ ಬ್ರಹ್ಮದ ತತ್ವವನ್ನು ಎರಡು ರೀತಿಯಲ್ಲಿ ಮಾಡಿದೆ. ಕೆಲವೆಡೆ ಬ್ರಹ್ಮವನ್ನು -'ನೇತಿ', 'ನೇತಿ' ,ಎಂದು ; (ಹೀಗಲ್ಲ , ಇದಲ್ಲ, ಎಂದು ) ಭಾಷೆಯೆಲ್ಲಾ ದ್ವೈತ ಮಯವಾದ್ದರಿಂದ, ಅವು ಬ್ರಹ್ಮ ತತ್ವವನ್ನು ವಿವರಿಸಲಾರವು. ಗುರೋಸ್ತು ಮೌನಂ ವ್ಯಾಖಾನಂ, ಎಂಬಂತೆ ಮೌನದಿಂದಲೇ ಬ್ರಹ್ಮವನ್ನು ತಿಳಿಸಬೇಕಾಗುತ್ತದೆ. ಇದು "ಹೌದು", ಎನ್ನುವುದಕ್ಕಿಂತ "ಇದಲ್ಲ ",ಎಂಬುದೇ ಸರಿ ಎಂಬುದು. ಕೆಲವೆಡೆ ಬ್ರಹ್ಮವನ್ನು ಸಚ್ಚಿ ದಾನಂದ ರೂಪ ಎನ್ನಲಾಗಿದೆ. ಮತ್ತೆ ಕೆಲವೆಡೆ ಇದು ಎಲ್ಲವನ್ನೂ ಮೀರಿದ್ದು -ನಿರ್ಗುಣ ಬ್ರಹ್ಮವೆಂದು ಕರೆಯಲಾಗಿದೆ. ಇನ್ನೊಂದು ಸಗುಣ ಬ್ರಹ್ಮ .

ಸಗುಣ ಬ್ರಹ್ಮ[ಬದಲಾಯಿಸಿ]


ಇನ್ನೊಂದು ಸಗುಣ ಬ್ರಹ್ಮ ದಸ್ವರೂಪವರ್ಣನೆ . ಬ್ರಹ್ಮಸೂತ್ರದ ಜನ್ಮಾದ್ಯಸ್ಯ ಯತಃ (೧.೧.೨) ಜಗತ್ತಿನ ಸೃಷ್ಟಿ , ಸ್ಥಿತಿ , ಲಯಗಳಿಗೆ ಕಾರಣವಾದ ಬ್ರಹ್ಮ. ಈ ಸಗುಣ ಬ್ರಹ್ಮವನ್ನೇ ಈಶ್ವರನೆಂದು ಕರೆಯುವರು.

ಬ್ರಹ್ಮವು ಸಗುಣವೂ ನಿರ್ಗುಣವೂ ಆಗಿದೆಯೇ ಎಂಬ ಪ್ರಶ್ನೆ ಏಳುತ್ತದೆ. ಅದ್ವೈತ ವೇದಾಂತವು ಬ್ರಹ್ಮವು ನಿರ್ಗುಣವೆಂದೇ ಹೇಳುತ್ತದೆ.

ನಿರ್ಗುಣ ಬ್ರಹ್ಮವನ್ನು "ಪರಬ್ರಹ್ಮ"ವೆಂದೂ ಜಗತ್ತಿನ ಸೃಷ್ಟಿ,ಸ್ಥಿತಿ ಲಯಗಳಿಗೆ ಕಾರಣವಾದ ಬ್ರಹ್ಮವನ್ನು "ಅಪರಬ್ರಹ್ಮ"ವೆಂದೂ ಕರೆಯಲಾಗಿದೆ. ಅದು ನಾಮ,ರೂಪ, ಬೇಧಗಳಿಂದ ಕೂಡಿದ ಈಶ್ವರ. "ಪರಬ್ರಹ್ಮ"ವು ಉಪಾದಿಗಳಿಂದ (ನಾಮ,ರೂಪ- ಇತ್ಯಾದಿ) ದೂರವಾದದ್ದು . ಹಾಗಾಗಿ, ಸೋಪಾಧಿಕ ಬ್ರಹ್ಮ, ನಿರುಪಾಧಿಕ ಬ್ರಹ್ಮ ವೆಂದು ಕರೆದಿದೆ. 'ಆದರೆ ಇವುಗಳಲ್ಲಿ ಬೇಧವಿಲ್ಲ' ;. ಅದೇ ಇದಾಗಿ ತೋರುವುದು.
ನಿರ್ಗುಣಮಪಿಸದ್ ಬ್ರಹ್ಮ, ನಾಮ, ರೂಪ ಗತೈಃ ಗುಣೈಃ ಸಗುಣಂ, ಉಪಾಸನಾರ್ಥಂ ತತ್ರ ತತ್ರ ಉಪದಿಶ್ಯತೇ (ಶಂ.ಭಾ.೧.೨.೧೪), ಈಶ್ವರನ ಉಪಾಸನೆಯಿಂದ ಚಿತ್ತ ಶುದ್ಧಿಯಾಗಿ ಜ್ಞಾನ ಮಾರ್ಗ ಅನುಸರಿಸಲು, ಮತ್ತು ಕೊನೆಯ ಮೆಟ್ಟಿಲಾದ ಪರಬ್ರಹ್ಮವನ್ನು ಪಡೆಯಬಹುದು. ಕರ್ಮಫಲವನ್ನು ವಿತರಿಸಲು, ಈಶ್ವರನನ್ನು ಒಪ್ಪಬೇಕಾಗುವುದು. - ಎಂದು ಶ್ರೀಶಂಕರರು ವಾದಿಸುತ್ತಾರೆ.

ಈಶ್ವರ( ಸೃಷ್ಟಿಕರ್ತ)[ಬದಲಾಯಿಸಿ]


ಕಾರ್ಯಕಾರಣ ವಾದದ ಬಲದಿಂದ ಜಗತ್ತಿಗೆ ಕಾರಣವೊಂದಿದೆ ಎಂದು ಸಿದ್ಧಪಡಿಸಬಹುದು. . ಆದರೆ ಈಶ್ವರನೇ ಕಾರಣವೆಂಬುದನ್ನು ಸಿದ್ಧಪಡಿಸಲಾಗದು. (ಬ್ರ.ಸೂ. ಜನ್ಮಾದ್ಯಸ್ಯ ಯತಃ ಕ್ಕೆ ಭಾಷ್ಯ) ಈಶ್ವರನೇ ಸೃಷ್ಟಿಕರ್ತನೆಂಬುದಕ್ಕೆ ಶ್ರುತಿಯೇ ಆಧಾರ. ಅದರಂತೆ ಈಶ್ವರನು ಜಗತ್ತಿನ ಸೃಷ್ಟಿ ,,ಸ್ಥಿತಿ,ಲಯಗಳಿಗೆ ಕಾರಣ ;ಕರ್ಮಫಲದಾತ ; ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ; ಭಕ್ತಿ ಪ್ರೀತ ವರದಾತ ; ವೇದ ರಕ್ಷಕ (ಪುನರುಜ್ಜೀವಕಾರಕ) ; ಆದರೆ ಕರ್ಮದ ಸೋಂಕಿಲ್ಲ. ಮಾಯೆ ಅವನ ಶಕ್ತಿ. ಆದರೆ ಮಾಯಾತೀತ ; ಜಗತ್ತಿನ ಸೃಷ್ಟಿ ಅವನ ಲೀಲೆ, ಮಾಯೆ. (ಕಾರಣ ಜಗತ್ತನ್ನು ಏಕೆ ಸೃಷ್ಟಿಸಿದ ?-ಉತ್ತರವಿಲ್ಲ,[ನೋಡಿ ಜಗತ್ತು] ಅಥವಾ ಮಾಯೆ;< ಜೀವಿಯು ಬ್ರಹ್ಮವನ್ನು ಜಗತ್ತಿನಿಂದಲೇ ತಿಳಿಯಬೇಕು, ಹೇಗೆಂದರೆ, ಮಡಿಕೆಯನ್ನು ಬಿಟ್ಟು ಮಣ್ಣಿನ ಸ್ವರೂಪ ಜೀವನಿಗೆ ಗೊತ್ತಿಲ್ಲವಾದ್ದರಿಂದ ಮಡಿಕೆಯಿಂದಲೇ ಮಣ್ಣನ್ನು ಅರಿಯಲು ಸಾಧ್ಯ.>[ಆಧಾರವಿಲ್ಲ]>ಇದು ಅನಾಮಧೇಯ ಸಂಪಾದಕರ ಅಭಿಪ್ರಾಯ, ಶಂಕರರ ಅಭಿಪ್ರಾಯವಲ್ಲ); ಅವನು ಅದರ ಸೂತ್ರಧಾರಿ -ಪಾತ್ರಧಾರಿ - ಪ್ರೇಕ್ಷಕ. :ನಂತರದಲ್ಲಿ ಅದ್ವೈತದ ಈ ಈಶ್ವರನ ಅಸ್ತಿತ್ವ ವಾದದಿಂದ ಬೇರೆ ಬೇರೆ ವಾದಗಳು ಪಂಥಗಳು ಹೊರಟವು / ಹುಟ್ಟಿದವು. ಅವಿದ್ಯೆ (ಮಾಯೆ) ,
ಈಶ್ವರ, - ನಿರ್ಗುಣ ಬ್ರಹ್ಮದಿಂದ, ಜೀವ, ಜಗತ್ತು ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೇ ಉಳಿದಿದೆ. ಅವಿದ್ಯೆ ದೂರವಾದ ನಂತರ ಸಾಕ್ಷಾತ್ಕಾರ . ನಂತರ ಈ ಪ್ರಶ್ನೆಗಳಿಗೆ ಅರ್ಥವಿಲ್ಲ !! ಆದ್ದರಿಂದ ಜಗತ್ತಿನ ಮಾಯೆ ಅನಿರ್ವಚನೀಯ .

ಮಾಯಾವಾದ[ಬದಲಾಯಿಸಿ]

ಮಾಯಾವಾದವು ಅದ್ವೈತದ ಪ್ರಮುಖ ಸಿದ್ಧಾಂತಗಳಲ್ಲೊಂದು. ಅದ್ವೈತದ ಅಡಿಗಲ್ಲೆಂದರೆ ತಪ್ಪಲ್ಲ . ಜಗನ್ಮಿಥ್ಯಾ ತತ್ವವು ಮಾಯಾವಾದವನ್ನು ಆಧರಿಸಿದೆ. ಅದ್ವೈತದಲ್ಲಿ , ಬ್ರಹ್ಮ-ಈಶ್ವರ, ಬ್ರಹ್ಮ -ಜಗತ್ತು , ಬ್ರಹ್ಮ-ಜೀವ, ಈ ಸಂಬಂಧಗಳನ್ನು ವಿವರಿಸುವಲ್ಲಿ ಮಾಯೆಯ ಕಲ್ಪನೆ ಅಗತ್ಯ. ಹಾಗಾಗಿ ಅದ್ವೈತಿಗಳನ್ನು ಮಾಯಾವಾದಿಗಳೆಂದು ಕರೆಯುತ್ತಾರೆ.

ಮಾಯಾ ಶಬ್ದವು ವೇದ ಉಪನಿಷತ್ತುಗಳಲ್ಲಿಯೂ, ಉಪಯೋಗಿಸಲ್ಪಟ್ಟಿದೆ . ಅದನ್ನು ಪ್ರಪಂಚದ ವಿವರಣೆಯ, ಪ್ರಮುಖ ಸಿದ್ಧಾಂತವಾಗಿ ಅದ್ವೈತ ನಿರೂಪಿಸಿದೆ.

ಅದ್ವೈತ ವೇದಾಂತದಲ್ಲಿ ಮಾಯೆ[ಬದಲಾಯಿಸಿ]


ಅವಿದ್ಯೆ , ಅಜ್ಞಾನ , ಅಧ್ಯಾಸ , ಅದ್ಯಾರೋಪ , ಅನಿರ್ವಚನೀಯ , ವಿವರ್ತ , ಭ್ರಾಂತಿ , ಭ್ರಮ , ನಾಮ ರೂಪ , ಅವ್ಯಕ್ತ , ಅಕ್ಷರ , ಬೀಜ ಶಕ್ತಿ , ಮೂಲ ಪ್ರಕೃತಿ , ಇತ್ಯಾದಿ ಪದಗಳನ್ನು ಹೆಚ್ಚಾಗಿ ಪಚಿiiಯ (ಒಂದೇ ಅರ್ಥದ) ಪದಗಳಂತೆ ಬಳಸುತ್ತಾರೆ.

ಮಾಯೆ : ಶಂಕರ ಮತ[ಬದಲಾಯಿಸಿ]


೧. ಸಾಂಖ್ಯರ ಪ್ರಕೃತಿಯಂತೆ ಜಡ ; ಸಾಂಖ್ಯರು ಪುರುಷ (ಜೀವ)ನನ್ನು ಚೈತನ್ಯವೆಂದರೆ - ಇಲ್ಲಿ ಬ್ರಹ್ಮ ಚೈತನ್ಯ . ಸಾಂಖ್ಯ ರಲ್ಲಿ ಪ್ರಕೃತಿ ಸ್ವತಂತ್ರ ಅಸ್ತಿತ್ವ ಉಳ್ಳದ್ದು . ಆದರೆ ಇಲ್ಲಿ ಮಾಯೆ ಪ್ರಪಂಚಕ್ಕೆ ಕಾರಣವಾದರೂ , ಸ್ವತಂತ್ರವಲ್ಲ. ಅದ್ವೈತದಲ್ಲಿ ಸಾಂಖ್ಯರಂತೆ ಅಂತಿಮ ಸತ್ಯತೆಯೂ ಅದಕ್ಕಿಲ್ಲ.
೨. ಮಾಯೆಯು ಬ್ರಹ್ಮನ ಶಕ್ತಿ . ಅದು ಬ್ರಹ್ಮದಿಂದ ಬೇರಯಲ್ಲ (ಅನನ್ಯ) ; ಬೆಂಕಿಯ ಸುಡುವ ಸ್ವಭಾವವಿದ್ದಂತೆ. ಇದು ಬ್ರಹ್ಮ ಸ್ವರೂಪವೂ ಅಲ್ಲ.
೩. ಮಾಯೆಯು ಅನಾದಿಯಾಗಿದೆ (ಆದಿ ಇಲ್ಲದ್ದು ಅದರ ಆರಂಭ ಯಾವಾಗ ಹೇಗೆ ಆಯಿತು ಎಂದು ಹೇಳಲು ಸಾದ್ಯವಿಲ್ಲ.
೪ . ಮಾಯೆಯು ಪಾರಮಾರ್ಥಿಕ ಸತ್ಯವಲ್ಲ. ಭಾವ ರೂಪವಾದುದು. ಅದಕ್ಕೆ ಎರಡು ಶಕ್ತಿ ಇದೆ . ಆವರಣ ಮತ್ತು ವಿಕ್ಷೇಪ . ಆವರಣವು ಬ್ರಹ್ಮವನ್ನು ಮರೆ ಮಾಡುತ್ತದೆ. ವಿಕ್ಷೇಪವು ಬ್ರಹ್ಮವು ಜೀವನಾಗಿ ಕಾಣುವಂತೆ ಮಾಡುತ್ತದೆ. ಇಲ್ಲದ್ದನ್ನು ಇದೆ ಎಂದು ತೋರಿಸುವುದು . (ಉದಾ : ಹಗ್ಗವನ್ನು ಹಾವಾಗಿ ಕಾಣುವಂತೆ ಮಾಡುವುದು.) ಶೋಕ ಮೋಹ ಇತ್ಯಾದಿ.
೫ . ಮಾಯೆಯು ಅನಿರ್ವಚನೀಯವಾದುದು. -ವಿವರಿಸಲು ಬಾರದ್ದು. ಎರಡು ರೂಪದ್ದು ಅಲ್ಲ . ಇದು ಪಾರಮಾರ್ಥಿಕ ಸತ್ಯವಲ್ಲ. ಆದುದರಿಂದ ಇದೆ ಎನ್ನುವಂತಿಲ್ಲ. ಇದು ಪ್ರಪಂಚವನ್ನು ತೋರಿಸುತ್ತಿರುವ ಕಾರಣ ಇಲ್ಲವೆಂದು ಹೇಳುವ ಹಾಗಿಲ್ಲ. ಜ್ಞಾನವಾದ ನಂತರ ಕಾಣದಿರುವುದರಿಂದ ನಿಜವಲ್ಲ.
೬ . ಮಾಯೆಯು ವ್ಯವಹಾರಿಕ ಸತ್ಯವಾಗಿದೆ. ಅಧ್ಯಾಸ ರೂಪವಾಗಿರುವುದರಿಂದ, 'ವಿವರ್ತ'(ತೋರಿಕೆ)ವಾಗಿದೆ. ಹಗ್ಗದಲ್ಲಿ ಹಾವು ತೋರಿದಂತೆ. ಭ್ರಾಂತಿರೂಪವಾಗಿದೆ .
೭ . ಬ್ರಹ್ಮ ಜ್ಞಾನವದ ಕೂಡಲೆ ಇದು ನಿವಾರಣೆಯಾಗುತ್ತದೆ. ಬೆಳಕಿನಿಂದ ಕತ್ತಲೆ ಹೋದಂತೆ.
೮ . ಇದಕ್ಕೆ ಬ್ರಹ್ಮವು ಆಶ್ರಯವೂ ಹೌದು ವಿಷಯವೂ ಹೌದು. ಇಂದ್ರಜಾಲ ಮಾಡುವವನು ತನ್ನ ಇಂದ್ರ ಜಾಲಕ್ಕೆ ವಶನಾಗದಿರುವಂತೆ.

ವಿವರ್ತ ವಾದ.[ಬದಲಾಯಿಸಿ]


ಇದು ಅದ್ವೈತ ವೇದಾಂತ ಕ್ಕೆ ಸಮ್ಮತವಾದ ಕಾರ್ಯಕಾರಣವಾದ. ಕಾರ್ಯವು ಕಾರಣದಿಂದ ಬೇರೆಯಲ್ಲ. ಉದಾ : ಕಾರ್ಯವಾದ ಮಡಕೆಯಲ್ಲಿ ಕಾರಣವಾದ ಮಣ್ಣು ಇದೆ.ಮಣ್ಣೇ ಮಡಿಕೆಯಾಗಿದೆ. ಆದರೆ ವಿವರ್ತದಲ್ಲಿ ತೋರಿಕೆಯ ಬದಲಾವಣೆ ಯಾಗುವುದು. ಉದಾ : ನೀರು ಗುಳ್ಳೆಯಾಗುವುದು..ಕಪ್ಪೆ ಚಿಪ್ಪು ಬೆಳ್ಳಿಯಾಗಿತೋರುವುದು -ವಿವರ್ತ. ಕಾರಣವು ನಿಜವಾಗಿ ಬದಲಾವಣೆ ಯಾಗದೆ ತೋರಿಕೆಯ ಬದಲಾವಣೆಯಾಗುವುದು (ಕಾರ್ಯ)..ದೇವದತ್ತನು ಮಲಗಿದ್ದರೂ, ಕುಳಿತಿದ್ದರೂ ದೆವದತ್ತನೇ ಯಜ್ಞದತ್ತನಾಗುವುದಿಲ್ಲ. ಹಾಗೆ.
ಆದ್ದರಿಂದ, ಹಾಗೆಯೇ ಪ್ರಪಂಚವಾಗಿ ಕಾಣುವುದೂ ಬ್ರಹ್ಮ.ವೇ ಹೊರತು ಬೇರೆ ಯಲ್ಲ ಎಂಬುದು ಅದ್ವೈತ ದರ್ಶನ.

ಜಗತ್ತು[ಬದಲಾಯಿಸಿ]

ಜಗತ್ತು ಪಾರಮಾರ್ಥಿಕ ದೃಷ್ಟಿಯಿಂದ ಬಾಧಿತವಾಗಿ ಅಸತ್ತು (ಮಿಥ್ಯೆ) ಎಂದು ತೀರ್ಮಾನವಾಗಿದ್ದರೂ, ವ್ಯವಹಾರಿಕ ಸತ್ತೆಯನ್ನು (ಸತ್ಯವೆಂದು) ಹೊಂದಿರುವುದರಿಂದ, ವಾಸ್ತವವಾದುದು. ಅದು (ಜಗತ್ತು) ಬ್ರಹ್ಮದ ನೆಲೆಯಿಂದ ತೋರಿಕೆಯಾದರೂ ಜೀವದ (ಜೀವ-ನ ನೆಲೆಯಿಂದ ) ಸತ್ಯ.
ಜಗತ್ತಿಗೆ ಬ್ರಹ್ಮವೇ ಕಾರಣ . ಇದು ಶ್ರುತಿ (ವೇದ) ಸಮ್ಮತ. ಕೆಲವರು (ನ್ಯಾಯ) ಈಶ್ವರ ನಿಮಿತ್ತ ಕಾರಣ ಮಾತ್ರ ಎನ್ನುತ್ತಾರೆ (ಮಡಕೆಗೆ ಕುಂಬಾರನಿದ್ದಂತೆ) .
ಆದರೆ ವೇದಾಂತವು , ಈಶ್ವರನು ನಿಮಿತ್ತ ಕಾರಣವೂ ಹೌದು ; ಉಪಾದಾನ ಕಾರಣವೂ ಹೌದು ಎನ್ನುತ್ತದೆ (ಮಡಕೆಗೆ ಮಣ್ಣು ಇದ್ದಂತೆ). ಈಶ್ವರನು ಜಗತ್ತನ್ನು ಉಂಟುಮಾಡುವುದು ತನ್ನಿಂದಲೇ. ಮಾಯೆ ಎಂಬ ಉಪಾದಿಯಿಂದಲೇ ಈಶ್ವರನು ಜಗತ್ತನ್ನು ಉಂಟುಮಾಡುತ್ತಾನೆ. ಅವನು ಚೇತನನೂ ಹೌದು ; ಅವನು ತನ್ನ ಇಚ್ಛೆಯಿಂದಲೇ ಅವನೇ ಮಾಯೆಯ ಉಪಾದಿಯಿಂದ ಜಗತ್ತಾಗಿತೋರುತ್ತಾನೆ. ಚೈತನ್ಯ ದಿಂದ ಜಡವಾದ ಚೇತನ ಹೇಗೆ ಉಂಟಾಗುವುದೆಂದರೆ , ಅದು ತಪ್ಪಲ್ಲ, ಪುರುಷನಲ್ಲಿ ಉಗುರುಇದ್ದಂತೆ - ಒಟ್ಟಿನಲ್ಲಿ ಅನಿರ್ವಚನೀಯ .

ಸೃಷ್ಟಿ[ಬದಲಾಯಿಸಿ]

ಜಗತ್ತಿನ ಸೃಷ್ಟಿ ಹೇಗೆ ? ತಮೋಗುಣವು ಪ್ರಧಾನವಾದ ವಿಕ್ಷೇಪ ಶಕ್ತಿಯಿಂದ (ಮಾಯೆಯಿಂದ) ಕೂಡಿದ ಚೈತನ್ಯದಿಂದ, ಆಕಾಶವು ಮೊದಲು ಹುಟ್ಟಿತು ; ಆಕಾಶದಿಂದ ವಾಯು ; ವಾಯುವಿನಿಂದ ಅಗ್ನಿ ; ಅಗ್ನಿಯಿಂದ ಜಲ ; ಜಲದಿಂದ ಪೃಥ್ವಿ . ; -ಅದರಿಂದ ತನ್ಮಾತ್ರೆಗಳು ; ಈ ಸೂಕ್ಕ್ಮವಾದ ತನ್ಮಾತ್ರೆ ಗಳಿಂದ ಸೂಕ್ಷ್ಮ ಶರೀರ ; ಸ್ಥೂಲ ಭೂತಗಳು ಹುಟ್ಟುತ್ತವೆ -(ಪಂಚೀಕರಣ ವಿಧಾನ) .

ಜೀವ -ಈಶ್ವರ[ಬದಲಾಯಿಸಿ]

ಜೀವನಿಗೆ ಸ್ಥೂಲ , ಸೂಕ್ಷ್ಮ , ಕಾರಣಗಳೆಂಬ ಮೂರು ಶರೀರಗಳು. ಜಾಗ್ರತ್ , ಸ್ವಪ್ನ , ಸುಷುಪ್ತಿ ಗಳೆಂಬ ಮೂರು ಅವಸ್ಥೆಗಳು ; ಅನ್ನಮಯ , ಪ್ರಾಣಮಯ , ಮನೋಮಯ ,ವಿಜ್ಞಾನಮಯ , ಆನಂದಮಯ ; ಎಂಬ ಐದು ಕೋಶಗಳು , (ಒಂದರಿಂದ ಇನ್ನೊಂದು ಉನ್ನತ ಸ್ಥಿತಿ ,) ; ವಿಶ್ವ , ತೈಜಸ , ಪ್ರಾಜ್ಞ , ಎಂಬ ದೇವತೆಗಳ ಹೆಸರುಗಳು ಜೀವನಿಗೆ -ಜಾಗ್ರತ್ , ಸ್ವಪ್ನ , ಸುಷುಪ್ತಿ ಯನ್ನು ಆಧರಿಸಿ ಈ ಹೆಸರುಗಳು ಇವೆ . ಅದೇ ರೀತಿಯಲ್ಲಿ ಈಶ್ವರನಿಗೂ ವೈಶ್ವಾನರ (ಕಾಣುವ ಜಗತ್ತು) , ಸೂತ್ರಾತ್ಮ (ಸ್ವಪ್ನದ ಈಶ್ವರ-ದೇವತೆ) ; ಹಿರಣ್ಯ ಗರ್ಭ (ಸುಷುಪ್ತಿಯ ಈಶ್ವರ ಅಥವಾ ಸಮಾಧಿಯ ಈಶ್ವರ) ಎಂಬ ಹೆಸರುಗಳುಂಟು.

ಅಂತಃಕರಣ ಮತ್ತು ಸಾಕ್ಷಿ[ಬದಲಾಯಿಸಿ]


ಅಂತಃಕರಣವು ಜಡವಾಗಿದೆ (ಸ್ವತಃ ಚೈತನ್ಯವಲ್ಲ). ತೇಜಸ್ಸಿನ ಅಂಶವು ಪ್ರಧಾನವಾಗಿದೆ. ಇದು ಚಂಚಲವೂ ಕ್ರಿಯಾಶೀಲವೂ ಆಗಿದೆ. ಇದರ ಕ್ರಿಯೆಗಳೇ ವೃತ್ತಿಗಳು. ಗಾಢ ನಿದ್ದೆ , ಮೂರ್ಛೆಗಳನ್ನು ಬಿಟ್ಟರೆ, ಅದು ಸದಾ ವೃತ್ತಿಯುಳ್ಳದ್ದೇ ಆಗಿರುತ್ತದೆ. ನಾವು ಜ್ಞಾನವೆಂದು ಕರೆಯುವುದು, ಇದೇ ವೃತ್ತಿಗಳನ್ನು.
ಸಾಕ್ಷಿ : ಅಂತಃಕರಣ ಜಡವಾದುದರಿಂದ ವೃತ್ತಿಗಳು ಹುಟ್ಟಲು ಚೈತನ್ಯ ಬೇಕು . ಜೀವನಲ್ಲಿರುವ ಚೈತನ್ಯಾಂಶವೇ, ಸಾಕ್ಷಿ ಎನಿಸಿಕೊಳ್ಳುತ್ತದೆ . ಕಾರಣ ಇದು ಅಂತಃಕರಣದಲ್ಲಿ (ಮನಸ್ಸು , ಬುದ್ಧಿ , ಅಹಂಕಾರ , ಚಿತ್ತ . ಇವು ಒಟ್ಟು ಅಂತಃಕರಣ ಎನ್ನಿಸಿಕೊಳ್ಳುತ್ತದೆ ) ನೇರವಾಗಿ ಭಾಗಿಯಾಗುವುದಿಲ್ಲ . ನಾಟಕ ರಂಗದಲ್ಲಿರುವ ದೀಪದಂತೆ (ಸಾಕ್ಷಿ ?) ಇರುತ್ತದೆ.
ವ್ಯವಹಾರದಲ್ಲಿ ನಾನು ಎಂಬ ತಿಳಿವು , ಅಹಂಕಾರ (ಇದು ಜಂಬವಲ್ಲ-ನಾನು ಎಂಬ ತತ್ವ) ವೆಂಬ ಅಂತಃಕರಣ ತತ್ವ.. ಅದು ಸಚೇತನವಾಗಿ ತೋರುವುದು - ಸಾಕ್ಷೀ ಚೇತನದಿಂದ, ಈ ಸಾಕ್ಷಿಯೇ ಆತ್ಮ . ಬೆಂಕಿಯ ಕಾರಣದಿಂದ ಕಬ್ಬಿಣವು ಕೆಂಪಾಗಿ ಕಾಣುವಂತೆ ಅಂತಃಕರಣ ಚೇತನವಾಗಿ ತೋರುವುದು.

ಜೀವಾತ್ಮ[ಬದಲಾಯಿಸಿ]


ಜೀವಾತ್ಮನು ಅಜನೂ , ಅಮರನೂ , ಸರ್ವವ್ಯಾಪಿಯೂ, ಬ್ರಹ್ಮ ಸ್ವರೂಪಿಯೂ ಆಗಿದ್ದಾನೆ. ಅವನಿಗೆ ಪಾರಮಾರ್ಥಿಕವಾಗಿ ಬಂಧ-ಮೋಕ್ಷಗಳಿಲ್ಲ.. ಅವನಿಗೆ ಸ್ವರ್ಗ-ನರಕಗಳಿಲ್ಲ . ಅವನು ಅವನಲ್ಲಿ (ತನ್ನಲ್ಲಿ) ಇಲ್ಲದ ಗುಣಧರ್ಮಗಳನ್ನು ತನ್ನಲ್ಲಿ ಆರೋಪಿಸಿಕೊಂಡು (ಅವಿದ್ಯೆ - ಅಜ್ಞಾನ), ವ್ಯವಹರಿಸಲು ಅಧ್ಯಾಸವೇ (ಅಜ್ಞಾನ-ಮಾಯೆ) ಕಾರಣ.
ಆಕಾಶವು ಮಡಕೆ ಕುಡಿಕೆಗಳಲ್ಲಿ ಬೇರೆ ಬೇರೆ ಕಾಣುವಂತೆ, ಒಂದೇ ಚೈತನ್ಯವು (ಬ್ರಹ್ಮವು) ಉಪಾದಿಗಳ ಕಾರಣದಿಂದ ಬೇರೆ ಬೇರೆಯಾಗಿತೋರುವುದು. ಹಾಗಾಗಿ ಬೇಧವು ಪಾರಮಾರ್ಥಿಕ ಸತ್ಯವಲ್ಲ. ತತ್ವಮಸಿ - ತತ್- ತ್ವಂ- ಅಸಿ ಎಂಬ ಶ್ರತಿ ವಾಕ್ಯಗಳು (ಅದು= ಬ್ರಹ್ಮವು, ತ್ವಂ = ನೀನು, ಅಸಿ-ಆಗಿದ್ದೀಯೆ) ಅಬೇಧವನ್ನು ಸಾರುತ್ತವೆ .

ಬಂಧ - ಮೋಕ್ಷ[ಬದಲಾಯಿಸಿ]

ಪಾಮಾರ್ಥಿಕವಾಗಿ (ತಾತ್ವಿಕವಾಗಿ-ಮೂಲತಃ) ಜೀವ ಬ್ರಹ್ಮರಿಗೆ ಬೇಧವಿಲ್ಲ .
ವ್ಯಾವಹಾರಿಕವಾಗಿ ಬೇಧವಿದೆ . ಸುಖ - ದುಃಖ ; ಹುಟ್ಟು - ಸಾವು ; ಕರ್ಮ - ಪುನರ್ಜನ್ಮ ; ಸ್ವರ್ಗ- ನರಕಗಳಿವೆ ; ಇವಕ್ಕೆಲ್ಲಾ ಅವಿದ್ಯೆಯೇ ಕಾರಣ ನಿತ್ಯ-ಶುದ್ಧ -ಬುದ್ಧ -ಮುಕ್ತ ಸ್ವಭಾವದ ಚೈತನ್ಯವು , ಅವಿದ್ಯೆಯ ಪರಿಣಾಮವಾಗಿ ಸಂಸಾರದಲ್ಲಿ ಸಿಲುಕಿಕೊಳ್ಳುವುದೇ ಬಂಧವೆನಿಸಿ ಇದು ಅನಾದಿಯಾದುದು. ಯಾವಾಗ ಪ್ರಾರಂಭವಾಯಿತು , ಯಾಕೆ ಪ್ರಾರಂಭವಾಯಿತು ಎನ್ನುವುದು ಬಗೆಹರಿಯದ ಸಮಸ್ಯೆ . ಇದು ಭಗವಂತನ ಲೀಲೆ ಎಂಬುದಾಗಿ ತಿಳಿಯಬಹುದು.
ಪಾರಮಾರ್ಥಿಕವಾಗಿ ಜೀವ ಬ್ರಹ್ಮರಿಗೆ ಬೇಧವಿಲ್ಲ . ವ್ಯಾವಹಾರಿಕವಾಗಿ ಉಂಟು ; ಮೋಕ್ಷವೂ ಉಂಟು. ಜೀವನಿಗೆ ತಾನು ಬ್ರಹ್ಮವೆಂದು ಅರಿವಾಗುವುದೇ ಮೋಕ್ಷ . "ಬ್ರಹ್ಮಾವಗತಿ"ಯೇ ಮೋಕ್ಷ . "ಅವಗತಿ", ಎಂದರೆ ಸಾಕ್ಷಾನುಭವ. :ಉದಾ : ಬೇಡರ ನಡುವೆ ಬೆಳೆದ ರಾಜಕುಮಾರ. ತಾನು ಬೇಡನಲ್ಲ -ರಾಜಕುಮಾರ ಎಂದು ತಿಳಿದಂತೆ.

ಬೇರೆಯವರಿಂದ ಕೇಳಿ ತಿಳಿದರೆ ಅದು ಪರೋಕ್ಷ ಜ್ಞಾನ ; ತಾನೇ ಅನುಭವಿಸಿದರೆ ಅದು ಅಪರೋಕ್ಷಾನುಭೂತಿ ; ಸಾಕ್ಷಾತ್ಕಾರ ; ಅದೇ ಮೋಕ್ಷ .

ಮೋಕ್ಷವನ್ನು ಗಳಿಸಿಕೊಳ್ಳಲು ಎಲ್ಲಿಗೂ ಹೋಗಬೇಕಾಗಿಲ್ಲ . ಅದು ಎಲ್ಲೆಲ್ಲಿಯೂ ಇದೆ. ಆಕಾಶದಂತೆ. ಬಂಧಕ್ಕೆ ಕಾರಣವಾದ ಅಜ್ಞಾನ ನಿವಾರಣೆಯಾದರೆ ಸಾಕು. ಹಾಗಾಗಿ ಜ್ಞಾನದಿಂದಲೇ ಮೋಕ್ಷ . ಇಲ್ಲಿ ಜ್ಞಾನವು ಮೋಕ್ಷವನ್ನು ಹುಟ್ಟಿಸಲಾರದು ಅಜ್ಞಾನವನ್ನು ಕಳೆಯುತ್ತದೆ ಅಷ್ಟೆ . ಬೆಳಕಿಗೆ ಅಡ್ಡಲಾದ ಪರದೆಯನ್ನು ಸರಿಸಿದಂತೆ. ಬ್ರಹ್ಮವನ್ನು ಅರಿತರೆ ಸಾಕು ಅವನೇ ಬ್ರಹ್ಮವಾಗುತ್ತಾನೆ. (ಬ್ರಹ್ಮವಿದ್ ಬ್ರಹ್ಮೈವ ಭವತಿ)

ಕರ್ಮ-ಉಪಾಸನೆ-ಭಕ್ತಿ[ಬದಲಾಯಿಸಿ]


ಅದ್ವೈತವು ಜ್ಞಾನದಿಂದಲೇ ಮೋಕ್ಷವೆಂದು ಒತ್ತಿ ಹೇಳುತ್ತದೆ. ಕರ್ಮದಿಂದ ಮೋಕ್ಷವಿಲ್ಲವೆಂದು ಸಾರುತ್ತದೆ. ಅದು ಕರ್ಮ ವಿರೋಧಿಯೇ ?

ಕರ್ಮಕ್ಕೆ ಫಲವಿರುವುದರಿಂದ ಅದು ಕರ್ಮಕ್ಕೆ ವಿರೋಧಿಯಾಗಿದೆ. ಕರ್ಮವು ನಿತ್ಯ - ನೈಮಿತ್ತಿಕ - ಕಾಮ್ಯ - ನಿಷಿದ್ಧ ಎಂದು ನಾಲ್ಕು ಬಗೆ. ಈ ಕರ್ಮಗಳಿಗೆಲ್ಲಾ ಫಲವಿದೆ. ಆದ್ದರಿಂದ ಪುನರ್ಜನ್ಮವಿದೆ. ಕರ್ಮಫಲಗಳು ಅನಿತ್ಯವಾಗಿವೆ. (ಸ್ವಲ್ಪಕಾಲವಿದ್ದು ಹೋಗುವವು ). ಆದ್ದರಿಂದ ಮೋಕ್ಷವು ಕರ್ಮಫಲವಲ್ಲ. ಮೋಕ್ಷವು ಕರ್ಮಫಲವಾದರೆ ಅದು ಅನಿತ್ಯವಾಗುವುದು .

ಕರ್ಮಯೋಗ[ಬದಲಾಯಿಸಿ]

ಕರ್ಮವು ಮೋಕ್ಷಕ್ಕೆ ಸಹಕಾರಿಯಾಗಿದೆ. ಕರ್ಮವು ಬಂಧನಕಾರಿ . ಕರ್ಮಗಳನ್ನು (ಕೆಲಸಗಳನ್ನುಸೇರಿ) ಮಾಡದೇ ಇರುವುದು ಸಾಧ್ಯವಿಲ್ಲ. ಆದ್ದರಿಂದ ಕರ್ಮ ಬಂಧನದಿಂದ ಬಿಡಿಸಿಕೊಳ್ಳಲು , ಅವನ್ನು ಈಶ್ವರಾರ್ಪಣ ಮಾಡುವುದೊಂದೇ ದಾರಿ/ಮಾರ್ಗ . .ಅದೇ ಕರ್ಮಯೋಗ. ಈ ರೀತಿ ಮಾಡುವುದರಿಂದ ಚಿತ್ತ ಶುದ್ಧಿಯಾಗಿ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಬ್ರಹ್ಮ ಜ್ಞಾನವಾಗುವ ವರೆಗೂ ಕರ್ಮವು ಅವಶ್ಯವಾಗಿದೆ.

ಉಪಾಸನೆ[ಬದಲಾಯಿಸಿ]

ಉಪಾಸನೆ ಎಂದರೆ ಉಪಾಸ್ಯ (ಧ್ಯಾನ ಮಾಡುವ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ' ವಿದ್ಯಾ "ಎಂದು ಹೆಸರು . ಉಪಾಸನೆಯು ಜ್ಙಾನದ ಅಪೇಕ್ಷೆಯ ಕರ್ಮ. ಉಪಾಸನೆ ಎಂದರೆ ಉಪಾಸ್ಯ (ಧ್ಯಾನ ಮಾಡುವ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ವಿದ್ಯಾ ಎಂದು ಹೆಸರು . ಜ್ಙಾನದ ಅಪೇಕ್ಷೆಯ ಕರ್ಮ. /// ಇದರಿಂದಲೂ ಕೊನೆಗೆ ಜ್ಞಾನವಾಗಿ ಮೋಕ್ಷ ವಾಗುವುದು ಇಲ್ಲದಿದ್ದರೆ (ಜ್ಞಾನವಾಗದಿದ್ದರೆ) ಹಿರಣ್ಯಗರ್ಭಲೋಕ.

ಭಕ್ತಿ[ಬದಲಾಯಿಸಿ]

ಭಕ್ತಿಯು ದ್ವೈತವನ್ನು ಆಧರಿಸಿದ್ದು ; ಭಗವಂತನೇ ಬೇರೆ , ತಾನೇ ಬೇರೆ ಎಂಬ ಭಾವದಿಂದ ದಾಸ್ಯ ; ಸಖ್ಯ ; ವಾತ್ಸಲ್ಯ ; ಮೊದಲಾದ ಭಾವದಿಂದ ಭಗವಂತನ ಭಜನೆ , ಸೇವೆ, ಇರಬೇಕು . ಅದ್ವೈತದಲ್ಲಿ ಭಕ್ತಿಗೆ ಸ್ಥಾನವಿಲ್ಲವೆಂಬ ತಪ್ಪು ತಿಳಿವಳಿಕೆಇದೆ. ಭಕ್ತಿಯಲ್ಲಿ - ನಾನು ಅವನವನು ; ಅವನು ನನ್ನವನು ; ನಾನೇ ಅವನು ; ಎಂಬ ಮೂರು ವಿಧದ ಭಕ್ತಿಗೂ ಅವಕಾಶವಿದೆ. (ಗೀ..ಭಾ.೧೦-೧೦) .ಹೀಗೆ ಭಕ್ತಿಯು ಅಂತಿಮವಾಗಿ ಜ್ಞಾನದಲ್ಲಿ ಪರಿಣಮಿಸುವುದರಿಂದ ಭಕ್ತಿಯನ್ನ ಒಪ್ಪಲಾಗಿದೆ. ಆದರೂ ಅಲ್ಲಿ ಅತಿರೇಕ -ಉದ್ರೇಕಗಳಿಗೆ ಅವಕಾಶ ವಿಲ್ಲ. ಆದರೆ ಭಕ್ತಿಯ ಮಹತ್ವವನ್ನು ಅವಶ್ಯಕತೆಯನ್ನು ಶಂಕರರು ಎತ್ತಿ ಹೇಳಿದ್ದಾರೆ .

ಜೀವನ್ಮುಕ್ತಿ[ಬದಲಾಯಿಸಿ]

ಅದ್ವೈತವು ಜೀವನ್ಮುಕ್ತಿಯನ್ನು ಪ್ರತಿಪಾದಿಸುತ್ತದೆ. ಮುಕ್ತಿಯು ಜ್ಞಾನದಿಂದ ಪ್ರಾಪ್ತವಾಗುವುದರಿಂದ ಜೀವಂತವಿರುವಾಗಲೇ ಮುಕ್ತಿಯನ್ನು ಪಡೆಯುವುದು ಸಾಧ್ಯ. ಮರಣಾನಂತರವೇ ಮುಕ್ತಿಎಂದಿಲ್ಲ. ಶರೀರವೇ ತಾನೆಂಬ ಭಾವನೆಯನ್ನು ಕಳೆದುಕೊಂಡರೆ ಸಾಕು. ಜ್ಞಾನವಾದರೆ ಅಥವಾ ಮುಕ್ತಿಯಾದರೆ ಶರೀರವು ಬಿದ್ದುಹೋಗುವುದಿಲ್ಲ. ಕರ್ಮ (ಹಿಂದಿನ) ಸವೆಯುವವರೆಗೂ ಇರುತ್ತದೆ . ಜೀವನ್ಮುಕ್ತನು ಸಮಾಧಿಯಲ್ಲಿ ಬ್ರಹ್ಮದೊಂದಿಗೆ ಒಂದಾಗುತ್ತಾನೆ . ಉಳಿದ ಸಮಯದಲ್ಲಿ ಇತರರಂತೆಯೇ ಇರುತ್ತಾನೆ. ಆದರೆ ಅವನಿಗೆ ಧರ್ಮ-ಕರ್ಮಗಳ ಬಾಧೆ ಇಲ್ಲ. ಒಳ್ಳಯತನ ಸ್ವಾಭಾವಿಕ .
ಅವನಿಗೆ ಸರ್ವವೂ ಬ್ರಹ್ಮಮಯ ;ಅಲ್ಲಿ ಸ್ವಾರ್ಥ, ದ್ವೇಷ , ಆಸೆಗಳಿಲ್ಲ. ; ಸಮಸ್ತ ಜಗತ್ತು ಒಂದೇ ಕುಟುಂಬ -ಎನ್ನುವುದಕ್ಕಿಂತ ಮೇಲಿನ ಹಂತ ಅವನದು.
ಅವನು ದೇಹಪಾತವಾದ ಮೇಲೆ , ಬ್ರಹ್ಮದಲ್ಲಿ ಲೀನವಾಗುತ್ತಾನೆ .ಇದು ವಿದೇಹ ಮುಕ್ತಿ ; ಆನಂದ ಸ್ವರೂಪನಾಗುತ್ತಾನೆ. ಪುನರ್ಜನ್ಮವಿಲ್ಲ . ಅದಕ್ಕಿಂತ ಹೆಚ್ಚಿನ ಸ್ಥಿತಿ ಇಲ್ಲ. ಅದೇ ಜೀವನದ ಪರಮ ಗುರಿ.
ಹೀಗೆ ಅದ್ವೈತವು ಸಕಲ ಜೀವಿಗಳೂ ಸಮಾನರು ಎಂಬ ತತ್ವನ್ನು ಬೋಧಿಸಿದೆ.

ಅದ್ವೈತಕ್ಕೆ ಅಧಿಕಾರ - ಪದ್ಧತಿ-ಸಾಧನೆ[ಬದಲಾಯಿಸಿ]

ಅದ್ವೈತವು ಅನುಭವದಲ್ಲಿ ಪರ್ಯವಸಾನಗೊಳ್ಳುವುದು.ಆದ್ದರಿಂದ ಅದರ ಸಾಧನೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಧಿಕಾರಿ ಎನಿಸಬೇಕಾದರೆ , ನಾಲ್ಕು ಸಾಧನೆಗಳು ಅವಶ್ಯ.

ನಾಲ್ಕು ಸಾಧನೆಗಳು[ಬದಲಾಯಿಸಿ]

೧. ನಿತ್ಯಾನಿತ್ಯ ವಿವೇಕ : ಬ್ರಹ್ಮವು ನಿತ್ಯ ಉಳಿದವು ಅನಿತ್ಯ ಎಂಬ ವಿವೇಕ - ಇದು ಸರಿಯಾದ ವಿಚಾರದಿಂದ ಗುರುವಿನ ಉಪದೇಶ ದಿಂದ ಮನದಲ್ಲಿ ಗಟ್ಟಿಯಾಗಿ ನೆಲೆಗೊಳ್ಳಬೇಕು.
೨. ಇಹಾಮುತ್ರ ಫಲಭೋಗ ವಿರಾಗ : ಈ ಲೋಕದ ಹಾಗೂ ಪರ ಲೋಕದ ವಿಷಯ (ಆಸೆ) - ಭೋಗಗಳ ಬಗ್ಗೆ ವಿರಕ್ತಿ .
೩. ಶಮ, ದಮಾದಿಶಟ್ಕ ಸಂಪತ್ತಿ (ಸಾಧನ ಸಂಪತ್ತಿ): ಶಮ -ಮನಸ್ಸಿನ ಏಕಾಗ್ರತೆ ಶಾಂತಿ ; ದಮ : ಇಂದ್ರಿಯ ನಿಗ್ರಹ , ಉಪರತಿ : ಕರ್ಮಗಳತ್ಯಾಗ -ಎಂದರೆ ಕರ್ಮ ಫಲ ತ್ಯಾಗ ; ತಿತಿಕ್ಷೆ : ಸಹನೆ ; ಸಮಾಧಾನ : ಚಿತ್ತದ ಏಕಾಗ್ರತೆ ; ಶ್ರದ್ಧೆ : ಗುರು ಹಾಗೂ ವೇದಾಂತದಲ್ಲಿ ನಿಷ್ಟೆ
೪. ಮುಮುಕ್ಷತ್ವ : ಮೋಕ್ಷವು ಬೇಕೆಂಬ ಪ್ರಬಲ ಅಪೇಕ್ಷೆ ( ಬೇರೆ ಯಾವುದರಿಂದಲೂ ಅವನು ತೃಪ್ತನಾಗಬಾರದು)
ಈ ಸಾಧನ ಸಂಪತ್ತಿರುವವನು ಗುರುವನ್ನು ಆಶ್ರಯಿಸಿದರೆ , ಗುರುವು ಅಧ್ಯಾರೋಪ , -ಅಪವಾದಗಳಿಂದ ಬ್ರಹ್ಮವನ್ನು ತಿಳಿಸುತ್ತಾನೆ. ಅಧ್ಯಾರೋಪವೆಂದರೆ, -ವಸ್ತುವಿನಲ್ಲಿ ಇಲ್ಲದ ಧರ್ಮದ (ಗುಣದ) ಆರೋಪ -ತಪ್ಪು ತಿಳುವಳಿಕೆ ಏನೆಂದು ; ಅಪವಾದ ವೆಂದರೆ : ಆರೋಪವನ್ನು ಅಲ್ಲಗಳೆಯುವುದು.
ಉದಾ : ದೇಹವನ್ನೇ ತಾನೆಂದು (ಆತ್ಮ ವೆಂದು) ತಿಳಿಯುವುದು "ಆರೋಪ" ; ಅನಂತರ ಅದು ಅಲ್ಲವೆಂದು ಸಾಧಿಸಿ ತೋರಿಸುವುದು, "ಅಪವಾದ".
ಇದೊಂದು ವಿಶಿಷ್ಟ ಪದ್ದತಿ. ಮೊದಲು ಇದೇ ಬ್ರಹ್ಮವೆಂದು ವಸ್ತುಗಳಮೇಲೆ ಆರೋಪಿಸುವುದು ; ಅನಂತರ ಅದು ಅಲ್ಲವೆಂದು ಸಾಧಿಸಿ ತೋರಿಸುವುದು. (ಈ ಪದ್ಧತಿಗೆ ಅರುಂಧತಿ ದರ್ಶನ ನ್ಯಾಯ ಎನ್ನುತ್ತಾರೆ ) ಇದಕ್ಕೆ ನೇತಿ - ನೇತಿ ,ಪದ್ದತಿ ಎಂದೂ ಹೇಳುತ್ತಾರೆ. ‍ಇದಲ್ಲ -ಇದಲ್ಲ ಎಂದು ಬ್ರಹ್ಮವಲ್ಲದ ವಸ್ತುಗಳನ್ನು ನಿರಾಕರಿಸುತ್ತಾ ಹೋಗಿ ಕೊನೆಗೆ ಬ್ರಹ್ಮದಲ್ಲಿ ನೆಲೆ ನಿಲ್ಲುವುದು. ಏಕೆಂದರೆ ಬ್ರಹ್ಮವನ್ನು , 'ಇದೇ ' ಎಂದುತೋರಿಸಲು ಬರುವುದಿಲ್ಲ. ನಿರಾಕಾರ ನಿರ್ಗುಣ -ತಾನೇ ಆತ್ಮವಾಗಿರುವುದಿಂದ - ನೋಡುವವನೇ ಆಗಿರುವುದರಿಂದ, ನೋಡಲು ಬರುವುದಿಲ್ಲ; ; ಅನುಭವದಿಂದ ಮಾತ್ರಾ ಅರಿಯಬುಹುದು.

ಸಾಧನಾ ವಿಧಾನ[ಬದಲಾಯಿಸಿ]


ಶ್ರವಣ , ಮನನ , ನಿಧಿದ್ಯಾಸನ ಎಂದು ಮೂರುಬಗೆ. ಸಾಧನೆಯಲ್ಲಿ ಮೂರು ಹಂತಗಳಿವೆ.
೧. .-ಶ್ರವಣ - ಗುರಮುಖದಿಂದ ಆತ್ಮ ಸ್ವರೂಪವನ್ನು ಕೇಳುವುದು. ಆ ಸ್ವರೂಪಕ್ಕೆ ವಿರೋಧವಾದುದನ್ನು ಬಿವಾರಿಸಿಕೊಳ್ಳುವುದು
೨.-ಮನನ- (ವಿಚಾರ ಮತ್ತು ತಾರ್ಕಿಕ ಚಿಂತನ ) ನಂತರ ಆತ್ಮ ಸ್ವರೂಪವನ್ನು ಕುರಿತು ನಿರಂತರವಾಗಿ ಧ್ಯಾನಿಸುವುದು.

೩.- ನಿಧಿಧ್ಯಾಸನ - ಅದರಲ್ಲಿ ಮನಸ್ಸು -ಚಿತ್ತಗಳನ್ನು ಲೀನಗೊಳಿಸುವುದು.

ಇವನ್ನು ಹೀಗೆ ಹೇಳಿದೆ ;
ಶ್ರೋತವ್ಯಃ ಶ್ರುತಿವಾಕ್ಯೇಭ್ಯೋ ಮಂತವ್ಯಶ್ಚೋಪಪತ್ತಿಭಿಃ |
ಮತ್ವಾಚ ಸತತಂ ಧ್ಯೇಯೋ ಹ್ಯೇತೇ ದರ್ಶನ ಹೇತವಃ ||
ಅದ್ವೈತವು ವಿಶೇಷವಾಗಿ ಅನುಭವ ಸಿದ್ಧಾಂತವನ್ನು ಅನುಸರಿಸುವುದು . ಅದರಿಂದ ಶ್ರೀ ಶಂಕರರು ಪ್ರಮಾಣ ಮೀಮಾಂಸೆಯನ್ನು ಮಾಡಲಿಲ್ಲವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಅದ್ವೈತ ಮತ್ತು ಬೌದ್ಧ ದರ್ಶನ[ಬದಲಾಯಿಸಿ]

ಭಾರತೀಯ ಸಂಪ್ರದಾಯದಂತೆ, ಶಂಕರರು ವೈದಿಕ ಧರ್ಮವನ್ನು ಮೇಲೆತ್ತುವ ಸಲುವಾಗಿ ಬೌದ್ಧರನ್ನು ಖಂಡಿಸಿದರು. (-ಭಾಷ್ಯಗಳಲ್ಲಿ -ವಾದಗಳಲ್ಲಿ) ; ವಾದ-ವಿವಾದಗಳಲ್ಲಿ ಬೌದ್ಧರನ್ನು ಸೋಲಿಸಿ ಅವರ ಪ್ರಭಾವವನ್ನು ಅಳಿಸಿದರು. ಆದರೆ ಶಂಕರರ ಕಾಲಕ್ಕಾಗಲೇ ಬೌದ್ಧ ಧರ್ಮದ/ದರ್ಶನದ ಪ್ರಭಾವ ಕುಮಾರಿಲರ ಪ್ರಭಾವದಿಂದ ಸಾಕಷ್ಟು ಇಳಿದುಹೋಗಿತ್ತೆಂಬ ಅಭಿಪ್ರಾಯವಿದೆ. ಆದರೆ ಶಂಕರರು ತಮ್ಮ ಭಾಷ್ಯಗಳಲ್ಲಿ ಹೆಚ್ಚಾಗಿ ಸಾಂಖ್ಯರನ್ನೂ , ಮೀಮಾಂಸಕರನ್ನೂ ಖಂಡಿಸಿದ್ದಾರೆ.

ಬೌದ್ಧ ದರ್ಶನದ ಪ್ರಭಾವ[ಬದಲಾಯಿಸಿ]

ಬೌದ್ಧ ದರ್ಶನಕ್ಕೂ , ಶಾಂಕರ ಅದ್ವೈತ ದರ್ಶನಕ್ಕೂ ಬಹಳ ಸಾಮ್ಯಗಳಿವೆ. ಶಂಕರರು ಬೌದ್ಧರ ತಾರ್ಕಿಕ ಯುಕ್ತಿಗಳನ್ನು ಬಳಸಿಕೊಂಡಿದ್ದಾರೆಂದು ಹೇಳುತ್ತಾರೆ. ತಮ್ಮ ಸಿದ್ಧಾಂತದ ಸಾಧನೆಗೆ ಅವುಗಳನ್ನು ಬಳಸಿದರೆ ತಪ್ಪಲ್ಲವೆನ್ನುವ ಅಭಿಪ್ರಾಯ ಅವರದು. ಆದರೆ ಶಂಕರರು ಬೌದ್ಧರ ಯುಕ್ತಿ -ತರ್ಕಗಳನ್ನು ಇನ್ನೂ ಉತ್ತಮ ಪಡಿಸಿದರು.

ಉಪಸಂಹಾರ[ಬದಲಾಯಿಸಿ]

ಶಂಕರರ ಅದ್ವೈತ ಸಿದ್ಧಾಂತವು ಉಪನಿಷತ್ತು, ಬ್ರಹ್ಮ ಸೂತ್ರಗಳ ಆಧಾರ- ಮಾರ್ಗವನ್ನು ಧೃಢವಾಗಿ ಅನುಸರಿಸಿದೆ. ಶಂಕರರ ತಾತ್ವಿಕ ಸಿದ್ಧಿ ನಿಂತಿರುವುದು ಅವರ ತೀವ್ರತರವಾದ ವಿಚಾರದ ಉಜ್ವಲ ಪ್ರಕಾಶದ ಮೇಲೆ. ಜೀವನದ ದಿವ್ಯತೆಯನ್ನು ಸಾಧಿಸುವ ಪರಾಕಾಷ್ಠೆಯ ಮೇಲೆ - ಸತ್ಯಾನ್ವೇಷಣೆಗಾಗಿ - ವೈಚಾರಿಕ ಮಾರ್ಗದ ಮೇಲೆ . ಹಾಗಾಗಿ ಅದು ಜಗತ್ತಿನಲ್ಲೇ ಅತ್ಯಂತ ಗೌರವಿಸಲ್ಪಟ್ಟ ದರ್ಶನವಾಗಿದೆ.

ಓಂತತ್ಸತ್
ಇದರ ಬಗೆಗೆ ಇನ್ನೂ ಇತರ ಅಭಿಪ್ರಾಯಗಳಿಗೆ ಮುಂದಿನ ಪುಟಗಳನ್ನು ನೋಡಿ

ಮಾಯಾವಾದ - ಅವಿದ್ಯೆ[ಬದಲಾಯಿಸಿ]

ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಪ್ರಮುಖ ಅಂಗ 'ಮಾಯಾವಾದ'. ಸತ್ ಚಿತ್ ಸ್ವರೂಪಿಯಾದ ಆತ್ಮನೇ ಬ್ರಹ್ಮ. ಆದರೆ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯವನ್ನು ಗುರುತಿಸಲು ಸಾಧ್ಯವಾಗದಂತೆ ಜಗತ್ತನ್ನು ಮಾಯೆಯು ಆವರಿಸಿದೆ. ಮಾಯೆಯ ಆವೃತ್ತಿಯು ಎಷ್ಟು ಘನವಾದುದೆಂದರೆ ಅದರ ಅಸ್ತಿತ್ವವೇ ಅನುಭವಕ್ಕೆ ಬರದಷ್ಟು. ಮಾಯೆಯ ಸಂಸರ್ಗದಿಂದಾಗಿ ಲೋಕದಲ್ಲಿ ಭಿನ್ನತೆಗಳೂ, ಭೇದಗಳೂ ಕಾಣಿಸತೊಡಗುತ್ತವೆ. ಮಾಯೆಯು ಲೌಕಿಕ ಜಗತ್ತಿನಲ್ಲಿ ತನ್ನನ್ನು ತಾನೇ ಅನೇಕ ರೂಪಾಂತರಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಜೀವಿಗಳಲ್ಲಿರುವ ಭೇದವೂ, ಹೆಣ್ಣು - ಗಂಡುಗಳೆಂಬ ಭೇದವೂ, ಪ್ರಾಣಿ - ಪಕ್ಷಿಗಳೆಂಬ ಪ್ರಭೇದಗಳೂ, ಗಿಡ - ಮರಗಳೂ, ನಿರ್ಜೀವ ವಸ್ತುಗಳೂ - ಹೀಗೆ ಜಗತ್ತಿನಲ್ಲಿ ಕಾಣ ಸಿಗುವ ಎಲ್ಲ ರೀತಿಯ ಭಿನ್ನತೆಗಳೂ ಮಾಯೆಯಿಂದ ಉಂಟಾದವು. ಈ ಮಾಯೆಯಿಂದಾಗಿ ಸಾಧಾರಣ ಜೀವಿಗೆ ತನ್ನ ಕಣ್ಣು ಮೊದಲಾದ ಇಂದ್ರಿಯಗಳ ಮೂಲಕ ಲೋಕದಲ್ಲಿನ ಈ ಭಿನ್ನತೆಗಳೇ ವಸ್ತುವಿನ ನಿಜ ಸ್ವರೂಪವೆಂದು ಭಾಸವಾಗುತ್ತದೆ. ಆದರೆ ವಸ್ತುತ: ಇವೆಲ್ಲವೂ ಮೂಲ ಬ್ರಹ್ಮದ ಸ್ವರೂಪವೇ ಆಗಿರುವ ವಿಚಾರವನ್ನು ಆತ್ಮದ ಅರಿವಿಗೆ ಬರದಂತೆ ಮಾಯೆಯು ತಡೆಯೊಡ್ಡುತ್ತದೆ. ಯಾವುದು ವಾಸ್ತವದಲ್ಲಿ ಇಲ್ಲವೇ ಇಲ್ಲವೋ ಅದು ಇರುವಂತೆ ಭಾಸವಾಗುವುದು ಮಾಯೆಯ ಪ್ರಭಾವದಿಂದಾಗಿ. ಸತ್ಯವನ್ನು ಮಾಯೆಯ ಆವರಣವು ಆವರಿಸಿಕೊಂಡಿದೆ. ಮಾಯೆಯ ಘನಸ್ವರೂಪವು ಇಡೀ ಸತ್ಯವನ್ನು ಕಾಣದಂತೆ ತೆರೆ ಹಿಡಿದಿರುತ್ತದೆ. ಪ್ರತಿ ಮಾನವನೂ ತನ್ನ ಸುತ್ತಲಿನ ಜಗತ್ತಿನಲ್ಲಿ ಅನೇಕತೆಯನ್ನು ಕಾಣುವಂತೆ ಮಾಡುತ್ತದೆ ಮಾಯೆ. ಸತ್ಯವನ್ನರಿಯಲಾಗದ ಮಾನವನು ಈ ಜಗತ್ತಿನಲ್ಲಿ ನಾನು, ನನ್ನದು ಎಂದು ಸ್ವಂತಿಕೆಯನ್ನು, ಅಹಂಕಾರವನ್ನೂ ಬೆಳೆಸಿಕೊಳ್ಳುತಾನೆ. ಇದೇ ಅವಿದ್ಯೆ. 'ಅದ್ವೈತ ಅಂದರೆ ಎರಡನೆಯದಿಲ್ಲದ್ದು. ಇದು ಶಂಕರರು ಸ್ಥಾಪಿಸಿದ್ದಲ್ಲ. ಅದ್ವೈತ ಪದವು ಮಾಂಡೂಕ್ಯ ಉಪನಿಷತ್ತಿನ ಮಂತ್ರದಲ್ಲಿ ಹೀಗಿದೆ - ’ನಾಂತಃ ಪ್ರಜ್ಞಮ್ ನ ಬಹಿಷ್ಪ್ರಜ್ಞಮ್ ನೋಭಯತಃ ಪ್ರಜ್ಞಮ್---- ಶಾನ್ತಮ್ ಶಿವಮ್ ಅದ್ವೈತಮ್ ಚತುರ್ಥಮ್ ಮನ್ಯನ್ತೇ ಸ ಆತ್ಮಾ ಸವಿಜ್ಞೇಯಃ ||’ ಎಂದು ತಿಳಿಸುತ್ತಿದೆ. ಶಂಕರರು ಇದನ್ನು ತೋರಿಸಿಕೊಟ್ಟಿದ್ದಾರೆ. ಅವರು ಅದ್ವೈತಮತ ಸ್ಥಾಪನಾಚಾರ್ಯರಲ್ಲ. ಮತ ಎಂದರೆ ಒಬ್ಬರ ಅಭಿಪ್ರಾಯ. ಶಂಕರರು ತೋರಿಸಿರುವ ತತ್ತ್ವ ಸಾರ್ವತ್ರಿಕ ಪರಿಪೂರ್ಣಾನುಭವದಮೇಲೆ ನಿಂತಿದೆ. ಭಗವಾನ್ ಶಂಕರರ ಜೀವನ ಚರಿತ್ರೆ ಭಾರತದಲ್ಲಿ ೧೯ ಬೇರೆ ಬೇರೆ ಶಂಕರ ವಿಜಯಗಳಲ್ಲಿ ಪ್ರಸ್ಥಾಪಿತವಾಗಿರುವುದು ಸರಿಯಷ್ಟೆ. ನಮಗೆ ಮಹಾತ್ಮರ ಜೀವನ ಚರಿತ್ರೆಗಿಂತ ಅವರು ಏನು ಹೇಳಿದ್ದಾರೆ, ಅವರ ಕಾರ್ಯಗಳೇನು, ಅದು ನಮಗೆಷ್ಟು ಉಪಯೋಗವಾಗಿದೆ, ಇಂದಿಗೂ ಲಭ್ಯವೆ ? ಎನ್ನುವುದು ಮುಖ್ಯ. ಮುಖ್ಯವಾಗಿ ಶಂಕರರು ಪ್ರಸ್ಥಾನತ್ರಯಗಳಿಗೆ ( ಬಾದರಾಯಣಾಚಾರ್ಯರ ಬ್ರಹ್ಮ ಸೂತ್ರಗಳು, ಶ್ರೀಮದ್ಭಗವದ್ಗೀತೆ, ದಶ ಉಪನಿಷತ್ತುಗಳು) ಪದ( ವ್ಯಾಕರಣ ) ವಾಕ್ಯ( ಮೀಮಾಂಸಾ) ಪ್ರಮಾಣ ( ನ್ಯಾಯ ದರ್ಶನ ) ಗಳಿಂದ ಭಾಷ್ಯವನ್ನು ಮೂಲ ಸಂಸ್ಕೃತದಲ್ಲಿ ಬರೆದಿದ್ದು, ಕರ್ಣಾಟಕ ಶಂಕರರೆಂದು ಪ್ರಸಿದ್ಧವಾಗಿರುವ ಹೊಳೆನರಸಿಪುರದ ಪರಮಪುಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ೧೨೦೦ ವರ್ಷಗಳ ನಂತರ ಮೊಟ್ಟ ಮೊದಲು ಯಥಾವತ್

ಅಚ್ಚು ಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಭಗವಾನ್ ಶಂಕರರಂತೆ ನಮ್ಮೆಲ್ಲರ ದುಃಖಗಳಿಗೂ ಅಜ್ಞಾನವೇ( ಜ್ಞಾನಾಭಾವ, ಸಂಶಯ ಜ್ಞಾನ, ವಿಪರೀತ ಜ್ಞಾನ) ಕಾರಣ. ಇದು ಪ್ರತ್ಯಯರೂಪ ( ಮಾನಸಿಕ). ಅದ್ವೈತತತ್ತ್ವವನ್ನು ಸಕಲ ಮಾನವರೂ ಅರ್ಥಮಾಡಿಕೊಳ್ಳಬಹುದು, ಇದಕ್ಕೆ ಜಾತಿ, ಮತ, ಲಿಂಗ, ದೇಶ ಇವುಗಳ ಪರಿಮಿತಿ ಇಲ್ಲ. ಬ್ರಹ್ಮ ಸತ್ಯಮ್ ಜಗನ್ಮಿಥ್ಯಾ -ಎಂಬುದು ವೇದದ ವಾಕ್ಯವಲ್ಲ ಹಾಗೂ ಶಂಕರರು ಹೇಳಿಲ್ಲ. ಇದು ವೇಂತ್ತ ಡಿಂಡಿಮ ಎಂಬ ಶ್ಲೋಕದ ವಾಕ್ಯ. ಜಗನ್ಮಿಥ್ಯಾ ಎಂದರೆ ’ಜಗತ್ತು ತೋರುವ ರೂಪದಿಂದಿಲ್ಲ ’ ಉದಾ- ಹೆಸರು ಮೇಜು, ಕುರ್ಚಿ, ಬಾಗಿಲು.. ಇರುವುದು ಮರವೇ. ಇತ್ಯಾದಿ. ಅದೇರೀತಿ ಇರುವುದು ಮನುಷ್ಯರು,ಪ್ರಾಣಿಗಳು..ಇರುವುದು ಚರ್ಮ, ಮಾಂಸ, ಮೂಳೆ,ರಕ್ತ..ಇತ್ಯಾದಿ. ಹೆಸರುಗಳು ಅನೇಕ ತತ್ತ್ವ ಒಂದೇ. ಆತ್ಮನು ಸತ್ತಮೇಲೆ ಬ್ರಹ್ಮ ಆಗುವುದಿಲ್ಲ ತಿಳಿದಿರಲಿ ತಿಳಿಯದಿರಲಿ ಇರುವುದೇ ಬ್ರಹ್ಮ ಸ್ವರೂಪ. ವೇದಾಂತದ ಸಂದೇಶಗಳು ಅರ್ಥವಾಗಲು , ಅನುಭವಕ್ಕೆ ಬರಲು ೪ ಯೋಗ್ಯತೆಗಳು ಬೇಕೇ ಬೇಕು- ೧. ನಿತ್ಯಾನಿತ್ಯ ವಸ್ತುವಿವೇಕ, ೨. ಇಲ್ಲಿನ ಮತ್ತು ಪರಲೋಕದ ಫಲ, ಭೋಗಗಳಲ್ಲಿ ವಿರಾಗ, ೩. ಶಮಾದಿ ಸಾಧನ ಸಂಪತ್ತು, ಮತ್ತು ೪. ಮುಮುಕ್ಷುತ್ವ( ನನ್ನ ನಿಜ ಸ್ವರೂಪವನ್ನು ಹೇಗಾದರೂ ತಿಳಿಯಲೇಬೇಕು ಎಂಬ ತವಕ).

ಮಿಥ್ಯಾವಾದ[ಬದಲಾಯಿಸಿ]

ಹಾಗಾಗಿ ಬ್ರಹ್ಮ ವಸ್ತುವೊಂದೇ ಸತ್ಯವಾದುದು. ಉಳಿದುದೆಲ್ಲವೂ ಮಿಥ್ಯೆ ಎಂಬುದು ಇದರ ಸಾರ. ವಾಸ್ತವದಲ್ಲಿ ಇಂದ್ರಿಯಗಳಿಗೆ ಗೋಚರವಾಗುವ ಈ ಜಗತ್ತೇ ಮಿಥ್ಯೆ. ಮಾಯೆಯ ಆಟದಿಂದಾಗಿ ವಿಧ ವಿಧವಾಗಿ ಗೋಚರಿಸುವ ಜಗತ್ತಿನ ವಸ್ತುಗಳಿಗೆ ವಾಸ್ತವದಲ್ಲಿ ಪ್ರತ್ಯೇಕ ಅಸ್ತಿತ್ವವೇ ಇಲ್ಲ. ಮಾಯೆಯಿಂದ ಉಂಟಾದ ಈ ಭ್ರಮೆಯ ಮೇಲೆ ಮಾನವನ ಸಂಸಾರ ನಿಂತಿದೆ. ಹುಟ್ಟು, ಸಾವು, ಸಂಬಂಧಗಳು, ಸಂಸರ್ಗಗಳು ,ವಿಯೋಗಗಳು, ಸುಖ, ದು:ಖ, ನೋವು, ನಲಿವು - ಇವೆಲ್ಲವೂ ಈ ಭ್ರಮೆಯಿಂದುಂಟಾಗುವ ಮನೋ ವಿಕಾರಗಳು. ಮಾಯೆಯಿಂದುಂಟಾದ ಈ ಮಿಥ್ಯ ಜಗತ್ತಿನಲ್ಲಿ ನಾವು ನಿತ್ಯ ಅನುಭವಿಸುವ ನೋವು, ನಲಿವುಗಳೆಲ್ಲವೂ ನಿಜವಾದುವೆಂಬ ಭ್ರಮೆಯಲ್ಲಿರುವ ಮಾನವನು ಈ ಮಿಥ್ಯ ಜಗತ್ತಿನಲ್ಲಿ ಸುಖ ಕಂಡುಕೊಳ್ಳುವುದೇ ಪರಮ ಪುರುಷಾರ್ಥ ಎಂದು ತಿಳಿದಿರುತ್ತಾನೆ.(ಆದಿ ಶಂಕರರು ಮತ್ತು ಅದ್ವೈತ)

ಅಧ್ಯಾಸ - ಸತ್ತಾ ತ್ರೈವಿಧ್ಯ[ಬದಲಾಯಿಸಿ]

ಮಾಯೆಯು ನಿಜವೂ ಹೌದು, ನಿಜವಲ್ಲದ್ದೂ ಹೌದು. ವ್ಯಾವಹಾರಿಕ ಜಗತ್ತಿನಲ್ಲಿ ಮಾಯೆಯು ಇರುವ ಕಾರಣ, ಮಾಯೆಯನ್ನು ಪೂರ್ಣತಃ ಸುಳ್ಳೆನ್ನಲಾಗುವುದಿಲ್ಲ. ಆದರೆ ಅದ್ವೈತದ ಜ್ಞಾನವುಂಟಾದ ಮೇಲೆ, ಈ ಮಾಯೆಯು ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ, ಮಾಯೆಯು ಪರಮ ಸತ್ಯವಾಗಲಾರದು. ಹಾಗಾಗಿ ಶಂಕರರು ಮಾಯೆಯ ಸ್ವರೂಪವನ್ನು ವಿವರಿಸುವಾಗ 'ಅಧ್ಯಾಸ'ವನ್ನು ವಿವರಿಸುತ್ತಾರೆ. ಅಧ್ಯಾಸವೆಂದರೆ ಒಂದು ಇನ್ನೊಂದರ ಮೇಲೆ ಆರೋಪಗೊಳ್ಳುವುದು (Superimposition). ಮಾಯೆಯಿಂದುಟಾದ ಈ ಅಧ್ಯಾಸದಿಂದಾಗಿ ಜಗತ್ತಿನಲ್ಲಿ ಪರಬ್ರಹ್ಮ ವಸ್ತುವು ನಾನಾ ರೂಪಗಳಲ್ಲಿಯೂ ನಾನಾ ವಿಧಗಳಲ್ಲಿಯೂ ಕಂಡುಬರುತ್ತದೆ. ಈ ಅಧ್ಯಾಸದಿಂದಾಗಿ ನಿಜ ಪರಬ್ರಹ್ಮ ವಸ್ತುವಿನ ಬಗ್ಗೆ ತಿಳಿದುಕೊಳ್ಳಲು ತೊಡಕಾಗಿರುತ್ತದೆ. ಹಾಗಾಗಿ ಜಗತ್ತಿನಲ್ಲಿ ಕಾಣುವ ವಸ್ತು ಬಾಹುಳ್ಯವೇ ಸತ್ಯವಾದುದೆಂದು ಗೋಚರವಾಗುತ್ತದೆ. ಅಧ್ಯಾಸದಿಂದಾಗಿ ಸತ್ಯವು ಪೂರ್ಣವಾಗಿ ಗೋಚರವಾಗುವುದಿಲ್ಲ. ಇದರಿಂದಾಗಿ ವಿವಿಧ ಸ್ತರಗಳಲ್ಲಿ ಸತ್ಯವು ವಿಧ ವಿಧವಾಗಿ ಗೋಚರವಾಗುತ್ತದೆ. ಹೀಗೆ ಮೂರು ವಿಧದ ಸತ್ತೆಯ ಸ್ತರ (ಸತ್ತಾ ತ್ರೈವಿಧ್ಯ) ಗಳನ್ನು ಗುರುತಿಸಲಾಗುತ್ತದೆ. ಇದನ್ನು ವಿವರಿಸಲು ಸಾಮಾನ್ಯವಾಗಿ 'ಹಗ್ಗ ಮತ್ತು ಹಾವಿನ' ( ರಜ್ಜು - ಸರ್ಪ ನ್ಯಾಯ ) ಉದಾಹರಣೆಯನ್ನು ಕೊಡಲಾಗುತ್ತದೆ. ಅನೇಕ ಬಾರಿ ಬೆಳಕಿನ ಅಭಾವದಿಂದಾಗಿ, ಅಥವಾ ಇನ್ನಿತರ ಕಾರಣಗಳಿಂದಾಗಿ, ನೆಲದ ಮೇಲೆ ಬಿದ್ದಿರುವ ಹಗ್ಗದ ಚೂರೊಂದು, ಹಾವಿನಂತೆ ಮನಸ್ಸಿಗೆ ಭಾಸವಾಗುತ್ತದೆ. ಹೀಗೆ ಈ ಸಂದರ್ಭದಲ್ಲಿ, ಹಾವು ಹಗ್ಗದ ಮೇಲೆ ಅಧ್ಯಾಸಗೊಂಡಿದ್ದು, ಹಗ್ಗವು ಹಾವಿನಂತೆ ಗೋಚರವಾಗಿದೆ. ಆದರೆ ವಸ್ತುತಃ ಅಲ್ಲಿ ಹಾವು ಇರುವುದಿಲ್ಲ. ಅದು ಹಗ್ಗ ಮಾತ್ರ, ಎಂಬ ಜ್ಞಾನವುಂಟಾದ ಒಡನೆಯೇ ಹಾವಿನ ಚಿತ್ರವು ಮನಸ್ಸಿನಿಂದ ಮಾಯವಾಗಿ, ಹಗ್ಗ ಮಾತ್ರ ಉಳಿಯುತ್ತದೆ. ಈ ರೀತಿ ಜಗತ್ತಿನಲ್ಲಿ ದೈನಂದಿನ ಜೀವನದಲ್ಲಿಯೇ ಸಂದರ್ಭಾನುಸಾರವಾಗಿ, ಅನೇಕ ವಸ್ತುಗಳು ಇತರ ಇನ್ನಾವುದೋ ವಸ್ತುಗಳೆಂದು ಭಾಸವಾಗುತ್ತವೆ. ಇದನ್ನು 'ಪ್ರಾತಿಭಾಸಿಕ ಸತ್ತೆ' ಎಂದು ಕರೆಯಲಾಗುತ್ತದೆ. ಆದರೆ ಹಗ್ಗದ ಅಸ್ತಿತ್ವವೂ ಕೂಡ ಸತ್ಯವಾದುದಲ್ಲ. ಮಾಯೆಯ ಅಧ್ಯಾಸದಿಂದಾಗಿ, ಪರಬ್ರಹ್ಮ ವಸ್ತುವು, ಹಗ್ಗವೂ ಸೇರಿದಂತೆ ಜಗತ್ತಿನ ವಿವಿಧ ವಸ್ತುಗಳಾಗಿ ಗೋಚರಿಸುತ್ತದೆ. ಇದನ್ನು 'ವ್ಯಾವಹಾರಿಕ ಸತ್ತೆ' ಎಂದು ಕರೆಯಲಾಗುತ್ತದೆ. ಪರಬ್ರಹ್ಮನ ಜ್ಞಾನವುಂಟಾದ ಒಡನೆಯೇ, ಈ ಹಗ್ಗ ಹಾಗೂ ಜಗತ್ತಿನ ವಿವಿಧತೆಗಳ ಚಿತ್ರವು ಮಾಯವಾಗಿ ಪರಬ್ರಹ್ಮನ ಸರ್ವ ವ್ಯಾಪಕತ್ವವು ಗೋಚರವಾಗುತ್ತದೆ. ಹಾಗಾಗಿ ಬ್ರಹ್ಮ ವಸ್ತುವೊಂದೇ ಪರಮ ಸತ್ಯವಾದುದು. ಮಾಯೆ ಹರಿದ ಒಡನೆಯೇ ಈ ಅದ್ವೈತದ, ಪರಮ ಸತ್ಯದ ಅರಿವುಂಟಾಗುತ್ತದೆ. ಇದನ್ನೇ 'ಪಾರಮಾರ್ಥಿಕ ಸತ್ತೆ' ಎನ್ನಲಾಗುತ್ತದೆ.

ಜ್ಞಾನಮಾರ್ಗ[ಬದಲಾಯಿಸಿ]

ಈ ಮಿಥ್ಯೆಯ ಅರಿವಾಗಿ ಸತ್ಯದ ಜ್ಞಾನವನ್ನು ಪಡೆಯುವುದೇ ಜೀವಿತದ ಉದ್ದೇಶವಾಗಿರತಕ್ಕದ್ದು. ವೇದಗಳ ಪೂರ್ವಕಾಂಡದಲ್ಲಿ ಉಲ್ಲೇಖವಿರುವ ಯಜ್ಞ, ಯಾಗ, ಹೋಮ, ಆಹ್ನಿಕ, ದೇವತೋಪಾಸನೆ ಮುಂತಾದ ಕರ್ಮಗಳೆಲ್ಲವೂ ಸಹ ಈ ಜ್ಞಾನ ಪ್ರಾಪ್ತಿಯ ಮಾರ್ಗದಲ್ಲಿ ಸಾಧನಗಳಷ್ಟೆ. ಪರಮ ಸಾಧನೆಗೆ ಈ ಎಲ್ಲ ವಿಹಿತ ಕರ್ಮಗಳೂ ಮೆಟ್ಟಿಲುಗಳಾಗಬೇಕು. ಆದರೆ ಪೂರ್ವಮೀಮಾಂಸಕರು ಪ್ರತಿಪಾದಿಸುವಂತೆ, ಇವೇ ಜೀವಿತದ ಉದ್ದೇಶವಲ್ಲ. ಮಾಯೆಯನ್ನು ಕಳಚಿ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯ ಸತ್ಯ ಜ್ಞಾನದ ಪ್ರಾಪ್ತಿಯೇ ಪರಮ ಪುರುಷಾರ್ಥವು. ಬ್ರಹ್ಮನೂ ತಾನೂ ಒಂದೇ ಎಂಬ ಜ್ಞಾನವುಂಟಾಗಿ ಸಚ್ಚಿದಾನಂದವನ್ನು ಅನುಭವಿಸುವ ಸ್ಥಿತಿಯೇ ವೇದಗಳು ಉಪದೇಶಿಸಿರುವ 'ಮೋಕ್ಷ ಸ್ಥಿತಿ'. ಈ ಅಭೇದ ಜ್ಞಾನವುಂಟಾದ ಮೇಲೆ, ಆತ್ಮವೆಂದಿಗೂ ಸಂಸಾರದ ಬಂಧನದೊಳಗೆ ಮತ್ತೆ ಸುಳಿಯಲಾರದು. ಇನ್ನೆಂದಿಗೂ ಹಿಂದೆ ಮರಳಲಾರದಂತಹ ದಿವ್ಯ ಸ್ಥಿತಿಯಿದು. ಹಾಗಾಗಿ ಮೋಕ್ಷ ಹೊಂದುವುದಕ್ಕೆ ಈ ಅದ್ವೈತ ಜ್ಞಾನ ಪ್ರಾಪ್ತಿಯೊಂದೇ ಮಾರ್ಗ.[೧][೨][೩]

ಮಹಾವಾಕ್ಯಗಳು[ಬದಲಾಯಿಸಿ]

ವೇದಗಳು ಬ್ರಹ್ಮಾತ್ಮೈಕ್ಯವನ್ನು ಪ್ರತಿಪಾದಿಸುತ್ತವೆ ಎಂಬುದನ್ನು ಈ ಕೆಳಗಿನ ನಾಲ್ಕು ಮಹಾವಾಕ್ಯಗಳಿಂದ ಹೇಳಲಾಗುತ್ತದೆ. ಒಂದೊಂದು ವಾಕ್ಯವನ್ನೂ ಒಂದೊಂದು ವೇದದ ಉಪನಿಷತ್ತಿನಿಂದ ಆರಿಸಲಾಗಿದೆ.

ಕ್ರ. ಸಂ. ವಾಕ್ಯ ಅರ್ಥ ಉಪನಿಷತ್ ವೇದ
೧. प्रज्ञानम ब्रह्म (ಪ್ರಜ್ಞಾನಮ್ ಬ್ರಹ್ಮ) "ಪ್ರಜ್ಞಾನವು ಬ್ರಹ್ಮವು" ಐತರೇಯ ಉಪನಿಷತ್ ಋಗ್ವೇದ
೨. अहम ब्रह्मास्मि (ಅಹಮ್ ಬ್ರಹ್ಮಾಸ್ಮಿ) "ನಾನು ಬ್ರಹ್ಮನಾಗಿರುವೆ" ಬೃಹದಾರಣ್ಯಕ ಉಪನಿಷತ್ ಯಜುರ್ವೇದ
೩. तत्त्त्वमसि (ತತ್ತ್ವಮಸಿ) "ಅದು ನೀನು ಆಗಿರುವೆ" ಛಾಂದೋಗ್ಯ ಉಪನಿಷತ್ ಸಾಮವೇದ
೪. अयमात्मा ब्रह्म (ಅಯಮಾತ್ಮಾ ಬ್ರಹ್ಮ) "ಈ ಆತ್ಮವು ಬ್ರಹ್ಮವು" ಮಾಂಡುಕ್ಯ ಉಪನಿಷತ್ ಅಥರ್ವವೇದ

ಆದಿ ಶಂಕರ ಮತ್ತು ಅದ್ವೈತ | ಆದಿ ಶಂಕರರು ಮತ್ತು ಅದ್ವೈತ

ನೋಡಿ[ಬದಲಾಯಿಸಿ]

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

  1. ಪಂಚ ಕೋಶ :- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು.
  2. ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ #ನಿರ್ಣಯ
  3. ಭಾರತೀಯ ತತ್ವಶಾಸ್ತ್ರ ಸಮೀಕ್ಷೆ
  4. ವೇದಗಳು

ಆಧಾರ[ಬದಲಾಯಿಸಿ]

೧. ಭಾರತೀಯ ತತ್ವ ಶಾಸ್ತ್ರ ಪರಿಚಯ ಲೇ. ಎಂ. ಪ್ರಭಾಕರ ಜೋಶಿ ಮತ್ತು ಎಂ.ಎಂ. ಹೆಗಡೆ ; ಎಂಜಿಸಿ ಕಾಲೇಜು ಸಿದ್ದಾಪುರ ಪ್ರೊ.ಎಂ.ಎ.ಹೆಗಡೆ
೨.ಬ್ರಹ್ಮಸೂತ್ರ ಭಾಷ್ಯ ನತ್ತು ಭಗವದ್ಗೀತಾ ಭಾಷ್ಯ (ಕನ್ನಡ ಅನುವಾದದಲ್ಲಿ)ಲೇಖಕರು: ಶ್ರೀ ಸಚ್ಚದಾನಂದ ಸರಸ್ವಿತೀ ಸ್ವಾಮಿಯವರು ಮತ್ತು ಪೂರ್ವಾಶ್ರಮ ನಾಮ -ಯಲ್ಲಂಬಳಸೆ ಸುಬ್ರಾಯ ಶರ್ಮಾ;ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕರ್ಯಾಲಯ ಹೊಳೆನರಸೀಪುರ, ಹಾಸನ ಜಿಲ್ಲೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.)
  3. ಬ್ರಹ್ಮಸೂತ್ರ ಭಾಷ್ಯ ನತ್ತು ಭಗವದ್ಗೀತಾ ಭಾಷ್ಯ (ಕನ್ನಡ ಅನುವಾದದಲ್ಲಿ)ಲೇಖಕರು: ಶ್ರೀ ಸಚ್ಚದಾನಂದ ಸರಸ್ವಿತೀ ಸ್ವಾಮಿಯವರು ಮತ್ತು ಪೂರ್ವಾಶ್ರಮ ನಾಮ -ಯಲ್ಲಂಬಳಸೆ ಸುಬ್ರಾಯ ಶರ್ಮಾ;ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕರ್ಯಾಲಯ ಹೊಳೆನರಸೀಪುರ, ಹಾಸನ ಜಿಲ್ಲೆ.
"https://kn.wikipedia.org/w/index.php?title=ಅದ್ವೈತ&oldid=1201413" ಇಂದ ಪಡೆಯಲ್ಪಟ್ಟಿದೆ